Ganesh procession accident in Hassan- Latest Updates. ಹಾಸನದಲ್ಲಿ 10 ಯುವಕರನ್ನು ಬಲಿಪಡೆದ ಕುಡುಕ ಚಾಲಕ; ರಾಜ್ಯದಲ್ಲಿ, ನಗರಗಳಲ್ಲಿ ಹೆಚ್ಚುತ್ತಿರುವ ಡ್ರಿಂಕ್‌ & ಡ್ರೈವ್‌; ಯಾವುದೇ ದಂಡ, ಶಿಕ್ಷೆಗೂ ಬಗ್ಗದ ಕುಡುಕ ಚಾಲಕರು; D&D ತಡೆಗೆ ಪೊಲೀಸರು, ಸರ್ಕಾರ ಮಾಡಬೇಕಾಗಿರೋದೇನು? 

  • ರಸ್ತೆಯಲ್ಲಿ ಮೆರವಣಿಗೆ ಆಯೋಜಿಸಿದವರು...
  • ರಸ್ತೆಯಲ್ಲಿ ಮೈಮರೆತು ಕುಣಿಯುತ್ತಿದ್ದವರು...
  • ರಸ್ತೆಯಲ್ಲಿ ಮೆರವಣಿಗೆಗೆ ಅನುಮತಿ ಕೊಟ್ಟವರು...
  • ರಸ್ತೆಯಲ್ಲಿ ಬಂದೋಬಸ್ತ್‌ ಮಾಡುತಿದ್ದವರು...
  • ರಸ್ತೆಯಲ್ಲಿ ಲಾರಿ ಓಡಿಸಿ, ಅಪಘಾತ ಮಾಡಿದವರು...
  • ಲಾರಿ ಡ್ರೈವರ್‌ಗೆ ಮದ್ಯ ಮಾರಾಟ ಮಾಡಿದವರು...
  • ರಾತ್ರಿ ಚೆಕ್ಕಿಂಗ್ ಮಾಡದೇ ಅಪಘಾತಕ್ಕೆ ಅನುವು ಮಾಡಿದವ್ರು...

ಮೇಲಿನ ಪಟ್ಟಿಯಲ್ಲಿ 10 ಜೀವಗಳನ್ನು ಬಲಿ ಪಡೆದವರು ಯಾರು?

ಹಾಸನ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೊಸಳೆ ಹೊಸಹಳ್ಳಿಯಲ್ಲಿ ಎಂದೂ ಕೇಳರಿಯದ ರೀತಿಯಲ್ಲಿ ಅಪಘಾತವಾಗಿದೆ. ಸಂಭ್ರಮದ ಕಾರ್ಯಕ್ರಮ ಸೂತಕಕ್ಕೆ ತಿರುಗಿದೆ. 10 ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ನಂಬಿದ್ದ ಕುಟುಂಬಗಳು ಬೀದಿಗೆ ಬಂದಿವೆ.

ಕಳೆದ ಜೂನ್‌ 30ರಂದು ಕುಡಿದ ಮತ್ತಿನಲ್ಲಿದ್ದ ಕ್ಯಾಂಟರ್ ಡ್ರೈವರ್‌ ಕಾರ್‌ವೊಂದಕ್ಕೆ ಗುದ್ದಿ ಕುಟುಂಬದ 4 ಮಂದಿಯ ಜೀವವನ್ನು ಬಲಿಪಡೆದಿದ್ದ ಘಟನೆ ಕುಣಿಗಲ್- ಮಾಗಡಿ ರಸ್ತೆಯಲ್ಲಿ ನಡೆದಿತ್ತು. ಕಳೆದ ಜೂನ್‌ನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದಾಗ, ಬೆಳ್ಳಂಬೆಳಗ್ಗೆ 58 ಶಾಲಾ ವಾಹನಗಳ ಚಾಲಕರು ಕುಡಿದು ಗಾಡಿ ಓಡಿಸುತ್ತಿದ್ದುದು ಪತ್ತೆಯಾಗಿತ್ತು.

ಇದೊಂದೆ ಅಲ್ಲ, ಇಂತಹ ಲೆಕ್ಕವಿಲ್ಲದಷ್ಟು ಅಪಘಾತಗಳು ಡ್ರಿಂಕ್ & ಡ್ರೈವ್‌ ಕಾರಣದಿಂದ ಈ ಹಿಂದೆ ನಡೆದಿವೆ, ನಡೆಯುತ್ತಿವೆ. ಒಂದು ಕುಡಿಯುವ ಚಟದ ಮುಂದೆ ಮನುಷ್ಯನ ಜೀವನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕುಡಿಯುವವನು ಹಾಳಾಗ್ ಹೋಗ್ಲಿ. , ಆದರೆ ಯಾವುದೇ ತಪ್ಪು ಮಾಡದ ಪಾದಾಚಾರಿಗಳು, ಇತರ ವಾಹನ ಸವಾರರು ಜೀವನ ಪರ್ಯಂತ ನರಳುವ ಪರಿಸ್ಥಿತಿ ನಾವೇಕೆ ನಿರ್ಮಿಸಿಕೊಂಡಿದ್ದೇವೆ?

ಕಾಟಾಚಾರ vs ಭ್ರಷ್ಟಾಚಾರ: ಬೆಂಗಳೂರಿನಲ್ಲಿ ಹೇಗಿದೆ ಪರಿಸ್ಥಿತಿ?

ಇಡೀ ಕರ್ನಾಟಕವನ್ನು ಪಕ್ಕಕ್ಕಿಡೋಣ, ಕೇವಲ ಬೆಂಗಳೂರಿನ ಉದಾಹರಣೆಯನ್ನು ತೆಗೆದುಕೊಳ್ಳೋಣ... ಪೊಲೀಸರು ಸಾಮಾನ್ಯವಾಗಿ ವೀಕಂಡ್‌ನಲ್ಲಿ, ನಿಗದಿತ ಸಮಯದಲ್ಲಿ, ನಿಗದಿತ ರೂಟ್‌ನಲ್ಲಿ ಮಾತ್ರ ಚೆಕ್ಕಿಂಗ್ ಮಾಡುತ್ತಾರೆ. ಪೊಲೀಸರ ಚೆಕ್ಕಿಂಗ್ ಪ್ಯಾಟರ್ನ್ ರೆಗ್ಯೂಲರ್ ಕುಡುಕ ಚಾಲಕರಿಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಹಾಗಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಕೇಸು ಹಾಕಿಸಿಕೊಳ್ಳುವವರ ಸಂಖ್ಯೆ ತೀರಾ ನಗಣ್ಯವೆಂದೇ ಹೇಳಬಹುದು.

2022ರಲ್ಲಿ 26371 ಕೇಸ್‌ ದಾಖಲಾಗಿದ್ದರೆ, 2023ರಲ್ಲಿ ಕೇವಲ 7053 ಕೇಸ್ ದಾಖಲಾಗಿದೆ. (ಫಿಸಿಕಲ್ ಚೆಕ್ಕಿಂಗ್ ಕಡಿಮೆ ಮಾಡಿದ ಪರಿಣಾಮ). 2024ರಲ್ಲಿ ಬೆಂಗ್ಳೂರಲ್ಲಿ ಒಟ್ಟು 21940 ಡ್ರಿಂಕ್ & ಡ್ರೈವ್‌ ಪ್ರಕರಣಗಳು ದಾಖಲಾಗಿವೆ. ಒಂದು ರಫ್‌ ಅವರೇಜ್‌ ಲೆಕ್ಕ ಹಾಕೋದಾದ್ರೆ, ಬೆಂಗಳೂರಿನ 53 ಸಂಚಾರ ಪೊಲೀಸ್‌ ಠಾಣೆಯಲ್ಲಿ ದಿನಕ್ಕೆ ದಾಖಲಾಗೋದು 60 ಡ್ರಿಂಕ್‌ & ಡ್ರೈವ್‌ ಪ್ರಕರಣಗಳು ಮಾತ್ರ. ಒಂದು ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 1.13 ಪ್ರಕರಣ!

ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯಿರುವ, 1.25 ಕೋಟಿ ವಾಹನಗಳಿರುವ, ಸಾವಿರಾರು ಬಾರ್, ಮದ್ಯದಂಗಡಿ, ಪಬ್‌ಗಳಿರುವ ಬೆಂಗಳೂರಿನಲ್ಲಿ ಬರೇ ಇಷ್ಟೇ ಮಂದಿ ಕುಡಿದು ವಾಹನ ಚಲಾಯಿಸಿದ್ದಾರೆ ಎಂದ್ರೆ ತಮಾಷೆಯ ಸಂಗತಿಯೇ ಸರಿ. ಇನ್ನು ಇಲಾಖೆಯಲ್ಲಿ ಭ್ರಷ್ಟ ಸಿಬ್ಬಂದಿಗಳು ಇಲ್ವೇ ಇಲ್ಲ, ಕಾರ್ಯಾಚರಣೆ ವೇಳೆ ನೂರಕ್ಕೆ ನೂರು ಕುಡುಕ ಚಾಲಕರಿಗೆ ದಂಡ ಹಾಕಲಾಗುತ್ತದೆ ಎಂದು ನಂಬುವ ಸಮಾಜದಲ್ಲಂತೂ ನಾವು ಜೀವಿಸುತ್ತಿಲ್ಲ.

ಹೆಸರೇಳಬಯಸದ ಖಾಸಗಿ ಬಸ್‌ ಆಪರೇಟರ್‌ ಪ್ರಕಾರ, ಪ್ರತಿ ರೂಟ್‌ನ ಪ್ರತಿ ಬಸ್‌ಗೆ ಪ್ರತಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಇಂತಿಷ್ಟು 'ಫೀ' ಪಾವತಿಸಬೇಕಾಗುತ್ತದೆ. ಅದು ನಗರವ್ಯಾಪ್ತಿಯಲ್ಲಿ ಬಸ್‌ಗಳ ಸುಗಮ ಸಂಚಾರಕ್ಕಾಗಿ ಫಿಕ್ಸ್‌ ಆಗಿರಬಹುದಾದ 'ಶುಲ್ಕ' ಎಂದು ಭಾವಿಸಿದರೆ ಭಾಗಶ: ಸತ್ಯ! ಆ ಶುಲ್ಕದ ಕೃಪೆಯಿಂದ ಬಸ್‌ ಆಪರೇಟರ್‌ಗಳಿಗೆ 'ಡ್ರಿಂಕ್ & ಡ್ರೈವ್‌ ಚೆಕ್ಕಿಂಗ್ ಕಾರ್ಯಾಚರಣೆಯ' ಮುನ್ಸೂಚನೆಯೂ ಸಿಗುತ್ತದೆ ಎಂಬುವುದು ಅವರಿಗೆ ಖುಷಿಯ ವಿಚಾರ! ಬಸ್‌ ಆಪರೇಟರ್‌ಗಳು ತಮ್ಮ ತಮ್ಮ ಬಸ್‌-ಟ್ರಕ್ ಡ್ರೈವರ್‌ಗಳಿಗೆ ಮಾಹಿತಿ ರವಾನಿಸುತ್ತಾರೆ, ಆ ದಿನ ನಿಯಮಕ್ಕೆ ಸೀಮಿತವಾದ 'ಎಣ್ಣೆ'ಯಲ್ಲೇ ಅಡ್ಜಸ್ಟ್‌ ಮಾಡಿಕೊಳ್ಳಬೇಕಾಗುತ್ತದೆ. ಸಂಬಂಧ ಇನ್ನೂ ಚೆನ್ನಾಗಿದ್ದರೆ, ಇನ್ನೂ 'ಉತ್ತಮ ಸೇವೆ' ಸಿಗುತ್ತದೆ, , ಆ ಕಂಪನಿಯ ಬಸ್‌/ಟ್ರಕ್‌ಗಳನ್ನು ಯಾರೂ ಚೆಕ್ಕಿಂಗ್‌ಗಾಗಿ ಅಡ್ಡಹಾಕೋದೇ ಇಲ್ಲ!

ಪ್ರತಿನಿತ್ಯ ಬೆಂಗಳೂರಿನಿಂದ ಮುಂಬೈ, ಚಿನ್ನೈ, ಮಂಗಳೂರು, ಕೇರಳ, ಹೈದ್ರಾಬಾದ್‌ ಕಡೆಗೆ ಹೋಗೋ ಸಾವಿರಾರು ಬಸ್‌/ಟ್ರಕ್‌ಗಳಿಗೆ ಎಷ್ಟು ಕಡೆ ಚೆಕ್ಕಿಂಗ್ ನಡೆಸಲಾಗುತ್ತೆ? ಎಷ್ಟು ಪ್ರಕರಣಗಳು ದಾಖಲಾಗುತ್ತವೆ? ಎಂಬುವುದನ್ನು ಸರ್ಕಾರ ಪ್ರತಿನಿತ್ಯ ಬಹಿರಂಗಪಡಿಸುವುದೇ?

ಲೈಸೆನ್ಸೇ ಇಲ್ಲ ಸಾರ್....! ದಂಡಕ್ಕೆ ಪ್ರತಿತಂತ್ರ!

ಇನ್ನು ದಂಡದ ವಿಷ್ಯಕ್ಕೆ ಬರೋದಾದ್ರೆ, 2024ರಲ್ಲಿ ಒಟ್ಟು 22.5 ಕೋಟಿ ದಂಡವನ್ನು ಬೆಂಗ್ಳೂರು ಪೊಲೀಸರು ವಸೂಲಿ ಮಾಡಿದ್ದಾರೆ. ಇವುಗಳ ಪೈಕಿ ಕೇವಲ ಶೇ.6 ರಷ್ಟು, ಅಂದ್ರೆ 1263 ಚಾಲಕರ ಡ್ರೈವಿಂಗ್‌ ಲೈಸೆನ್ಸ್‌ ರದ್ದುಪಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಅದೆಷ್ಟೋ ಕುಡುಕ ಚಾಲಕರು ಲೈಸೆನ್ಸ್‌ ರದ್ದಾಗುವ ಭೀತಿಯಿಂದ ತಮ್ಮ ಬಳಿ ಲೈಸೆನ್ಸೇ ಇಲ್ಲ ಎಂದು ತಪ್ಪಿಸಿಕೊಳ್ತಾರೆ. ಕುಡಿದು ಡ್ರೈವ್ ಮಾಡಿದ್ದಕ್ಕೆ 10 ಸಾವಿರ ದಂಡ, ಜೊತೆಗೆ ಲೈಸೆನ್ಸ್‌ ಇಲ್ಲದೇ ವಾಹನ ಚಾಲನೆ ಮಾಡಿದ್ದಕ್ಕೆ 2000 ರೂ. ಹೆಚ್ಚುವರಿ ದಂಡ ಪಾವತಿಸಿದ್ರೆ ಲೈಸೆನ್ಸ್‌ ಉಳಿಸ್ಕೋಬಹುದು ಎಂಬ ಸರಳ ಲೆಕ್ಕಾಚಾರ ಪೊಲೀಸರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನು ಪರರಾಜ್ಯದ ಲೈಸೆನ್ಸ್‌ ಹೋಲ್ಡರ್‌ಗಳಿದ್ದರೆ ಈ ಪ್ರಕ್ರಿಯೆಗಳು ಇನ್ನೂ ಕ್ಲಿಷ್ಟಕರವಾಗಿರುತ್ತವೆ. ಕಾನೂನು-ನಿಯಮಗಳಲ್ಲಿರುವ ಈ ಲೂಪ್‌ಹೋಲ್‌ಅನ್ನು ಸರಿಪಡಿಸುವ ತುರ್ತು ಅಗತ್ಯ ಇದೆ.

ಇಷ್ಟು ಮಾಡಿದ್ರೆ ಸಾಕೇ? ಕಠಿಣ ನಿಯಮಗಳು ಬೇಡ್ವೇ?

ಡ್ರಿಂಕ್ & ಡ್ರೈವ್‌ಗೆ 10 ಸಾವಿರ ದಂಡ, 6 ತಿಂಗಳು ಜೈಲು ಸಾಕೇ? ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿದ್ರೆ ಸಾಕೆ? ಅದಕ್ಕೆ ಪರಿಹಾರ ಏನು? ಇಲ್ಲಿ ಯಾವುದೇ ಜಂಗಲ್ ರಾಜ್‌ ತರ ಬುಲ್ಡೋಜರ್ ಹತ್ತಿಸುವ ಅಗತ್ಯ ಇಲ್ಲ. ಕಠಿಣ ನಿಯಮಗಳನ್ನು ಜಾರಿಗೆ ತಂದು ಪ್ರಾಮಾಣಿಕತೆಯಿಂದ ಅನುಷ್ಠಾನಗೊಳಿಸಿದರೆ ಸಾಕು.

  • ರೆಗ್ಯೂಲರ್‌ ಚೆಕ್ಕಿಂಗ್, ಪ್ರತಿದಿನ ಅದರ ವಿವರ ಬಹಿರಂಗಪಡಿಸಿಸುವುದು
  • ಡ್ರಿಂಕ್‌ & ಡ್ರೈವ್‌ ಕಾರ್ಯಾಚರಣೆಗಾಗಿ ವಿಶೇಷ ಪಡೆಯನ್ನು ರಚಿಸಿಸುವುದು
  • ದಂಡ ಹೆಚ್ಚಿಸಿ ಕಾರ್ಯಾಚರಣೆಗಾಗುವ ಖರ್ಚು, ಸಿಬ್ಬಂದಿ ಸಂಬಳ ಹೊಂದಿಸುವುದು
  • ಲೈಸೆನ್ಸ್ ಇಲ್ಲವೆಂದರೆ ಆಧಾರ್ ಲಿಂಕ್ ಮೂಲಕ ಪತ್ತೆ ಹಚ್ಚಿ ರದ್ದುಪಡಿಸುವುದು
  • ಆರೋಪಿಗಳು ಸರ್ಕಾರಿ ಫಲಾನುಭವಿಗಳಾಗಿದ್ದರೆ ಸೌಲಭ್ಯ ರದ್ದುಪಡಿಸುವುದು
  • ಸರ್ಕಾರಿ ನೌಕರನಾಗಿದ್ದರೆ ಅಮಾನತುಗೊಳಿಸುವುದು, ಟರ್ಮಿನೇಟ್‌ ಮಾಡುವುದು
  • ಅಪಘಾತದಿಂದಾಗುವ ನಷ್ಟ, ಖರ್ಚುಗಳನ್ನು ಆ ಚಾಲಕ/ಕಂಪನಿ ಭರಿಸುವುದು

ಕುಡುಕ ಚಾಲಕನ ತಪ್ಪಿಗೆ ಪರಿಹಾರ ಕೊಡಲು ತೆರಿಗೆ ಹಣ ಬೇಕೆ?

ಇಂಥ ದೊಡ್ಡ ದುರಂತ ಸಂಭವಿಸಿದಾಗ, ಮಾಧ್ಯಮದಲ್ಲಿ ಸುದ್ದಿಯಾದಾಗ ಸರ್ಕಾರಗಳು ತಕ್ಷಣ ಪರಿಹಾರ ಘೋಷಿಸುತ್ತವೆ. ಸುದ್ದಿಯಾಗದ ಇಂಥ ಪ್ರಕರಣಗಳಿಗೆ ಸರ್ಕಾರ ಪರಿಹಾರ ಕೊಡುತ್ತಾ? ಇತರ ಅಪಘಾತಗಳಾದಾಗ ಪರಿಹಾರ ಘೋಷಿಸಿವುದು ಸರಿ, ಆದರೆ ಯಾರೋ ಒಬ್ಬ ಕುಡುಕ ವಾಹನ ಚಲಾಯಿಸಿ ಜನರನ್ನ ಕೊಂದ್ರೆ ತೆರಿಗೆದಾರರ ಹಣದಿಂದ ಸರ್ಕಾರ ಯಾಕೆ ಪರಿಹಾರ ಕೊಡ್ಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಆ ಚಾಲಕ, ಆತನ ವಿಮೆ, ಆತನ ಕಂಪನಿ (ಟ್ರಕ್/ ಬಸ್‌)ನವರಿಂದ ಯಾಕೆ ಆ ಪರಿಹಾರದ ವಸೂಲಿ ಮಾಡಬಾರದು?

ಅದೇ ಪರಿಹಾರದ ದುಡ್ಡನ್ನು ರಾತ್ರಿ ಚೆಕ್ಕಿಂಗ್ ಕಾರ್ಯಾಚರಣೆ ಮಾಡುವ ವ್ಯವಸ್ಥೆಗೆ/ ಪೊಲೀಸ್‌ ಸಿಬ್ಬಂದಿಗೆ ಕೊಟ್ಟಿದಿದ್ದರೆ ಅದೆಷ್ಟೋ ಜೀವಗಳನ್ನಾದರೂ ಉಳಿಸಬಹುದಿತ್ತಲ್ವಾ? ಅಥವಾ ಇನ್ಮುಂದೆಯಾದರೂ ಸರ್ಕಾರ ಈ ಕಡೆ ಗಮನ ಹರಿಸಬಹುದಲ್ವಾ? ಟ್ರಾಫಿಕ್ ಮ್ಯಾನೆಜ್‌ಮೆಂಟ್‌ನಲ್ಲಿ ಡಾಕ್ಟರೇಟ್‌ ಮಾಡಿರುವ ರಾಜ್ಯದ ನೂತನ ಡಿಜಿ & ಐಜಿಪಿ ಡಾ. ಸಲೀಮ್‌ ಅವರು ಈ ಬಗ್ಗೆ ಚಿಂತನೆ ನಡೆಸುತ್ತಾರೆಂಬ ಆಶಯದೊಂದಿಗೆ...