ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮಕಥೆಯೊಂದು ಚಾಕು ಇರಿತದಲ್ಲಿ ಅಂತ್ಯಗೊಂಡಿದೆ. ಯುವತಿಯ ಹಳೇ ಬಾಯ್‌ಫ್ರೆಂಡ್, ಹೊಸ ಬಾಯ್‌ಫ್ರೆಂಡ್‌ಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ತ್ರಿಕೋನ ಪ್ರೇಮಕಥೆ ಹಳೇ ಬಾಯ್ ಫ್ರೆಂಡ್ ನಿಂದ ಹೊಸ ಬಾಯ್ ಫ್ರೆಂಡ್ ಗೆ ಚಾಕು ಇರಿತ ಮೂಲಕ ಜಗಳ ಕೊನೆಯಾಗಿದೆ. ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಬಳಿ ನಡೆದ ಈ ಘಟನೆಯಲ್ಲಿ, ಚಂದನ್ ಎಂಬ ಯುವಕನು ಯುವತಿಯ ಹಳೆಯ ಬಾಯ್‌ಫ್ರೆಂಡ್‌ನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚಂದನ್ ತಮ್ಮದೇ ಪ್ರದೇಶದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಯುವತಿಯೂ ಚಂದನ್ ನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಹಿಂದೆ ಆಕೆ ಯತೀಶ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಯುವತಿ ಈಗ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ವಿಷಯವನ್ನು ತಿಳಿದ ಯತೀಶ್ ಅಸಹನೀಯನಾಗಿ, ಚಂದನ್‌ನ್ನು ಗುರಿಯಾಗಿಸಿಕೊಂಡಿದ್ದಾನೆ.
ಘಟನೆಯ ದಿನ, ಯತೀಶ್ ಹಾಗೂ ಅವನ ಗುಂಪು ಚಂದನ್‌ನ್ನು ಮಾತನಾಡುವ ನೆಪದಲ್ಲಿ ಕರೆಸಿ, ಚಾಕುವಿನಿಂದ ಇರಿದಿದ್ದಾರೆ. ಅಸಹಾಯಕನಾದ ಚಂದನ್ ತಕ್ಷಣ ತನ್ನ ಸ್ನೇಹಿತರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಚಂದನ್ ಸ್ನೇಹಿತರು ಘಟನಾ ಸ್ಥಳಕ್ಕೆ ಬಂದು ಅವನಿಗೆ ಸಹಾಯ ಮಾಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಸ್ತುತ ಚಂದನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರು ಅವನ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯತೀಶ್ ಹಾಗೂ ಅವನ ಗ್ಯಾಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
