India Bangladesh Diplomatic Tensions Rise: ಮತ್ತೆ ಭುಗಿಲೆದ್ದ ಭಾರತ-ಬಾಂಗ್ಲಾ ಗಡಿ ವಿವಾದ: ತ್ರಿಪುರಾದಲ್ಲಿ 3 ಬಾಂಗ್ಲಾದೇಶಿಗರ ಹತ್ಯೆ! ತ್ರಿಪುರಾದ ಬಾಂಗ್ಲಾದೇಶ ಗಡಿ ಗ್ರಾಮದಲ್ಲಿ ಒಬ್ಬ ಭಾರತೀಯ ಮತ್ತು ಮೂವರು ಬಾಂಗ್ಲಾದೇಶಿ ಪ್ರಜೆಗಳು ಕೊಲ್ಲಲ್ಪಟ್ಟ ನಂತರ ರಾಜತಾಂತ್ರಿಕ ವಿವಾದ ಭುಗಿಲೆದ್ದಿದೆ.
ದೆಹಲಿ (ಅ.17): ತ್ರಿಪುರಾದ ಬಾಂಗ್ಲಾದೇಶ ಗಡಿ ಗ್ರಾಮದಲ್ಲಿ ನಡೆದ ನಾಲ್ಕು ಹತ್ಯೆಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ವಿವಾದ ಉಂಟಾಗಿದೆ. ತ್ರಿಪುರಾದ ಬಿದ್ಯಾಬಿಲ್ ಗ್ರಾಮದಲ್ಲಿ ಒಬ್ಬ ಭಾರತೀಯ ಮತ್ತು ಮೂವರು ಬಾಂಗ್ಲಾದೇಶಿಗರು ಕೊಂದ ಘಟನೆಯೇ ಈ ವಿವಾದಕ್ಕೆ ಕಾರಣವಾಗಿದೆ. ಭಾರತವು ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಹೇಳಿದೆ. ಬಾಂಗ್ಲಾದೇಶ ಸರ್ಕಾರದ ವಾದವನ್ನು ಭಾರತ ತಿರಸ್ಕರಿಸಿದೆ. ಈ ಘಟನೆ ಭಾರತದೊಳಗೆ ನಡೆದಿದ್ದು, ಜಾನುವಾರುಗಳನ್ನು ಕದಿಯುವ ಪ್ರಯತ್ನವೇ ಈ ದಾಳಿಗೆ ಕಾರಣ ಎಂದು ಭಾರತ ಆರೋಪಿಸಿದೆ.
ಬಾಂಗ್ಲಾದೇಶಿ ಪ್ರಜೆಗಳ ಹತ್ಯೆ ಕಾರಣವೇನು?
ಕಳೆದ ದಿನ ತ್ರಿಪುರಾದಲ್ಲಿ ಒಬ್ಬ ಭಾರತೀಯ ಗ್ರಾಮಸ್ಥ ಮತ್ತು ದೇಶಕ್ಕೆ ಅಕ್ರಮವಾಗಿ ನುಸುಳಿದ ಮೂವರು ಬಾಂಗ್ಲಾದೇಶಿ ಪ್ರಜೆಗಳು ಕೊಂದಿದ್ದರು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಆಗ್ರಹಿಸಿದೆ. ಈ ಘಟನೆಯನ್ನು ಖಂಡಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ, ಬಾಂಗ್ಲಾದೇಶಿ ಪ್ರಜೆಗಳ ಹತ್ಯೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಆರೋಪಿಸಿದೆ.
ಜಾನುವಾರು ಕದ್ದ ಕಾರಣಕ್ಕೆ ಹತ್ಯೆ:
ಇದಾದ ಕೂಡಲೇ ಭಾರತದ ವಿದೇಶಾಂಗ ಸಚಿವಾಲಯ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದೆ. ಈ ಘಟನೆ ಬಾಂಗ್ಲಾದೇಶ ಗಡಿಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಭಾರತದ ಗಡಿಯೊಳಗೆ ನಡೆದಿದೆ ಮತ್ತು ಜಾನುವಾರುಗಳನ್ನು ಕದಿಯುವ ಪ್ರಯತ್ನವೇ ಈ ಹತ್ಯೆಗಳಿಗೆ ಕಾರಣವಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ ಕಳ್ಳತನಕ್ಕೆ ಯತ್ನಿಸಿದ್ದರು. ಸ್ಥಳೀಯರು ಅವರನ್ನು ತಡೆಯಲು ಯತ್ನಿಸಿದಾಗ, ಅವರು ಆಯುಧಗಳಿಂದ ದಾಳಿ ಮಾಡಿದರು. ಆಗ ಸ್ಥಳೀಯರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಮತ್ತು ಮೂರನೆಯವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೂವರ ಮೃತದೇಹಗಳನ್ನು ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಬಾಂಗ್ಲಾದೇಶಿ ಪ್ರಜೆಗಳು ಕಬ್ಬಿಣದ ರಾಡ್‌ಗಳು ಮತ್ತು ಚಾಕುಗಳಿಂದ ತ್ರಿಪುರಾದ ಗ್ರಾಮಸ್ಥರ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಬಾಂಗ್ಲಾದೇಶಿ ಪ್ರಜೆಗಳ ದಾಳಿಯಲ್ಲಿ ತ್ರಿಪುರಾದ ಬಿದ್ಯಾಬಿಲ್ ನಿವಾಸಿಯೊಬ್ಬರು ಕೊಲ್ಲಲ್ಪಟ್ಟರು. ಇದಾದ ನಂತರವೇ ಸ್ಥಳೀಯರು ದಾಳಿಕೋರರನ್ನು ಎದುರಿಸಿದರು. ಗಡಿಯಲ್ಲಿ ಶಾಂತಿ ಕಾಪಾಡಲು ಭಾರತದ ಬದ್ಧತೆಯನ್ನು ವಿವರಿಸಿದ ಭಾರತೀಯ ವಿದೇಶಾಂಗ ವಕ್ತಾರರು, ಕಳ್ಳಸಾಗಣೆ ತಡೆಯಲು ಗಡಿ ಬೇಲಿ ನಿರ್ಮಿಸುವ ಪ್ರಯತ್ನಕ್ಕೆ ಬಾಂಗ್ಲಾದೇಶ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
