ಹಲವು ವರ್ಷಗಳಿಂದ ಆಗ್ರಹಿಸಿದ ಮಹತ್ವದ ನಿಯಮ ಇದೀಗ ಜಾರಿಯಾಗುತ್ತಿದೆ. ಹಣ ಹಾಕಿ ಆಡುವ ಗೇಮಿಂಗ್, ಆನ್‌ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಹೊಸ ಆನ್‌ಲೈನ್ ಗೇಮಿಂಗ್ ಬಿಲ್ ತರುತ್ತಿದೆ. ಈ ಬಿಲ್‌ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ನವದೆಹಲಿ (ಆ.19) ಭಾರತದಲ್ಲಿ ಡಿಜಿಟಲ್ ಕ್ರಾಂತಿಯೊಂದಿಗೆ ಡಿಜಿಟಲ್ ಗೇಮಿಂಗ್ ಕೂಡ ಅಷ್ಟೇ ದೊಡ್ಡದಾಗಿ ಬೆಳೆದಿದೆ. ಈ ಪೈಕಿ ಆನ್‌ಲೈನ್ ಬೆಟ್ಟಿಂಗ್, ಹಣದ ಗೇಮಿಂಗ್ ಅತೀ ದೊಡ್ಡ ಜಾಲವಾಗಿ ಬೆಳೆದು ನಿಂತಿದೆ. ಈ ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್‌ನಿಂದ ಹಲವು ಕುಟುಂಬಗಳು ಬೀದಿ ಬಿದ್ದಿದೆ. ಹಲವರು ಎಲ್ಲವನ್ನೂ ಕಳೆದುಕೊಂಡು ಬದುಕು ಅಂತ್ಯಗೊಳಿಸಿದ ಘಟನಗಳು ಇವೆ. ಹೀಗಾಗಿ ಆನ್‌ಲೈನ್ ಬೆಟ್ಟಿಂಗ್, ಹಣದ ಗೇಮಿಂಗ್‌ಗೆ ಕಡಿವಾಣ ಹಾಕುವಂತೆ ಹಲವು ದಿನಗಳಿಂದ ಕೂಗು ಕೇಳಿಬರುತ್ತಿದೆ. ಇದೀಗ ಕೇಂದ್ರ ಸರ್ಕಾರ ಆನ್‌ಲೈನ್ ಬೆಟ್ಟಿಂಗ್, ಹಣದ ಗೇಮಿಂಗ್ ಬ್ಯಾನ್ ಮಾಡುತ್ತಿದೆ. ಇದಕ್ಕಾಗಿ ಕೇಂದ್ರದ ಹೊಸ ಆನ್‌ಲೈನ್ ಗೇಮಿಂಗ್ ಬಿಲ್‌ಗೆ ಸಂಪುಟ ಅನುಮೋದನೆ ನೀಡಿದೆ.

ಹಣದ ಮೂಲಕ ನಡೆಯುವ ಗೇಮಿಂಗ್ ಬ್ಯಾನ್

ಹೊಸ ಆನ್‌ಲೈನ್ ಗೇಮಿಂಗ್ ಬಿಲ್‌ನಲ್ಲಿ ಹಣದ ಮೂಲಕ ನಡೆಯುವ ಎಲ್ಲಾ ಗೇಮಿಂಗ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಿಲ್‌ನಿಂದ ಹಣ ಹಾಕಿ ಯಾವುದೇ ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಆಡಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲ ಆನ್‌ಲೈನ್ ಹಣದ ಗೇಮಿಂಗ್, ಆನ್‌ಲೈನ್ ಬೆಟ್ಟಿಂಗ್ ಕುರಿತು ಜಾಹೀರಾತು, ಪ್ರಚಾರವೂ ಮಾಡುವಂತಿಲ್ಲ. ಇ ಸ್ಪೋರ್ಟ್ಸ್ ಸೇರಿದಂತೆ ಇತರ ಯಾವುದೇ ರೀತಿಯ ಥರ್ಡ್ ರೂಟ್ ಮೂಲಕ ನಡೆಯುವ ಹಣದ ಗೇಮಿಂಗ್ ಕೂಡ ಅವಕಾಶವಿಲ್ಲ.

ಲೋಕಸಭೆಯಲ್ಲಿ ನಾಳೆ ಬಿಲ್ ಮಂಡನೆ

ಆನ್‌ಲೈನ್ ಗೇಮಿಂಗ್ ಬಿಲ್ ನಾಳೆ (ಆಗಸ್ಟ್ 20) ಮಂಡನೆಯಾಗುವ ಸಾಧ್ಯತೆ ಇದೆ. ಮಹತ್ವದ ಬಿಲ್ ಕಾರಣದಿಂದ ಈ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಆಗುವ ಸಾಧ್ಯತೆ ಹೆಚ್ಚಿದೆ. 2023ರಿಂದ ಆನ್‌ಲೈನ್ ಗೇಮಿಂಗ್ ಕುರಿತು ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ. ಇದರ ಬೆನ್ನಲ್ಲೇ ಗರಿಷ್ಠ 28 ಶಕೇಡಾ ಜಿಎಸ್‌ಟಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಬಿದ್ದಿರಲಿಲ್ಲ. 2205ರಲ್ಲಿ ಆನ್‌ಲೈನ್ ಗೇಮಿಂಗ್‌ಗ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗಿದೆ.

ಯುವ ಸಮೂಹಕ್ಕೆ ಅಂಟಿದ್ದ ಗೇಮಿಂಗ್

ಯುವ ಸಮೂಹ ಈ ಆನ್‌ಲೈನ್ ಗೇಮಿಂಗ್ ಮೂಲಕ ಹಲವು ಸಂಕಷ್ಟ ಅನುಭವಿಸಿದೆ. ವಿದ್ಯಾರ್ಥಿಗಳು, ಯುವಕರು ಆನ್‌ಲೈನ್ ಗೇಮಿಂಗ್ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಲವು ಘಟನೆಗಳು ನಡೆದಿದೆ. ಮನೆ ಮಠ ಕಳೆದುಕೊಂಡ ಉದಾಹರಣೆ ಇದೆ. ಇಷ್ಟೇ ಅಲ್ಲ ಅನ್‌ಲೈನ್ ಗೇಮಿಂಗ್ ಚಟಕ್ಕೆ ಹಲವರು ಬಲಿಯಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಆನ್‌ಲೈನ್ ಗೇಮಿಂಗ್ ಬಿಲ್ ಈ ಎಲ್ಲಾ ಆತಂಕಗಳಿಗೆ ಕಡಿವಾಣ ಹಾಕುವ ಸಾಧ್ಯತೆ ಇದೆ.