ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು (BSWML) ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಹೊಸ ಪರಿಹಾರಗಳನ್ನು ಕಂಡುಕೊಂಡಿದೆ. ಭಾರೀ ತ್ಯಾಜ್ಯ ಸಂಗ್ರಹಕ್ಕೆ ಮೊಬೈಲ್ ಆಪ್ ಹಾಗೂ ಪ್ರಾಣಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಪ್ರತ್ಯೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದಂತೆಯೇ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮತ್ತೊಂದು ಮಹತ್ವದ ಹಾಗೂ ಕ್ರಾಂತಿಕಾರಕ ನಿರ್ಧಾರಕ್ಕೆ ಹೆಜ್ಜೆ ಇಟ್ಟಿದೆ. ಹಿಂದಿನಂತೆ ಕಸ ಎಸೆಯುವವರ ಮನೆ ಮುಂದೆ ಕಸ ಸುರಿಯುವ ತಂತ್ರಗಳನ್ನು ಬಿಟ್ಟು, ಈಗ ನಗರ ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಮಾದರಿ ಅಳವಡಿಸಲು BSWML ಮುಂದಾಗಿದೆ. ಫರ್ನಿಚೇರ್, ಕಮೋಡ್ ಮತ್ತು ಇತರೆ ಭಾರವಾದ ತ್ಯಾಜ್ಯ ವಸ್ತುಗಳ ಸಂಗ್ರಹಣೆಗೆ ಹೊಸ ಮೊಬೈಲ್ ಆಪ್‌ ರೂಪಿಸಲಾಗಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆಯಿಂದಲೇ ತ್ಯಾಜ್ಯ ವಿಲೇವಾರಿ ಸೇವೆಗಾಗಿ ವಿನಂತಿ ಮಾಡಬಹುದು.

ಪ್ರಾಣಿ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಯೋಜನೆ

ನಗರದಲ್ಲಿ ಪ್ರಾಣಿ ತ್ಯಾಜ್ಯ ವಿಲೇವಾರಿಯನ್ನು ಸುಧಾರಿಸಲು BSWML ಪ್ರತ್ಯೇಕ ಟೆಂಡರ್ ಆಹ್ವಾನಿಸಿದೆ. ಈ ಟೆಂಡರ್ ಬೆಂಗಳೂರಿನ ಐದು ಪಾಲಿಕೆ ವ್ಯಾಪ್ತಿಗೆ ಐದು ವರ್ಷದ ಅವಧಿಗೆ ಘೋಷಿಸಲಾಗಿದೆ. ಮಾಂಸದಂಗಡಿಗಳು, ಕೋಳಿ ಅಂಗಡಿಗಳು, ಮೀನು ಮಾರಾಟ ಕೇಂದ್ರಗಳು, ಹಂದಿ ಹಾಗೂ ದನದ ಮಾಂಸ ಮಾರಾಟ ಸ್ಥಳಗಳಿಂದ ಪ್ರತಿದಿನ ಸರಾಸರಿ 250 ಟನ್ ಪ್ರಾಣಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ತ್ಯಾಜ್ಯವನ್ನು ನಿಯಂತ್ರಣವಿಲ್ಲದೆ ಖಾಲಿ ಜಾಗಗಳಲ್ಲಿ ಅಥವಾ ಕೆರೆಗಳ ಬಳಿಯಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ಸಂಸ್ಥೆ ಹೊಸ ಕ್ರಮ ಕೈಗೊಂಡಿದೆ.

ನೊಂದಣಿ ಕಡ್ಡಾಯ

ಈ ಯೋಜನೆಯಡಿ ಎಲ್ಲ ಮಾಂಸ ಮಾರಾಟ ಅಂಗಡಿಗಳಿಗೆ ನೊಂದಣಿ ಕಡ್ಡಾಯಗೊಳಿಸಲಾಗಿದೆ. ನೊಂದಾಯಿತ ಅಂಗಡಿಗಳಿಂದ ತ್ಯಾಜ್ಯ ವಿಲೇವಾರಿ ಕಾರ್ಯವನ್ನು BSWML ನೇಮಿಸುವ ಗುತ್ತಿಗೆದಾರರ ತಂಡಗಳ ಮೂಲಕವೇ ನಡೆಸಬೇಕು. ಸಂಗ್ರಹ ಮಾಡುವ ಪ್ರಾಣಿ ತ್ಯಾಜ್ಯವನ್ನು ನೇರವಾಗಿ ಬಿಸಾಡುವ ಬದಲು, ಅದನ್ನು ನಾಯಿ, ಬೆಕ್ಕು ಮತ್ತು ಮೀನುಗಳ ಆಹಾರ ಉತ್ಪಾದನೆಯಲ್ಲಿ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಂಸ್ಕರಣೆ ಘಟಕಗಳು ರಾಮನಗರ, ಬಿಡದಿ, ಹೊಸಕೋಟೆ ಮತ್ತು ಮುಳಬಾಗಿಲಿನಲ್ಲಿ

BSWML ಈಗಾಗಲೇ ರಾಮನಗರ, ಬಿಡದಿ, ಹೊಸಕೋಟೆ ಮತ್ತು ಮುಳಬಾಗಿಲಿನಲ್ಲಿ ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಿಸುತ್ತಿದೆ. ಈ ಘಟಕಗಳಲ್ಲಿ ಸಂಗ್ರಹಿಸಲ್ಪಟ್ಟ ತ್ಯಾಜ್ಯದಿಂದ ಉಪ ಉತ್ಪನ್ನಗಳೊಂದಿಗೆ ಗ್ಯಾಸ್ ಉತ್ಪಾದನೆಯನ್ನೂ ನಡೆಸಲಾಗುವುದು. ಈ ಕ್ರಮದಿಂದ ಪರಿಸರ ಶುದ್ಧವಾಗುವುದಲ್ಲದೆ, ಬೀದಿ ನಾಯಿಗಳು ಪ್ರಾಣಿ ತ್ಯಾಜ್ಯ ತಿಂದು ಮನುಷ್ಯರ ಮೇಲೆ ದಾಳಿ ಮಾಡುವ ಸಮಸ್ಯೆಗೂ ಕಡಿಮೆ ಆಗಲಿದೆ. ಜೊತೆಗೆ, ಕೆರೆ ಹಾಗೂ ಖಾಲಿ ಜಾಗಗಳು ತ್ಯಾಜ್ಯದಿಂದ ತುಂಬುವುದು ಕೂಡ ಕಡಿಮೆ ಆಗಲಿದೆ.

ತೆರಿಗೆ ಮತ್ತು ಸೇವಾಶುಲ್ಕದಿಂದ ಆರ್ಥಿಕ ಲಾಭ

ಎಲ್ಲ ಬಗೆಯ ಮಾಂಸ ಅಂಗಡಿಗಳಿಗೆ ಕಡ್ಡಾಯ ನೊಂದಣಿ ವ್ಯವಸ್ಥೆ ಜಾರಿಯಾದರೆ, ನಗರ ಪಾಲಿಕೆ ತೆರಿಗೆ ಸಂಗ್ರಹದಲ್ಲೂ ಹೆಚ್ಚಳ ಉಂಟಾಗಲಿದೆ. ಜೊತೆಗೆ, ಪ್ರತಿಯೊಂದು ಕೆಜಿ ಪ್ರಾಣಿ ತ್ಯಾಜ್ಯ ವಿಲೇವಾರಿಗೆ ₹5 ಸೇವಾಶುಲ್ಕ ವಿಧಿಸಲು ಸಂಸ್ಥೆ ನಿರ್ಧರಿಸಿದೆ.

BSWML ಮುಖ್ಯಸ್ಥ ಕರೀಗೌಡ ಹೇಳಿಕೆ

“ನಗರದಲ್ಲಿ ಪ್ರಾಣಿ ತ್ಯಾಜ್ಯ ವಿಲೇವಾರಿಯ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಹೊಸ ಟೆಂಡರ್ ಹಾಗೂ ನೊಂದಣಿ ವ್ಯವಸ್ಥೆಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಜನರಿಂದ ಸಹಕಾರ ದೊರೆತರೆ, ಬೆಂಗಳೂರು ಸ್ವಚ್ಛ ಮತ್ತು ಆರೋಗ್ಯಕರ ನಗರವಾಗಿ ರೂಪಾಂತರಗೊಳ್ಳುವುದು ಖಚಿತ ಎಂದು BSWML ಮುಖ್ಯಸ್ಥ ಕರೀಗೌಡ ತಿಳಿಸಿದ್ದಾರೆ.