ಪುತ್ತೂರಿನಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸುವುದಾಗಿ ಘೋಷಿಸಿದರು. ಸಮಾಜದಲ್ಲಿ ಸಮಾನತೆ, ಕೋಮು ಸೌಹಾರ್ದತೆ ಕಾಪಾಡುವ ಅಗತ್ಯವನ್ನು ಒತ್ತಿಹೇಳಿದರು.

ಪುತ್ತೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುತ್ತೂರು ತಾಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ಅಗತ್ಯತೆಯ ಕುರಿತು ಸವಿಸ್ತಾರವಾಗಿ ಮಾತನಾಡಿದರು. “ನಾನು ‘ಅಶೋಕ ಜನಮನ’ ಕಾರ್ಯಕ್ರಮವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಶಾಸಕರಾಗಿ ಅಶೋಕ್ ರೈ ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಟ್ರಸ್ಟ್ ಮೂಲಕ ಸಮಾಜದ ಬಡವರಿಗೆ ದೀಪಾವಳಿ ಹಿನ್ನಲೆಯಲ್ಲಿ ವಸ್ತ್ರದಾನ ಮಾಡುವಂತಹ ಒಳ್ಳೆಯ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಕಾರ್ಯ ಇಂದು ಒಂದು ಲಕ್ಷ ಜನರಿಗೆ ವಿಸ್ತರಿಸಲಾಗಿದೆ. ಅಶೋಕ್ ರೈ ಅವರು ಸಮಾಜದ ಶ್ರೀಮಂತರಿಗೆ ಮಾರ್ಗದರ್ಶಕರಾಗಲಿ,” ಮನುಷ್ಯನು ಗಳಿಸಿದ ಸಂಪತ್ತನ್ನು ನಿರ್ಗತಿಕರೊಂದಿಗೆ ಹಂಚಿಕೊಳ್ಳುವುದು ಅತ್ಯಂತ ಪವಿತ್ರ ಕೆಲಸ ಎಂದು ಹೇಳಿದರು.

“ನಮ್ಮ ಸಮಾಜದಲ್ಲಿ ಶ್ರೀಮಂತರು, ಬಡವರು, ಮೇಲ್ಜಾತಿ–ಕೆಳಜಾತಿಯವರು ಇದ್ದಾರೆ. ಸಮಾನತೆಯ ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೂ ಸಹಾಯ ಮಾಡಬೇಕು. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹದ ಮಹತ್ವವನ್ನು ಹೇಳಿದ್ದಾರೆ. ನಮ್ಮಲ್ಲಿ ಅಸಮಾನತೆ ಮತ್ತು ತಾರತಮ್ಯ ಇದೆ — ಇದನ್ನು ದೂರ ಮಾಡಿ ಸಮ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಅವರು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಕಾರ್ಯ ಆರಂಭಿಸಿರುವುದಾಗಿ ತಿಳಿಸಿದ್ದಾರೆ.ಸಂವಿಧಾನ ಅರಿಯದೇ ಇದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಧರ್ಮಗಳು ದ್ವೇಷವನ್ನಲ್ಲ, ಪ್ರೀತಿಯನ್ನೇ ಬೋಧಿಸುತ್ತವೆ

“ನಮ್ಮ ದೇಶದಲ್ಲಿ ವಿವಿಧ ಧರ್ಮಗಳು ಇವೆ. ಯಾವ ಧರ್ಮವೂ ದ್ವೇಷ ಮಾಡು ಎಂದು ಹೇಳುವುದಿಲ್ಲ. ಪ್ರತಿಯೊಬ್ಬನನ್ನೂ ಪ್ರೀತಿಸು ಎಂದು ಹೇಳುತ್ತದೆ. ವೈವಿಧ್ಯತೆಯಲ್ಲೇ ಏಕತೆ ಮಾಡಿಕೊಳ್ಳಬೇಕು. ಸರ್ವಧರ್ಮ ಶಾಂತಿ ತೋಟದ ಬದಲು ದ್ವೇಷ ಮತ್ತು ಕಚ್ಚಾಟ ಇರಬಾರದು,” ಎಂದು ಒತ್ತಿಹೇಳಿದರು.

“ಕೆಲವರು ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ ಎಂದು ಟೀಕೆ ಮಾಡುತ್ತಾರೆ. ಹಣ ಇರದಿದ್ದರೆ ಪುತ್ತೂರಿಗೆ ಮೆಡಿಕಲ್ ಕಾಲೇಜು ನೀಡಲು ಸಾಧ್ಯವಾಗುತ್ತಿತ್ತಾ? ಮೋದಿ ಅವರು ರಾಜಸ್ಥಾನದಲ್ಲಿ ಗ್ಯಾರಂಟಿ ಯೋಜನೆ ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ದಿವಾಳಿ ಆಗಿದೆಯಾ? ಆಗಲಿಲ್ಲ, ಆಗುವುದಿಲ್ಲವೂ,” ಎಂದು ಸ್ಪಷ್ಟಪಡಿಸಿದರು. ಮುಂದಿನ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ನೀಡುವಂತೆ ಜನರನ್ನು ಕೋರಿದರು. ನುಡಿದಂತೆ ನಡೆದುಕೊಂಡಿದ್ದೇವೆ, ಹೀಗಾಗಿ ಕೇಳುವ ಹಕ್ಕು ನಮಗಿದೆ ಎಂದರು.

ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಅಶೋಕ್ ರೈ ಅವರು ಮೆಡಿಕಲ್ ಕಾಲೇಜು ಕೇಳಿದ್ದರು. ಎಷ್ಟೇ ವೆಚ್ಚವಾದರೂ ಪುತ್ತೂರಿನಲ್ಲಿ ಒಂದು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ನಾನು ಮುಖ್ಯಮಂತ್ರಿಯಾಗಿ ಇರುವಾಗ ಬಡವರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.

ಕೇಂದ್ರದ ಜಿಎಸ್ಟಿ ನೀತಿಯಿಂದ ರಾಜ್ಯಕ್ಕೆ ನಷ್ಟ , ಅವರು ಕೇಂದ್ರ ಸರ್ಕಾರದ ಜಿಎಸ್ಟಿ ನೀತಿಗಳ ಕುರಿತು ಟೀಕಿಸಿ, ಜಿಎಸ್ಟಿಯನ್ನು ಜಾರಿಗೆ ತಂದದ್ದು ಮೋದಿ ಸರ್ಕಾರವೇ. ಆದರೆ ಈಗ ಅದನ್ನೇ ಕಡಿಮೆ ಮಾಡಿ ನಮ್ಮ ಬೆನ್ನಿಗೆ ತಟ್ಟುತ್ತಿದ್ದಾರೆ. ಇದರ ಪರಿಣಾಮವಾಗಿ ಕರ್ನಾಟಕ ಸರ್ಕಾರಕ್ಕೆ 15,000 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಹೇಳಿದರು.

ಕೋಮು ಸೌಹಾರ್ದ ಕಾಪಾಡಬೇಕು

ಕೋಮು ಸೌಹಾರ್ದ ಹಾಳು ಮಾಡಿದ್ದು ಯಾರು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕೋಮು ಸೌಹಾರ್ದತೆ ಇದ್ದರೆ ರಾಜ್ಯ ಮತ್ತು ಜಿಲ್ಲೆ ಅಭಿವೃದ್ಧಿಯಾಗುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡಲು ವಿಶೇಷ ಗಮನ ನೀಡಬೇಕು. ಸುಳ್ಳು ಹೇಳುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.