ಅಥಣಿಯ ತ್ರೀಮೂರ್ತಿ ಜ್ಯುವೆಲರ್ಸ್‌ನಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. CCTV ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಬೆಳಗಾವಿ (ಸೆ.04): ನಮ್ಮ ದೇಶದಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ದಾಟುತ್ತಿದ್ದಂತೆಯೇ ಚ ಬಂಗಾರದ ಆಭರಣಗಳ ಕಳ್ಳತನ ಹೆಚ್ಚಾಗತೊಡಗಿವೆ. ಇದೀಗ ರಸ್ತೆಯಲ್ಲಿ ಸರಗಳ್ಳತನ ಮಾಡುವುದಕ್ಕಿಂತ ಒಂದು ಕೈ ಮುಂದೆ ಹೋಗಿರುವ ಕಳ್ಳರು ಚಿನ್ನದ ಅಂಗಡಿಗಳನ್ನೇ ದರೋಡೆ ಮಾಡುವುದಕ್ಕೆ ಗುಂಪು ಕಟ್ಟಿಕೊಂಡಿದ್ದಾರೆ. ಆಧುನಿಕ ಯುಗದಲ್ಲಿ ಇಷ್ಟೊಂದು ವೈಜ್ಞಾನಿಕತೆ ಬೆಳೆದಿದ್ದರೂ, ಸಿಸಿಟಿವಿ ಹಾಗೂ ಇತರೆ ಸೌಲಭ್ಯಗಳಿಂದ ಕಳ್ಳರು ಸಿಕ್ಕಿಬೀಳುತ್ತಾರೆಂದು ಗೊತ್ತಿದ್ದರೂ ದರೋಡೆ ಮಾಡುವುದನ್ನು ಬಿಡುತ್ತಿಲ್ಲ. ಹಾಡ ಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿ ಬಂದೂಕು ತೋರಿಸಿ ದರೋಡೆ ಂಆಡಿದ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ಆಗಸ್ಟ್ 26 ರಂದು ತ್ರೀಮೂರ್ತಿ ಜ್ಯುವೆಲರ್ಸ್ ಅಂಗಡಿಗೆ ನುಗ್ಗಿ, ಬಂದೂಕು ತೋರಿಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಎರಡು ದೇಶೀ ನಿರ್ಮಿತ ಪಿಸ್ತೂಲ್‌ಗಳು (ಕಂಟ್ರಿ ಪಿಸ್ತೂಲ್) ಹಾಗೂ 7 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಟಿವಿ ಆಧರಿಸಿ ತನಿಖೆ

ಕಳೆದ ತಿಂಗಳು ನಡೆದಿದ್ದ ಈ ದರೋಡೆ ಯತ್ನದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದರ ಪ್ರಕಾರ, ದರೋಡೆಕೋರರು ಅಂಗಡಿಯ ಮಾಲೀಕರಿಗೆ ಗನ್ ತೋರಿಸಿ ಹೆದರಿಸಿ ಚಿನ್ನಾಭರಣಗಳನ್ನು ಕದಿಯಲು ಯತ್ನಿಸಿದ್ದರು. ಆದರೆ, ಅವರು ಯಶಸ್ವಿಯಾಗಲಿಲ್ಲ. ಘಟನೆ ಗಂಭೀರವಾಗಿದ್ದರಿಂದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಅವರು ಈ ಪ್ರಕರಣವನ್ನು ಸ್ವತಃ ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

ಬಂಧಿತರ ವಿವರ

ಪೊಲೀಸರ ತನಿಖೆ ವೇಳೆ ವಿಜಯ್ ಜಾವೀದ್ ಮತ್ತು ಯಶ್ವಂತ್ ಓಂಕಾರ್ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನದ ವೇಳೆ ವಿಜಯ್ ಬಳಿ ಎರಡು ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಗುಂಡುಗಳು ಪತ್ತೆಯಾಗಿವೆ. ಆರೋಪಿ ವಿಜಯ್ ಮೇಲೆ ಈ ಹಿಂದೆಯೂ ಹನ್ನೊಂದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಂದೂಕುಗಳು ಮಧ್ಯಪ್ರದೇಶದಿಂದ ಬಂದಿರುವ ಸಾಧ್ಯತೆಗಳಿವೆ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. ದೇಶೀ ನಿರ್ಮಿತ ಪಿಸ್ತೂಲ್‌ಗಳು ರಾಜ್ಯಕ್ಕೆ ಹೇಗೆ ಬರುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಈ ಪ್ರಕರಣದ ಯಶಸ್ವಿ ಪತ್ತೆಗಾಗಿ ಅಥಣಿ ಪೊಲೀಸರ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.