ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಬೃಹತ್ ದಾಳಿಯಲ್ಲಿ ಇಬ್ಬರು ವಿದೇಶಿ ಪೆಡ್ಲರ್‌ಗಳು ಸೇರಿದಂತೆ ಹಲವು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ₹1.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಡ್ಜ್‌ವೊಂದರಲ್ಲಿ ಪಾರ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಪೊಲೀಸರು ನಡೆಸಿದ ಬೃಹತ್ ದಾಳಿಯಲ್ಲಿ, ಇಬ್ಬರು ವಿದೇಶಿ ಪೆಡ್ಲರ್ ಸೇರಿ ಅನೇಕ ಡ್ರಗ್ಸ್ ಪೆಡ್ಲರ್‌ಗಳು ಬಂಧಿತರಾಗಿದ್ದು, ಅಂದಾಜು ರೂ.1.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಸಿಕ್ಕ ಮಾದಕ ವಸ್ತುಗಳು
ಸಿಸಿಬಿ ದಾಳಿಯಲ್ಲಿ ಒಟ್ಟಾರೆ 506 ಗ್ರಾಂ ಎಂಡಿಎಂಎ, 50 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 85 ಗ್ರಾಂ ಕೊಕೇನ್ ಹಾಗೂ 56 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಸಿಕ್ಕಿವೆ.
ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ರೂ.6 ಲಕ್ಷ ಮೌಲ್ಯದ ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.
ಅವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರೂ.2 ಲಕ್ಷ ಮೌಲ್ಯದ ಕೊಕೇನ್ ವಶಕ್ಕೆ ಸಿಕ್ಕಿದ್ದು, ಮಹಿಳಾ ಡ್ರಗ್ ಪೆಡ್ಲರ್ ಒಬ್ಬಳು ಬಂಧಿತಳಾಗಿದ್ದಾಳೆ.
ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರೂ.28 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ಪತ್ತೆಯಾಗಿದ್ದು, ಒಬ್ಬ ಪೆಡ್ಲರ್ ಅರೆಸ್ಟ್ ಆಗಿದ್ದಾನೆ.
ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ರೂ.15 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಸಿಕ್ಕಿದ್ದು, ಒಬ್ಬ ವ್ಯಕ್ತಿ ಬಂಧಿತನಾಗಿದ್ದಾನೆ. ಇದೇ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣದಲ್ಲೂ ಒಬ್ಬ ವ್ಯಕ್ತಿ ಬಂಧನಕ್ಕೊಳಗಾಗಿದ್ದು, ರೂ.15 ಲಕ್ಷ ಮೌಲ್ಯದ ಎಂಡಿಎಂಎ ಮತ್ತು ಕೊಕೇನ್ ವಶಕ್ಕೆ ಸಿಕ್ಕಿದೆ.
ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ರೂ.36 ಲಕ್ಷ ಮೌಲ್ಯದ ಎಂಡಿಎಂಎ ಸೀಜ್ ಆಗಿ ಒಬ್ಬ ಪೆಡ್ಲರ್ ಬಂಧಿತನಾಗಿದ್ದಾನೆ.
ರಾಮಮೂರ್ತಿ ನಗರ ಲಾಡ್ಜ್‌ನಲ್ಲಿ ಡ್ರಗ್ಸ್ ಪಾರ್ಟಿ ವ್ಯವಸ್ಥೆ
ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಡ್ರಗ್ಸ್ ಪೆಡ್ಲಿಂಗ್‌ಗೆ ಸಹಕರಿಸಿದ್ದ ಲಾಡ್ಜ್ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಲಾಡ್ಜ್‌ನಲ್ಲಿ ಅಂದಾಜು ರೂ.3 ಲಕ್ಷ ಮೌಲ್ಯದ ಮಾದಕ ವಸ್ತುಗಳು, ಸಿರಿಂಜ್‌ಗಳು ಹಾಗೂ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ, ಲಾಡ್ಜ್‌ನಲ್ಲಿ ವಿಶೇಷವಾಗಿ ಡ್ರಗ್ಸ್ ಸೇವನೆ ಮಾಡಲು ಕೊಠಡಿಗಳನ್ನು ಒದಗಿಸಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ. ಪೆಡ್ಲರ್‌ಗಳು ಮತ್ತು ಲಾಡ್ಜ್ ಸಿಬ್ಬಂದಿ ಪರಸ್ಪರ ಸಂಪರ್ಕ ಹೊಂದಿದ್ದು, ಗ್ರಾಹಕರಿಗೆ ಡ್ರಗ್ಸ್‌ಗಳನ್ನು ಒದಗಿಸಿ, ಹೋಟೆಲ್ ಕೊಠಡಿಗಳೊಂದಿಗೆ ನಿಗದಿತ ಹಣವನ್ನು ಪಡೆಯುತ್ತಿದ್ದರು. ಸುಮಾರು 15ಕ್ಕೂ ಹೆಚ್ಚು ಕೊಠಡಿಗಳನ್ನು ಡ್ರಗ್ಸ್ ಸೇವನೆಗೆ ಬಳಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲು
ಸಿಸಿಬಿ ಪೊಲೀಸರು ಲಾಡ್ಜ್‌ನ್ನು ಸೀಜ್ ಮಾಡಿದ್ದು, ಸಂಬಂಧಪಟ್ಟ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
