ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ತುಮಕೂರಿನ ಮಹಿಳೆಯೊಬ್ಬರು ಮೃತಪಟ್ಟರೆ, ಮತ್ತೊಂದೆಡೆ ಬೈಕ್‌ಗಳ ಡಿಕ್ಕಿಯಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ಚಿಕ್ಕಬಳ್ಳಾಪುರ (ಅ.03): ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಮಂತ್ರಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ಕಾರು, ಚಿಕ್ಕಬಳ್ಳಾಪುರದ ಬಳಿ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಲ್ಪತರು ನಾಡು ತುಮಕೂರಿನ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ.
ಜಿಲ್ಲೆಯ ಗುಡಿಬಂಡೆ ತಾಲ್ಲೂಕುನಲ್ಲಿ ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ ಸರಣಿ ಅಪಘಾತಗಳು ರಸ್ತೆ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿವೆ.
ಲಾರಿ-ಕಾರು ಭೀಕರ ಡಿಕ್ಕಿ ಮಂತ್ರಾಲಯ ಭಕ್ತೆ ಸಾವು: ಮೊದಲ ದುರಂತವು ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. ಮಂತ್ರಾಲಯಕ್ಕೆ ಹೋಗಿ, ಬಳಿಕ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಇನ್ನೋವಾ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ನಿವಾಸಿ, ಮಂತ್ರಾಲಯದ ಭಕ್ತೆ ನಂದಿನಿ (35) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕಾರಿನಲ್ಲಿ ಒಟ್ಟು ಪ್ರಯಾಣಿಸುತ್ತಿದ್ದ 6 ಜನರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂತ್ರಾಲಯದ ಯಾತ್ರೆ ಮುಗಿಸಿ ಸಂತೋಷದಿಂದ ಮನೆಗೆ ಮರಳುತ್ತಿದ್ದ ಭಕ್ತರ ಕುಟುಂಬಕ್ಕೆ ಈ ಅಪಘಾತದ ರೂಪದಲ್ಲಿ ಸಾವಿನ ಕರೆಯು ಬಂದಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೈಕ್‌ಗಳ ನಡುವೆ ಡಿಕ್ಕಿ 19ರ ಯುವಕ ಸ್ಥಳದಲ್ಲೇ ಸಾವು:
ಮತ್ತೊಂದು ದುರಂತವು ಇದೇ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಕ್ರಾಸ್ ಬಳಿ ಸಂಭವಿಸಿದೆ. ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ, ಕೊಪ್ಪಕಾಟೇನಹಳ್ಳಿಯ ನಿವಾಸಿ ಶ್ರೀನಿವಾಸ (19) ಎಂಬ ಯುವಕನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶ್ರೀನಿವಾಸನು ಗುಡಿಬಂಡೆ ಕಡೆಯಿಂದ ಕೊಂಡರೆಡ್ಡಿಹಳ್ಳಿ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಬೈಕ್‌ನಲ್ಲಿ ಶ್ರೀನಿವಾಸನ ಜೊತೆ ಪ್ರಯಾಣಿಸುತ್ತಿದ್ದ ಆತನ ಸ್ನೇಹಿತ ನಾರಾಯಣಸ್ವಾಮಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರಿಂದ ಪ್ರಕರಣ ದಾಖಲು:
ಈ ಎರಡೂ ಭೀಕರ ಅಪಘಾತಗಳ ಮಾಹಿತಿ ತಿಳಿಯುತ್ತಿದ್ದಂತೆ, ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡೂ ಪ್ರಕರಣಗಳನ್ನು ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಿಸಿಕೊಂಡು, ಅಪಘಾತಕ್ಕೆ ನಿಖರ ಕಾರಣಗಳೇನು ಮತ್ತು ಯಾರ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ರಸ್ತೆಗಳಲ್ಲಿನ ಅತಿಯಾದ ವೇಗ ಮತ್ತು ಅಜಾಗರೂಕತೆ ಇಂತಹ ಪ್ರಾಣಹಾನಿಗೆ ಕಾರಣವಾಗುತ್ತಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
