ಕಲಾಸಿಪಾಳ್ಯ ಬಸ್ ನಿಲ್ದಾಣದ ಸ್ಫೋಟಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಲಾರ ಮೂಲದ ಶಿವಕುಮಾರ್ ಮತ್ತು ನವೀನ್ ಬಂಧಿತರು. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಕಳೆದ ಜುಲೈ 23 ರಂದು ಪತ್ತೆಯಾದ ಜಿಲೆಟಿನ್ ಹಾಗೂ ಡಿಟೋನೇಟರ್ ಪ್ರಕರಣದಲ್ಲಿ ದಿನೇದಿನೇ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವ್ಯಾಪಕ ತನಿಖೆ ನಡೆಸಿ, ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಾದವರು ಕೋಲಾರ ಮೂಲದ ಶಿವಕುಮಾರ್ (31) ಹಾಗೂ ನವೀನ್ (33). ಇದರೊಂದಿಗೆ, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಆರೋಪಿಗಳು ಕೋಲಾರದಿಂದ ಜಿಲೆಟಿನ್ ಹಾಗೂ ಡಿಟೋನೇಟರ್‌ಗಳನ್ನು ತರಿಸಿ, ರಾಜ್ಯದ ವಿವಿಧೆಡೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇವರು ಸಾರ್ವಜನಿಕ ಸಾರಿಗೆಯ ಮೂಲಕ ಸ್ಫೋಟಕಗಳನ್ನು ಸಾಗಿಸುತ್ತಿದ್ದು, ಇದಕ್ಕೂ ಮೊದಲು ಅನೇಕ ಕಡೆ ಇಂತಹ ಮಾರಾಟ ಮಾಡಿರುವುದೂ ಬೆಳಕಿಗೆ ಬಂದಿದೆ.

ಜುಲೈ 23ರಂದು ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ನಡೆದ ತಪಾಸಣೆಯಲ್ಲಿ 6 ಜಿಲೆಟಿನ್ ಹಾಗೂ 12 ಡಿಟೋನೇಟರ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದರು. ಬಳಿಕ ಪ್ರಕರಣ ದಾಖಲಿಸಿ, ಐದು ತಂಡಗಳಾಗಿ ವಿಭಜಿಸಿ ತನಿಖೆ ಮುಂದುವರಿಸಿದ್ದರು. ಈ ವೇಳೆ ಗಣೇಶ್ ಎಚ್.ಎಂ., ಮುನಿರಾಜ್ ಮತ್ತು ಶಿವಕುಮಾರ್ ಸೇರಿದಂತೆ ಮೂವರನ್ನು ಮೊದಲು ಬಂಧಿಸಲಾಗಿತ್ತು. ಜುಲೈ 27ರಂದು ಮೂವರನ್ನು ಒಟ್ಟು 22 ಜೀವಂತ ಜಿಲೆಟಿನ್ ಜೆಲ್ ಹಾಗೂ 30 ಎಲೆಕ್ಟ್ರಿಕ್ ಡಿಟೋನೇಟರ್ ಗಳು ವಶಕ್ಕೆ ಪಡೆಯಲಾಗಿತ್ತು. ಸದ್ಯ, ಮತ್ತಿಬ್ಬರ ಬಂಧನದೊಂದಿಗೆ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪೊಲೀಸರ ತಂಡಗಳು ಆರೋಪಿಗಳ ಸಂಪರ್ಕ ಜಾಲ ಹಾಗೂ ಮಾರಾಟದ ಮಾರ್ಗಗಳನ್ನು ಶೋಧಿಸುತ್ತಿವೆ.