ಬೆಂಗಳೂರಿನಲ್ಲಿ ಎರಡು ಆಘಾತಕಾರಿ ಘಟನೆಗಳು ವರದಿಯಾಗಿವೆ. ಮನೆಯಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದರೆ, ಬಸ್‌ನಲ್ಲಿ ಯುವತಿಯೊಬ್ಬಳಿಗೆ ಚಾಲಕ ಮತ್ತು ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾರೆ.

ಬೆಂಗಳೂರು (ಸೆ.11): ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದವಿದ್ಯಾರ್ಥಿನಿಯೊಬ್ಬಳು ಮನೆಯ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಾಂಕಾ (19) ಮೃತಪಟ್ಟ ದುರ್ಧೈವಿ. ಈಕೆ ಮಹೇಶ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮನೆಯ ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯ ತೀವ್ರತೆಯಿಂದಾಗಿ ಪ್ರಿಯಾಂಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆ; ಪ್ರಶ್ನೆ ಮಾಡಿದ ಹೆಂಡತಿಯ ಉಸಿರನ್ನೇ ನಿಲ್ಲಿಸಿದ ಗಂಡ!

ಪ್ರೈವೇಟ್‌ ಬಸ್ಸಿನಲ್ಲಿ ಯುವತಿ ಮೊಬೈಲ್ ಕಿತ್ತುಕೊಂಡು ಕಿಸ್ ಕೇಳಿದ ಕಂಡಕ್ಟರ್:

ಮತ್ತೊಂದು ಘಟನೆಯಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಲೈಂಗಿಕ ಕಿರುಕುಳ ನೀಡಿದ್ದು, ಯುವತಿಯ ಕುಟುಂಬಸ್ಥರು ಬಸ್ ಅಡ್ಡಗಟ್ಟಿ ಇಬ್ಬರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ವಿವರ:

ಟ್ರಾನ್ಸ್ ಇಂಡಿಯಾ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಯುವತಿಯೊಬ್ಬಳು ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಳು. ರಾತ್ರಿ ವೇಳೆ, ಚಾಲಕ ಮತ್ತು ನಿರ್ವಾಹಕ ಯುವತಿಯಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್ ವಾಪಸ್ ನೀಡಬೇಕಿದ್ದರೆ 'ಕಿಸ್ ಕೊಡು' ಎಂದು ಪೀಡಿಸಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಮೊಬೈಲ್ ವಾಪಸ್ ಪಡೆದಿದ್ದಾಳೆ. ತಕ್ಷಣ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಯುವತಿಯ ಮಾಹಿತಿ ಆಧರಿಸಿ ಕುಟುಂಬಸ್ಥರು ಚಾಲುಕ್ಯ ಸರ್ಕಲ್ ಬಳಿ ಬಸ್ ಅಡ್ಡ ಹಾಕಿ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದ ಚಾಲಕ ಮತ್ತು ನಿರ್ವಾಹಕನನ್ನು ಕೆಳಗಿಳಿಸಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಿಡಿಗೇಡಿಯನ್ನು ಪೊಲೀಸರಿಗೆ ಒಪ್ಪಿಸಿದ ಪೋಷಕರು:

ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಪ್ರಯಾಣಿಕರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.