ಬೆಳಗಾವಿಯಲ್ಲಿ ನಡೆದ ರಾಜಕೀಯ ಸಮಾವೇಶದ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಖಾಸಗಿ ದೂರು ದಾಖಲಿಸಿದ್ದಾರೆ. ಪ್ರಕರಣವು ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದೆ.
ಬೆಳಗಾವಿಯಲ್ಲಿ ನಡೆದ ರಾಜಕೀಯ ಸಮಾವೇಶದ ವೇಳೆ ನಡೆದ ಘಟನೆಯೊಂದು ಇದೀಗ ದೊಡ್ಡ ಕಾನೂನು ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ FIR ದಾಖಲಿಸಬೇಕೆಂದು ಕೋರಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ. ಜೂನ್ 6, 2025 ರಂದು ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯುತ್ತಿತ್ತು. ಈ ಸಮಾವೇಶದ ವೇಳೆ ಅಂದಿನ ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಕರ್ತವ್ಯ ನಿರತರಾಗಿದ್ದರು. ಸಮವಸ್ತ್ರ ತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆಯೇ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ ಘಟನೆ ನಡೆದಿದೆ ಎನ್ನುವುದು ದೂರುದಾರರ ಆರೋಪ.
ದೂರು ಸ್ವೀಕರಿಸದ ಪೊಲೀಸ್ ಠಾಣೆ
ಈ ಘಟನೆ ಸಂಬಂಧ ಭೀಮಪ್ಪ ಗಡಾದ್ ಅವರು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೂ, ಪೊಲೀಸರು FIR ದಾಖಲಿಸಲು ನಿರಾಕರಿಸಿದ್ದರು. ಇದು “ಮೂರನೇ ವ್ಯಕ್ತಿ ನೀಡಿದ ದೂರು” ಎಂದು ಪೊಲೀಸರ ಉತ್ತರವಾಗಿತ್ತು. ಹೀಗಾಗಿ FIR ದಾಖಲಿಸದ ಹಿನ್ನೆಲೆಯಲ್ಲಿ ಭೀಮಪ್ಪ ಗಡಾದ್ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಕೆ
ಭೀಮಪ್ಪ ಗಡಾದ್ ಅವರು BNS ಕಲಂ 132 ಅಡಿಯಲ್ಲಿ FIR ದಾಖಲಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಈ ಅರ್ಜಿಯೊಂದಿಗೆ ಸಂಬಂಧಿತ ವೀಡಿಯೋ ದೃಶ್ಯಗಳು, ಫೋಟೋಗಳು ಹಾಗೂ ಮಾಧ್ಯಮ ವರದಿಗಳ ದಾಖಲೆಗಳು ಕೂಡಾ ಲಿಂಕ್ ಮಾಡಲಾಗಿದೆ.
ಈ ದೂರು ಸ್ವೀಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಕ್ಟೋಬರ್ 6, 2025 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಸದ್ಯಕ್ಕೆ, ಈ ಪ್ರಕರಣದಲ್ಲಿ FIR ದಾಖಲಿಸಬೇಕೇ? ಅಥವಾ ಇಲ್ಲವೇ? ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಪ್ರಕರಣ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
