ಮೆಟ್ರೋ ರೈಲು ಸೇವೆಯಲ್ಲಿ ಇಂದು ಬೆಳಗ್ಗೆ ವ್ಯತ್ಯಯ ಉಂಟಾಗಿದ್ದು, ನೇರಳೆ ಮಾರ್ಗದ ಪ್ರಯಾಣಿಕರು 15 ನಿಮಿಷ ತೊಂದರೆ ಅನುಭವಿಸಿದರು. ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ ಮೆಟ್ರೋ ಸೇವೆ ಕೈಕೊಟ್ಟಿದೆ.

ಬೆಂಗಳೂರು (ಅ.30): ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಇಂದು ಬೆಳಗ್ಗೆ ವ್ಯತ್ಯಯ ಉಂಟಾಗಿದ್ದು, ನೇರಳೆ ಮಾರ್ಗದ ಪ್ರಯಾಣಿಕರು 15 ನಿಮಿಷ ತೊಂದರೆ ಅನುಭವಿಸಿದರು. ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ ಮೆಟ್ರೋ ಸೇವೆ ಕೈಕೊಟ್ಟಿದೆ.

ಸುಮಾರು 9 ಗಂಟೆ ಹೊತ್ತಿಗೆ ದೀಪಾಂಜಲಿನಗರ ಮೆಟ್ರೋ ನಿಲ್ದಾಣದಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ಹಿಂದಿನ ಹಾಗೂ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ, ಪ್ಲಾಟ್‌ಫಾರ್ಮ್‌ಗಳು ಜನರಿಂದ ಹೌಸ್ ಫುಲ್ ಆಗಿತ್ತು. ಸದ್ಯ ತಾಂತ್ರಿಕ ದೋಷವನ್ನು ಮೆಟ್ರೋ ಸಿಬ್ಬಂದಿ ಸರಿಪಡಿಸಿದ್ದು, ಸಂಚಾರ ಯಥಾಸ್ಥಿತಿಯಲ್ಲಿದೆ.

ಗುಲಾಬಿ ಮಾರ್ಗದ ಮೆಟ್ರೋ ಡೆಡ್‌ಲೈನ್ ಮತ್ತೆ ಮುಂದಕ್ಕೆ

ನಮ್ಮ ಮೆಟ್ರೋದ ಇತರೆಲ್ಲ ಯೋಜನೆಗಳಂತೆ ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದ ಡೆಡ್‌ಲೈನ್‌ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಡಿಸೆಂಬರ್‌ನಲ್ಲಿ ಕಾರ್ಯಾಚರಣೆಗೆ ಮುಕ್ತವಾಗಬೇಕಿದ್ದ ಎತ್ತರಿಸಿದ ಮಾರ್ಗವನ್ನು 2026ರ ಮಾರ್ಚ್‌ ಬದಲು ಮೇ ತಿಂಗಳಲ್ಲಿ ಆರಂಭಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ.

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ ಎರಡೂವರೆ ವರ್ಷ, ಹಸಿರು ಮಾರ್ಗದ ವಿಸ್ತರಿತ ಭಾಗ ಐದು ವರ್ಷ ವಿಳಂಬವಾಗಿದ್ದವು. ಈಗ ಗುಲಾಬಿ ಮಾರ್ಗದ ಕಾರ್ಯಾಚರಣೆ ಕಾಲಮಿತಿಯೂ ವಿಸ್ತರಣೆ ಆಗುತ್ತಿದೆ ಎಂದು ಮೆಟ್ರೋ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

21 ಕಿಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5ಕಿಮೀ ಎತ್ತರಿಸಿದ (ಎಲಿವೆಟೆಡ್‌) ಭಾಗವಿದೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ (13.76ಕಿಮೀ) ಉದ್ದ ಸುರಂಗ ಮಾರ್ಗವಿದೆ. ಈ ಮೊದಲು ಎತ್ತರಿಸಿದ ಮಾರ್ಗವನ್ನು ಮೊದಲು ಇದೇ ವರ್ಷ ಡಿಸೆಂಬರ್‌ಗೆ ಉದ್ಘಾಟಿಸಲು ತೀರ್ಮಾನಿಸಲಾಗಿತ್ತು.

ಗುಲಾಬಿ ಮಾರ್ಗದ ಎತ್ತರಿಸಿದ ಭಾಗ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಮತ್ತು ತಾವರೆಕೆರೆ (ಸ್ವಾಗತ್‌ ಕ್ರಾಸ್‌ ರಸ್ತೆ) 6 ನಿಲ್ದಾಣಗಳನ್ನು ಒಳಗೊಂಡಿದೆ. ಕಾಮಗಾರಿ ಮತ್ತು ನಾನಾ ಕಾರಣಗಳಿಂದ ಈ ಗಡುವು 2026ರ ಮಾರ್ಚ್‌ಗೆ ವಿಸ್ತರಣೆಗೊಂಡಿತ್ತು. ಈಗ ಮತ್ತೊಮ್ಮೆ 2026ರ ಮೇ ವರೆಗೆ ವಿಸ್ತರಣೆಯಾಗಿದೆ.