ಆನೆ ಕಾರಿಡಾರ್ ಪ್ರಾರಂಭಿಸಲು 53 ಕೋಟಿ ಮಂಜೂರಾತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.

ಹಾಸನ (ಆ.13): ನೈಸರ್ಗಿಕ ಸಂಪತ್ತನ್ನು ಅತಿಯಾಗಿ ಬಳಕೆ ಮಾಡುತ್ತಿದ್ದು, ಪ್ರಕೃತಿ ನಾಶಕ್ಕೂ ಕೂಡ ಕಾರಣವಾಗುತ್ತಿದೆ. ಹಾಗಾಗಿ ಹಿತಮಿತವಾಗಿ ಬಳಕೆ ಮಾಡುವುದರ ಜೊತೆಗೆ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯ, ಜೀವ ಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪ್ರಕೃತಿ ವನದಲ್ಲಿ ನವೀಕರಣಗೊಂಡಿರುವ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಆರೋಗ್ಯಕರವಾದ ವಾತಾವರಣವನ್ನು ಮುಂದಿನ ಪೀಳಿಗೆಗೆ ಯೋಗ್ಯ ರೀತಿಯಲ್ಲಿ ಹಸ್ತಾಂತರ ಮಾಡಬೇಕು ಎಂದು ತಿಳಿಸಿದರು.

ಒಟ್ಟು ಭೂಭಾಗದಲ್ಲಿ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಹಾಲಿ ಇರುವ ಶೇ. 21ರಷ್ಟು ಅರಣ್ಯ ಪ್ರದೇಶವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು. ಮನುಷ್ಯರಿಗೆ ಪ್ರಾಣವಾಯು ನೀಡುವ ಮರಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು. ಜಿಲ್ಲೆಯಲ್ಲಿ ಆನೆ ಕಾರಿಡಾರ್ ಪ್ರಾರಂಭಿಸಲು 53 ಕೋಟಿ ಮಂಜೂರಾತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರ ಒಪ್ಪಿದ ನಂತರ ಆರಂಭಿಸಲಾಗುವುದು ಎಂದರು.

ಬೆಲಸಿಂದ ಪ್ರಕೃತಿ ವನವು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿದ್ದು ಚನ್ನರಾಯಪಟ್ಟಣ ಪಟ್ಟಣದಿಂದ ಕೇವಲ 2 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಹಾಸನದಿಂದ 36 ಕಿ.ಮೀ ದೂರದಲ್ಲಿದ್ದು ವಿಶಾಲವಾದ ಪಾರಗೋಲ, ನೇಚರ್ ವಾಕ್ ವ್ಯವಸ್ಥೆ, ಅರಣ್ಯ ಪ್ರದೇಶದಲ್ಲಿ ಬಾಡಿಗೆ ಸೈಕ್ಲಿಂಗ್ ವ್ಯವಸ್ಥೆ, ಕೆರೆಯಲ್ಲಿ ದೋಣಿ ವಿಹಾರ ವ್ಯವಸ್ಥೆ, ಪಕ್ಷಿಗಳ ವೀಕ್ಷಣಾ ವ್ಯವಸ್ಥೆ, ಗ್ರೀನ್ ಲೈಬ್ರರಿ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಸುಸಜ್ಜಿತ ಆಟ ಸಾಮಾನುಗಳ ವ್ಯವಸ್ಥೆ, ಅರಣ್ಯವನ್ನು ವೀಕ್ಷಣೆ ಮಾಡಲು 2 ವಾಚ್ ಟವರ್ ವ್ಯವಸ್ಥೆ, ಶಾಲಾ ಕಾಲೇಜುಗಳ ಮಕ್ಕಳಿಗೆ ಕಾರ್ಯಕ್ರಮ ಆಯೋಜನೆ ಮತ್ತು ಶಿಬಿರಗಳನ್ನು ನಡೆಸಲು ಬಯಲು ರಂಗಮಂದಿರವನ್ನು ಹೊಂದಿದೆ ಎಂದರು.

ಇದೇ ವೇಳೆ ಜಿಲ್ಲಾ ಆನೆ ಕಾರ್ಯಪಡೆಯ ಸಮಗ್ರ ತಂತ್ರಜ್ಞಾನ ಆಧಾರಿತ ಥರ್ಮಲ್ ಡ್ರೋನ್ ಸ್ಕ್ವಾಡ್ ಅನ್ನು ಉದ್ಘಾಟಿಸಿದರು. ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿರುವ ಬೆಲಸಿಂದ ವನ 285 ಎಕರೆ ಪ್ರದೇಶದಲ್ಲಿದೆ. ಇದರಲ್ಲಿ 50 ಎಕರೆ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತ್ತಿರುವ ಬೆಲಸಿಂದವನದಲ್ಲಿ ಅರಣ್ಯ ಇಲಾಖೆಯಿಂದ ಪ್ರವಾಸಿ ಮಂದಿರ ನಿರ್ಮಿಸಬೇಕು. ಹೊರಗುತ್ತಿಗೆಯ ಆಧಾರದ ಮೇಲೆ ಅರಣ್ಯರಕ್ಷಕರನ್ನು ನೇಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಪುರಸಭಾ ಅಧ್ಯಕ್ಷರಾದ ಮೋಹನ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು, ಡಿಸಿ ಲತಾ ಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೌರಭ್ ಕುಮಾರ್, ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹನ್ ಕುಮಾರ್, ನಿವೃತ್ತ ವಲಯ ಅರಣ್ಯಾಧಿಕಾರಿ ಧರ್ಮಪ್ಪ, ಪರಿಸರ ಪ್ರೇಮಿಗಳಾದ ಚ.ನಾ.ಆಶೋಕ್ ಹಾಜರಿದ್ದರು.