ಬೆಂಗಳೂರಿನಲ್ಲಿ ಗೂಡ್ಸ್ ವಾಹನ ತೆಗೆಯಲು ಹೋದ ಆಟೋ ಚಾಲಕನ ಎಡವಟ್ಟಿನಿಂದ ಭೀಕರ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ಮಧ್ಯದಲ್ಲಿ ನಿಂತಿದ್ದ ಗೂಡ್ಸ್ ವಾಹನವನ್ನು ಸರಿಸಲು ಹೋದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಬೆಂಗಳೂರು (ಸೆ.12): ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಗೂಡ್ಸ್ ವಾಹನವನ್ನು ತೆಗೆದು ಸೈಡಿಗೆ ನಿಲ್ಲಿಸಲು ಮುಂದಾದ ಆಟೋ ಚಾಲಕನ ಎಡವಟ್ಟಿನಿಂದ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಇಬ್ಬರು ಬೈಕ್ ಸವಾರರು ಸೇರಿ ಹಲವರು ಗಾಯಗೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ ರೋಡ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಆಟೋ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದವರಲ್ಲಿ ನಡುಕ ಹುಟ್ಟಿಸಿದೆ.

ಈ ಘಟನೆ ಶುಕ್ರವಾರ ಸಂಜೆ 5.39ರ ಸುಮಾರಿಗೆ ನಡೆದಿದೆ. ಗೂಡ್ಸ್ ಗಾಡಿ ಚಾಲಕನು ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ, ಕೀ ಸಹ ತೆಗೆಯದೆ ಸಮೀಪದ ಅಂಗಡಿಯೊಂದಕ್ಕೆ ಹೋಗಿದ್ದನು. ಅದೇ ರಸ್ತೆಯಲ್ಲಿ ಆಟೋದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕ ಕಿರಣ್, ರಸ್ತೆ ತಡೆಯಾಗಿದ್ದರಿಂದ ತಾನೇ ಗೂಡ್ಸ್ ಗಾಡಿಯನ್ನು ತೆಗೆಯಲು ಮುಂದಾಗಿದ್ದಾನೆ. ಈ ವೇಳೆ, ನಿಯಂತ್ರಣ ಕಳೆದುಕೊಂಡ ಗೂಡ್ಸ್ ಗಾಡಿ ಅತಿ ವೇಗವಾಗಿ ಚಲಿಸಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಹರಿದಿದೆ.

ಅಪಘಾತದಲ್ಲಿ ಕಾಟನ್‌ಪೇಟೆ ನಿವಾಸಿ ಅಂಜಾದೇವಿ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಮತ್ತೊಬ್ಬ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರವೂ ನಿಲ್ಲದ ವಾಹನವು, ಮುಂದೆ ಹೋಗಿ ನಾಲ್ಕು ಬೈಕ್‌ಗಳು ಮತ್ತು ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂವರು ಜನರಿಗೆ ಗಾಯಗಳಾಗಿದ್ದು, ಮೂರು ಕಾರುಗಳು ಮತ್ತು ನಾಲ್ಕು ಬೈಕ್‌ಗಳಿಗೆ ಹಾನಿಯಾಗಿದೆ.

ಪೊಲೀಸರ ಕ್ರಮ:

ಈ ಘಟನೆ ನಡೆದ ಕೂಡಲೇ ಚಾಮರಾಜಪೇಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಅಂಜಾದೇವಿ ಅವರ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಿರ್ಲಕ್ಷ್ಯಕ್ಕೆ ಕಾರಣನಾದ ಆಟೋ ಚಾಲಕ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಾಹನ ಚಾಲಕರ ನಿರ್ಲಕ್ಷ್ಯವು ಹೇಗೆ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸಿದೆ. ವಾಹನಗಳನ್ನು ನಿಲ್ಲಿಸುವಾಗ ಮತ್ತು ಚಲಾಯಿಸುವಾಗ ಎಚ್ಚರಿಕೆ ವಹಿಸುವ ಕುರಿತು ಇದು ಒಂದು ಪ್ರಮುಖ ಪಾಠವಾಗಿದೆ.