ಧರ್ಮಸ್ಥಳದ ಅರಣ್ಯದಿಂದ ಅನುಮತಿಯಿಲ್ಲದೆ ಬುರುಡೆ ತಂದ ಅನಾಮಿಕನ ವಿರುದ್ಧ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ. ಬುರುಡೆ ತೆಗೆಯಲು ಅನುಮತಿ ನೀಡಿದವರು ಯಾರು, ತನಿಖೆ ಏಕೆ ನಡೆದಿಲ್ಲ ಎಂದು ಶಾಸಕರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು (ಆ.18): ಅನುಮತಿಯಿಲ್ಲದೆ ಧರ್ಮಸ್ಥಳದ ಅರಣ್ಯದಲ್ಲಿ ಬುರುಡೆ ತೆಗೆದುಕೊಂಡು ಬಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕನ ಮೇಲೆ ಸರ್ಕಾರ ಈವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷದ ನಾಯಕರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ಮೇಲೆ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾಹಿತಿ ನೀಡಿದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅನುಮತಿಯಿಲ್ಲದೆ ಶವದ ಬುರುಡೆ ತಂದ ಅನಾಮಿಕನ ಮೇಲೆ ಯಾವಾಗ ಕ್ರಮ ಆಗಲಿದೆ ಎಂದು ಪ್ರಶ್ನೆ ಮಾಡಿದರು.

ಅನಾಮಿಕ ಮೊದಲ ದಿನ ಬರುವಾಗ ಸಿನಿಮಾ ಟ್ರೇಲರ್‌ ತರ ಬುರುಡೆ ಹಿಡಿದುಕೊಂಡು ಬಂದ. ಬುರುಡೆ ಬಂದ ತಕ್ಷಣ ಎಲ್ಲರೂ ದಂಗಾಗಿ ಹೋದರು. ಬುರುಡೆಯನ್ನೇ ತಂದಿದ್ದಾನೆ ಎಂದ ಮೇಲೆ ಆತ ಎಷ್ಟು ಹೆಣ ತೋರಿಸಬಹುದು ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಆದರೆ, ಆತ ಬುರುಡೆ ತಂದಿದ್ದು ಹೇಗೆ ಅನ್ನೋದನ್ನ ಯಾರೂ ಪ್ರಶ್ನೆ ಮಾಡಲಿಲ್ಲ. ಇಲ್ಲಿರುವ ಎಲ್ಲರಿಗೂ ಕಾನೂನು ಗೊತ್ತಿದೆ. ಒಂದು ಹೆಣವನ್ನು ಹೂತ ಬಳಿಕ ಅದನ್ನು ಹೊರತೆಗೆಯಲು ಅನುಮತಿ ಇಲ್ಲ. ಕಾನೂನು ಪ್ರಕಾರ ಈ ಅಧಿಕಾರವೇ ಇಲ್ಲ. ಹಾಗೇನಾದರೂ ತೆಗಯಬೇಕಾದರೆ, ತಹಶೀಲ್ದಾರರು ಹೋಗಬೇಕು. ಕೋರ್ಟ್‌ ಆದೇಶ ಮಾಡಬೇಕು. ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾಗಳನ್ನೆಲ್ಲಾ ಹಾಕಬೇಕು. ಆದ್ರೆ ಇವರು ಹೇಗೆ ತೆಗೆದುಕೊಂಡು ಬಂದ ಅಂತಾ ಯಾರೂ ಕೇಳಿಲ್ಲ. ಯಾಕೆ ಸರ್ಕಾರ ಇದನ್ನ ಪ್ರಶ್ನೆ ಮಾಡಲಿಲ್ಲ.

ಜವಾಬ್ದಾರಿಯುತ ಸರ್ಕಾರ ಆಗಿದ್ರೆ, ಇದನ್ನ ಪ್ರಶ್ನೆ ಮಾಡಿ ಅರೆಸ್ಟ್‌ ಮಾಡಬೇಕಿತ್ತು. ಮೊದಲು ಬುರುಡೆ ಎಲ್ಲಿಂದ ತಂದೆ ಅದನ್ನು ತೆಗೆದಿದ್ದೇಕೆ ಎಂದು ಎಸ್‌ಐಟಿ ಪ್ರಶ್ನೆ ಮಾಡಬೇಕಿತ್ತು. ಆದರೆ, ಎಸ್‌ಐಟಿ ಅವನು ಕರೆದಲ್ಲೆಲ್ಲಾ ಹೋಗಿ ದಡ ದಡ ಅಂತಾ ಹೋಗ್ತಿತ್ತು. ಅವನ ಬುರುಡೆಯನ್ನೇ ಹಿಡಿದಿದ್ದರೆ, ಆತ ಬುರುಡೆ ಬಿಡ್ತಾ ಇದ್ದಾನಾ? ಇಲ್ವಾ ಅಂತಾ ಗೊತ್ತಾಗ್ತಿತ್ತು ಎಂದು ಹೇಳಿದರು. ಆದರೆ, ನೀವು ಆ ಬುರುಡೆಯನ್ನೇ ಬಿಟ್ಟುಬಿಟ್ಟಿರಿ ಎಂದಿದ್ದಾರೆ.

ಇದೇ ಬಗ್ಗೆ ಮಾತನಾಡಿದ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌, ಬುರುಡೆ ಎಲ್ಲಿಂದ ತಂದನೋ ಅಲ್ಲಿಂದ ತನಿಖೆ ಆಗಬೇಕಿತ್ತು. ಆದರೆ, ಬುರುಡೆಯನ್ನ ಎಫ್‌ಎಸ್‌ಎಲ್‌ಗೆ ಕಳಿಸಿದ್ದೇನೆ ಎಂದು ಪರಮೇಶ್ವರ್‌ ಅವರು ಹೇಳಿಲ್ಲ. ಬುರುಡೆಯನ್ನು ತೆಗೆಯಲು ಅನುಮತಿ ಕೊಟ್ಟೋರು ಯಾರು ಅನ್ನೋದು ತನಿಖೆ ಆಗಬೇಕಲ್ಲ. ನಾಳೆ ಮತ್ತೆ ಯಾರೋ ಬುರುಡೆ ಹಿಡ್ಕೊಂಡು ಬರ್ತಾರೆ. ಅದನ್ನ ನೀವು ಎಫ್‌ಎಸ್‌ಎಲ್‌ಗೆ ಕೊಡ್ತೀರಾ? ಅನಾಮಿಕ ಬಂದು ಆ ಬುರುಡೆ ತೆಗೆಯಬೇಕಾದರೆ, ಅದಕ್ಕೆ ಅನುಮತಿ ಕೊಟ್ಟವರು ಯಾರು? ಅನುಮತಿ ಕೊಟ್ಟಿಲ್ಲ ಅಂದಾದ್ರೆ ಆತನ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪರಮೇಶ್ವರ್‌ಗೆ ಪ್ರಶ್ನೆ ಮಾಡಿದ್ದಾರೆ.

ಅನಾಮಿಕನ ಮೇಲೂ ಕ್ರಮ ಆಗಲಿದೆ: ಅನಾಮಿಕನ ಆರೋಪ ಸುಳ್ಳು ಎಂದಾದರೆ ಆತನ ವಿರುದ್ಧ ಕ್ರಮ ಆಗೇ ಆಗುತ್ತದೆ ಎಂದು ಪರಮೇಶ್ವರ್‌ ಹೇಳಿದ್ದರೂ, ವಿಪಕ್ಷ ಕೇಳಿದ ಪ್ರಮುಖ ಪ್ರಶ್ನೆಗೆ ಉತ್ತರಿಸಲು ವಿಫಲರಾದರು. ಅನಾಮಿಕನಿ ಕಾನೂನು ಮೀರಿ ಬುರುಡೆ ತೆಗೆದುಬಂದಿದ್ದಕ್ಕೆ ಕ್ರಮ ಯಾವಾಗ ಎನ್ನುವುದಕ್ಕೆ ಉತ್ತರ ನೀಡಲು ವಿಫಲರಾದರು.