ಸರ್ಕಾರದ ಕೆಲಸಗಳು ಜನರ ನಿರೀಕ್ಷೆಗೆ ಅನುಗುಣವಾಗಿ ವೇಗವಾಗಿ ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕು ಇಲ್ಲವಾದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಿಪಟೂರು (ಸೆ.12): ಸರ್ಕಾರದ ಕೆಲಸಗಳು ಜನರ ನಿರೀಕ್ಷೆಗೆ ಅನುಗುಣವಾಗಿ ವೇಗವಾಗಿ ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕು ಇಲ್ಲವಾದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ನೇರವಾಗಿ ಎಚ್ಚರಿಕೆ ನೀಡಿದರು. ನಗರದ ಆಡಳಿತಸೌಧ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾವು ಪರಿಶೀಲನೆ ಮಾಡಿದ ಪ್ರಕಾರ ಸರ್ಕಾರದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಕೆಲಸಗಳೂ ನಿಂತಿಲ್ಲ.
ಸರ್ಕಾರ ರಾಜ್ಯದಾದ್ಯಂತ ಪರಿಶೀಲನೆ ಮಾಡಿ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ. ಗುತ್ತಿಗೆದಾರರು ವಹಿಸಿಕೊಂಡ ಕೆಲಸವನ್ನು ನಿಗದಿತ ಸಮಯದೊಳಗೆ ಪೂರೈಸುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಕೆಲಸ ವಿಳಂಬ ಮಾಡಿದರೆ ಅಥವಾ ಸರಿಯಾಗಿ ಕೆಲಸ ನಿರ್ವಹಣೆ ಮಾಡದಿದ್ದರೆ ಅಧಿಕಾರಿಗಳು ಕ್ರಮ ವಹಿಸಿ ಅಂತಹ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್ ಮಾಡಬೇಕು ಆಗ ಕೆಲಸಕ್ಕೆ ವೇಗ ಸಿಗುತ್ತದೆ ಎಂದರು.
ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ
ನಗರವನ್ನು ಸ್ವಚ್ಛವಾಗಿಡಬೇಕು ಮತ್ತು ಅಧಿಕಾರಿಗಳು ಕುದ್ದು ಗ್ರಾಮೀಣ ಪ್ರದೇಶದ ರೈತರ ಗ್ರಾಮಕ್ಕೆ ಮತ್ತು ಜಮೀನುಗಳಿಗೆ ಭೇಟಿ ನೀಡಿದಾಗ, ಸಮಸ್ಯೆಗಳ ನಿವಾರಣೆಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ. ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಸಣ್ಣ ನೀರಾವರಿ, ಜೆಜೆಎಂ, ಪಿಡಬ್ಲುಡಿ, ನಗರಸಭೆ ಯಂತಹ ಕೆಲ ಇಲಾಖೆಗಳ ಬಗ್ಗೆ ಮಾತ್ರ ಪ್ರಗತಿ ಪರಿಶೀಲಿಸಿ ಮತ್ತೊಮ್ಮೆ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅಗತ್ಯವಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕರಲ ಇಲಾಖೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಷೊಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ನಗರಸಭಾ ಅಧ್ಯಕ್ಷೆ ಯಮುನ, ಸಹಾಯಕ ಪೊಲೀಸ್ ಅಧೀಕ್ಷಕ ಯಶ್‌ಕುಮಾರ್ ಶರ್ಮ, ತಹಸಿಲ್ದಾರ್ ಮೋಹನ್‌ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ತಿಪಟೂರು ಉಪವಿಭಾಗವಾಗಿದ್ದು ಮೂರು ತಾಲೂಕುಗಳಿಗೆ ಕೇಂದ್ರವಾಗಿದೆ. ಆದರೆ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇರುವ ಒಂದು ಪ್ರಮುಖ ಮುಖ್ಯರಸ್ತೆಯನ್ನೇ ಸ್ವಚ್ಛವಾಗಿ ಇಟ್ಟಿಲ್ಲ. ನಗರದ ಸೌಂದರ್ಯದ ಬಗ್ಗೆ ಯಾವುದೇ ಯೋಜನೆ ರೂಪಿಸಿಲ್ಲ. ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಯಾವುದೇ ಒಂದು ಗಿಡ-ಮರ ಕಾಣುತ್ತಿಲ್ಲ. ಯಾವಾಗ ಕೇಳಿದರೂ ಏನಾದರೊಂದು ನೆಪ ಹೇಳುತ್ತೀರಿ ಎಂದು ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮೇಲೆ ಸಚಿವ ಜಿ.ಪರಮೇಶ್ವರ್ ಹರಿಹಾಯ್ದರು. ಶಾಸಕ ಕೆ.ಷಡಕ್ಷರಿಯವರ ದೂರದೃಷ್ಠಿಯಿಂದ ಇಡೀ ತಾಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಿಲ್ಲೆಯಲ್ಲಿಯೇ ಅತಿದೊಡ್ಡ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಅನುಷ್ಠಾನ ಹಂತಕ್ಕೆ ತಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. - ಡಾ. ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರು.
