2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಆನೆಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಮೃತರ ಮಕ್ಕಳು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಎಸ್ಐಟಿ ತನಿಖೆ ಮರುಜೀವಂತಗೊಂಡಿದೆ.

ಮಂಗಳೂರು: ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಆನೆಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಭೀಕರ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂಧಿದೆ. ಈ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗದೇ, ಆರೋಪಿಗಳು ಇಂದಿಗೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಮೃತರ ಕುಟುಂಬಸ್ಥರು ಈಗ ಮತ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಪ್ರದೇಶದಲ್ಲಿ ಈ ಅಮಾನುಷ ಎರಡು ಹ8ತ್ಯೆ ನಡೆದಿತ್ತು. ಆ ಸಂದರ್ಭದಲ್ಲಿ, ನಾರಾಯಣ ಹಾಗೂ ಅವರ ಸಹೋದರಿ ಯಮುನಾ ಅವರನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆಗೈದಿದ್ದರು. ಈ ಘಟನೆ ಆ ಸಮಯದಲ್ಲಿ ದೊಡ್ಡ ಸದ್ದು ಮಾಡಿದ್ದರೂ, ಇಂದಿಗೂ ನಿಜವಾದ ಆರೋಪಿಗಳು ಯಾರೆಂಬುದು ನಿಗೂಢವಾಗಿದೆ. ಈ ಪ್ರಕರಣದಲ್ಲಿ ಮೃತ ನಾರಾಯಣ ಅವರ ಮಕ್ಕಳಾದ ಗಣೇಶ್ ಮತ್ತು ಭಾರತಿ ತಮ್ಮ ಕುಟುಂಬಕ್ಕೆ ನ್ಯಾಯ ದೊರಕಲೆಂದು ಮುಂದಾಗಿದ್ದಾರೆ. ಗಣೇಶ್ ತಮ್ಮ ಸಹೋದರಿಯೊಂದಿಗೆ ಸೇರಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ಅಧಿಕೃತ ದೂರು ಸಲ್ಲಿಸಿದ್ದಾರೆ.

ನಾರಾಯಣ ಮತ್ತು ಯಮುನಾ ಅವರನ್ನು ಭೀಕರ ರೀತಿಯಲ್ಲಿ ಹತ್ಯೆ ಮಾಡಲಾಗಿದ್ದರೂ, ಇಷ್ಟು ವರ್ಷ ಕಳೆದರೂ ನ್ಯಾಯ ಸಿಗದಿರುವುದು ಕುಟುಂಬಕ್ಕೆ ತೀವ್ರ ದುಃಖ ತಂದಿದೆ. ಮಕ್ಕಳಾದ ಗಣೇಶ್ ಮತ್ತು ಭಾರತಿ, "ಅಪ್ಪ-ಅಮ್ಮನ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ. ಈ ಪ್ರಕರಣವನ್ನು ಮರುಜೀವಂತಗೊಳಿಸಿ ತನಿಖೆ ನಡೆಸುವ ಹೊಣೆಗಾರಿಕೆಯನ್ನು ಎಸ್ಐಟಿ ಈಗ ಹೊತ್ತಿದೆ. ಹಳೆಯ ಸುಳಿವುಗಳು, ಸಾಕ್ಷ್ಯಾಧಾರಗಳು ಮತ್ತು ಕುಟುಂಬದ ಹೇಳಿಕೆಗಳನ್ನು ಆಧರಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

2012ರಲ್ಲಿ ನಡೆದಿದ್ದ ಈ ಅಮಾನುಷ ಎರಡು ಕೊಲೆ ಪ್ರಕರಣ ಇದೀಗ ಮತ್ತೆ ಬೆಳಕಿಗೆ ಬಂದಿದೆ. ಆನೆಮಾವುತ ನಾರಾಯಣ ಮತ್ತು ಯಮುನಾ ಹ8ತ್ಯೆಗೆ ಕಾರಣರಾದವರು ಕಾನೂನಿನ ಬಲೆಗೆ ಸಿಲುಕಬೇಕೆಂಬುದು ಕುಟುಂಬದ ಏಕೈಕ ಬೇಡಿಕೆ.