‘ನಿಮ್ಮ ಹುಡುಗಿ ಲವ್‌ ಜಿಹಾದ್‌ನ ಸಂತ್ರಸ್ತೆಯಾಗಿದ್ದು, ಸ್ವಧರ್ಮಕ್ಕೆ ಮರಳಲು ಒಪ್ಪದಿದ್ದರೆ ಆಕೆಗೆ ವಿಷ ಕೊಟ್ಟುಬಿಡಿ’ ಎಂದು ತೆಲಂಗಾಣದ ಉಚ್ಚಾಟಿತ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್‌ ಹೇಳಿಕೆ ನೀಡಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೈದರಾಬಾದ್‌: ‘ನಿಮ್ಮ ಹುಡುಗಿ ಲವ್‌ ಜಿಹಾದ್‌ನ ಸಂತ್ರಸ್ತೆಯಾಗಿದ್ದು, ಸ್ವಧರ್ಮಕ್ಕೆ ಮರಳಲು ಒಪ್ಪದಿದ್ದರೆ ಆಕೆಗೆ ವಿಷ ಕೊಟ್ಟುಬಿಡಿ’ ಎಂದು ತೆಲಂಗಾಣದ ಉಚ್ಚಾಟಿತ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್‌ ಹೇಳಿಕೆ ನೀಡಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಲಪಂತೀಯ ಗುಂಪೊಂದು ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ದಸರಾ ಆಚರಣೆ ವೇಳೆ ಸಿಂಗ್‌ ನೀಡಿದ್ದ ಈ ಹೇಳಿಕೆ ವೈರಲ್‌ ಆದ ಹಿನ್ನೆಲೆಯಲ್ಲಿ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ, ಪ್ರವಾದಿ ಮೊಹಮ್ಮದರಿಗೆ ಅಪಮಾನ ಮಾಡಿದ ಆರೋಪವೂ ಇವರಮೇಲಿದೆ. ಸಿಂಗ್‌ ಕಳೆದ ವರ್ಷ, ‘ಲವ್‌ ಜಿಹಾದ್‌ ತಡೆಗಟ್ಟಲು ಕ್ರಿಶ್ಚಿಯನ್ನರು ಹಿಂದೂಗಳೊಂದಿಗೆ ಒಗ್ಗೂಡಬೇಕು’ ಎಂದು ಕರೆ ನೀಡಿದ್ದರು. ಅದಕ್ಕೂ ಮೊದಲು ಪ್ರವಾದಿಯ ಬಗ್ಗೆ ಇವರು ವಿಡಿಯೋ ಮಾಡಿ ಜೈಲುವಾಸ ಅನುಭವಿಸಿದ್ದರು.

ಕೇರಳ ಬಂಪರ್‌ ಲಾಟರಿ: ಆಲಪ್ಪುಳ ನಿವಾಸಿಗೆ ಭರ್ಜರಿ ₹25 ಕೋಟಿ!

ಆಲಪ್ಪುಳ: ಕೇರಳದ ‘ತಿರುವೋಣಂ ಬಂಪರ್‌ ಲಾಟರಿ’ ಈ ಬಾರಿ ಆಲಪ್ಪುಳ ನಿವಾಸಿ ಶರತ್‌ ನಾಯರ್‌ ಎಂಬುವರಿಗೆ ಒಲಿದಿದ್ದು, ಅವರು 25 ಕೋಟಿ ರು. ಜಯಿಸಿದ್ದಾರೆ.ಶರತ್‌ ಅವರು ಸ್ಥಳೀಯ ಲತೀಶ್‌ ಅವರಿಂದ ಇದೇ ಮೊದಲ ಬಾರಿಗೆ ಬಂಪರ್‌ ಲಾಟರಿ ಖರೀದಿಸಿದ್ದರು. ಅ.3ರಂದು ಫಲಿತಾಂಶ ಪ್ರಕಟವಾಗಿದೆ. ಈ ಬಗ್ಗೆ ಮಾತನಾಡಿರುವ ಶರತ್‌, ‘ಮೊದಲ ಬಾರಿ ಲಾಟರಿ ಖರೀದಿಸಿದ್ದೆ. ಆದರೆ ನಾನೇ ಗೆಲ್ಲುತ್ತೇನೆ ಅಂದುಕೊಂಡಿರಲಿಲ್ಲ. ಹಣವನ್ನು ಏನು ಮಾಡುವುದು ಎನ್ನುವುದು ತಿಳಿದಿಲ್ಲ. ಫಲಿತಾಂಶ ಬಂದ ದಿನ ಎರಡ್ಮೂರು ಬಾರಿ ಪರಿಶೀಲಿಸಿದೆ. ಬಳಿಕ ಎಸ್‌ಬಿಐನಲ್ಲಿ ಹಣ ಪಡೆದುಕೊಂಡೆ’ ಎಂದು ಹೇಳಿದ್ದಾರೆ.

ಅಣ್ಣಾಮಲೈ ಹೆಸರಲ್ಲಿ ₹10 ಲಕ್ಷ ಸುಲಿಗೆ ಯತ್ನ: ಮೂವರು ಸೆರೆ

ಕೊಯಮತ್ತೂರು: ತಮಿಳುನಾಡಿನ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರ ಹೆಸರಿನಲ್ಲಿ 10 ಲಕ್ಷ ರು. ಸುಲಿಗೆ ಮಾಡಲು ಯತ್ನಿಸಿದ ಮೂವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರನ್ನು ತಿರುಮೂರ್ತಿ (55), ರಸುಕುಟ್ಟಿ (23), ಗೋಕುಲ್‌ (26) ಎಂದು ಗುರುತಿಸಲಾಗಿದೆ.ಅಪಘಾತಕ್ಕೀಡಾಗಿದ್ದ ಅರುಣಾಚಲಂ ಎಂಬುವರಿಗೆ 50 ಲಕ್ಷ ರು. ಅಪಘಾತ ವಿಮೆ ಪಡೆದುಕೊಳ್ಳಲು ಸಹಾಯ ಮಾಡಿದ್ದರು. ಬಳಿಕ, ‘ಅದರಲ್ಲಿ 10 ಲಕ್ಷ ರು. ಕೊಡಿ. ಏಕೆಂದರೆ ಅಣ್ಣಾಮಲೈ ಸಹಾಯದಿಂದ ನಿಮಗೆ ವಿಮೆ ಬಂದಿದೆ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಅರುಣಾಚಲಂ ವಿರೋಧಿಸಿದ್ದಕ್ಕೆ ‘ಪರಿಣಾಮ ಎದುರಿಸಬೇಕಾದೀತು’ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ಅರುಣಾಚಲಂ ನೀಡಿದ ದೂರಿನ ಮೇರೆಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣಾಮಲೈ ಸಹ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಹುಲ್‌ ಗಾಂಧಿ ಕ್ಷೇತ್ರದಲ್ಲಿ ದಲಿತ ವ್ಯಕ್ತಿಯ ಬಡಿದು ಹತ್ಯೆ

ರಾಯ್‌ಬರೇಲಿ: ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಹರಿರಾಂ ಎಂಬ ದಲಿತ ವ್ಯಕ್ತಿಯನ್ನು ಕಳ್ಳ ಎಂದು ಭಾವಿಸಿ ಜನರು ಬಡಿದು ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಸರ್ವತ್ರ ಆಕ್ರೋಶ ವ್ಯಕ್ತವಾಗಿದ್ದು ರಾಹುಲ್‌ ಗಾಂಧಿ ಕೂಡ ಖಂಡಿಸಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಇತ್ತೀಚೆಗೆ ರಾಯ್‌ಬರೇಲಿಯಲ್ಲಿ ಡ್ರೋನ್‌ ಮೂಲಕ ಕಳ್ಳರು ಮನೆ ಸಮೀಕ್ಷೆ ನಡೆಸಿ ಕಳವಿಗೆ ಸಂಚು ರೂಪಿಸುತ್ತಿದ್ದಾರೆ ಎಂಬ ವದಂತಿ ಹರಡಿದೆ. ಈ ವೇಳೆ ಕಳೆದ ಬುಧವಾರ ರಾತ್ರಿ ಹರಿರಾಂ ಎಂಬಾತ ಜಾಮೂನ್‌ ಪುರ ಎಂಬಲ್ಲಿ ಹೋಗುತ್ತಿದ್ದಾಗ ಆತನನ್ನು ಕಳ್ಳ ಎಂದು ಶಂಕಿಸಿದ್ದ ಗುಂಪು, ಬಡಿದು ಹತ್ಯೆ ಮಾಡಿತ್ತು.

6 ತಿಂಗಳಲ್ಲಿ ಪೆಟ್ರೋಲ್‌ ಗಾಡಿಗಳ ಸಮಕ್ಕೆ ಇ.ವಿ. ಬೆಲೆ: ಗಡ್ಕರಿ

ನವದೆಹಲಿ: ‘ಈಗ ಭಾರಿ ದುಬಾರಿ ಆಗಿರುವ ವಿದ್ಯುತ್‌ ಚಾಲಿತ (ಇ.ವಿ.) ವಾಹನಗಳ ಬೆಲೆ, ಇನ್ನು 4-6 ತಿಂಗಳಲ್ಲಿ ಪೆಟ್ರೋಲ್‌ ವಾಹನಗಳ ಬೆಲೆಗೆ ಸಮನಾಗುತ್ತದೆ’ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇವಿಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿರುವ ಮತ್ತು ಜನ ಮೆಲ್ಲಗೆ ಅತ್ತ ಒಲವು ತೋರುತ್ತಿರುವ ನಡುವೆಯೇ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

20ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶೃಂಗಸಭೆ 2025ರಲ್ಲಿ ಮಾತನಾಡಿದ ಗಡ್ಕರಿ, ‘ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತವಾಗಿರುವುದು ಆರ್ಥಿಕತೆ ಮತ್ತು ಪರಿಸರದ ದೃಷ್ಟಿಯಿಂದ ಹಾನಿಕಾರಕ. ಆದ್ದರಿಂದ ದೇಶ ಸ್ವಚ್ಛ ಇಂಧನವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಇನ್ನರ್ಧ ವರ್ಷದಲ್ಲಿ ಪೆಟ್ರೋಲ್‌ ಹಾಗೂ ವಿದ್ಯುತ್‌ ವಾಹನಗಳ ದರ ಸಮವಾಗಲಿದೆ’ ಎಂದರು.

ಇದೇ ವೇಳೆ, ‘ಇನ್ನೈದು ವರ್ಷದಲ್ಲಿ ಭಾರತವನ್ನು ಭಾರತವನ್ನು ಆಟೊಮೊಬೈಲ್‌ ಕ್ಷೇತ್ರದಲ್ಲಿ ಜಗತ್ತಿನ ನಂ.1 ದೇಶವಾಗಿಸುವುದು ನಮ್ಮ ಗುರಿ’ ಎಂದು ಹೇಳಿದರು. ಪ್ರಸ್ತುತ ದೇಶದ ಆಟೊಮೊಬೈಲ್‌ ಕ್ಷೇತ್ರದ ಗಾತ್ರ 14 ಲಕ್ಷ ಕೋಟಿ ರು. ಇದೆ.