ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಕೇರಳದ ಗುರುವಾಯೂರು ದೇವಸ್ಥಾನ ಅಪವಿತ್ರಗೊಳಿಸಿದ ಆರೋಪ ಕೇಳಿಬಂದಿದೆ. ವ್ಲಾಗರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಸ್ಮಿನ್ ಜಾಫರ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯಗಳು ನಡೆಯುತ್ತಿದೆ.
ತ್ರಿಶೂರ್ (ಆ.26) ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ದೇಗುಲ. ಶ್ರೀಕೃಷ್ಣನ ಕಾಲದಲ್ಲೇ ಈ ಮಂದಿರ ನಿರ್ಮಾಣವಾಗಿದೆ ಅನ್ನೋ ಐತಿಹ್ಯಗಳಿವೆ. ಇದೀಗ ಗುರುವಾಯೂರು ಶ್ರೀಕೃಷ್ಣ ದೇಗುಲವನ್ನೇ ಅಪವಿತ್ರಗೊಳಿಸಿದ ಗಂಭೀರ ಆರೋಪ ಕೇಳಿಬಂದಿದೆ. ಕೇರಳದ ವ್ಲಾಗರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಸ್ಮಿನ್ ಜಾಫರ್ ಗುರುವಾಯೂರು ದೇಗುಲದಲ್ಲಿ ಮಾಡಿದ ವಿಡಿಯೋದಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ಗುರುವಾಯೂರು ದೇವಸ್ಥಾನದ ಪವಿತ್ರ ಕೊಳದಲ್ಲಿ ಜಾಸ್ಮಿನ್ ಜಾಫರ್ ಕಾಲುಗಳನ್ನು ತೊಳೆದಿದ್ದಾರೆ. ಇದು ಹಿಂದುಯೇತರರಿಗೆ ಸಂಪೂರ್ಣವಾಗಿ ನಿಷಿದ್ಧ ವಲಯವಾಗಿದೆ. ದೇವಸ್ಥಾನದ ತೀರ್ಥಕ್ಕೆ ಬಳಕೆಯಾದುವ ಈ ಕೆರೆ ಬಳಿ ಹಿಂದುಯೇತರ ಜಾಸ್ಮಿನ್ ಜಾಫರ್ ತೆರಳಿದ್ದು ಮಾತ್ರವಲ್ಲ, ಕಾಲುಗಳನ್ನು ತೊಳೆದು ಅಪವಿತ್ರಗೊಳಿಸಿದ್ದಾರೆ. ಈಕೆ ತಾನು ಕಾಲುಗಳನ್ನು ತೊಳೆಯುತ್ತಿರುವ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ದೇವರ ಕಾರ್ಯಗಳಿಗೆ ನೀರು ಬಳಕೆ
ಆಗಸ್ಟ್ 20 ರಂದು ಜಾಸ್ಮಿನ್ ಜಾಫರ್ ಗುರುವಾಯುರು ದೇವಸ್ಥಾನಕ್ಕೆ ಭೇಟಿ ನೀಡಿ ಪವಿತ್ರ ಕೆರೆಯಲ್ಲಿ ಕಾಲುಗಳನ್ನು ತೊಳೆದಿದ್ದಾರೆ. 6 ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದ. ಜಾಸ್ಮಿನ್ ಜಾಫರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಕಳೆದ 6 ದಿನಗಳಿಂದೆ ಇದೇ ಕೆರೆಯಿಂದ ತೀರ್ಥವನ್ನು ತಂದು ದೇವಸ್ಥಾನದ ಪೂಜೆಗೆ ಬಳಕೆ ಮಾಡಲಾಗಿದೆ. ಇದೇ ಕೆರೆಯಿಂದ ನೀರಿನಿಂದ ದೇವರ ಕಾರ್ಯಗಳು, ಪೂಜಾ ಕಾರ್ಯಗಳು ಮಾಡಲಾಗಿದೆ. ಹೀಗಾಗಿ ದೇವಸ್ಥಾನ ಅಪವಿತ್ರಗೊಂಡಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಒಬಿ ಅರುಣ್ ಕುಮಾರ್ ಹೇಳಿದ್ದಾರೆ.
ದೇವಸ್ಥಾನ ಶುದ್ಧೀಕರಣದಲ್ಲಿ ತೊಡಗಿದ ಆಡಳಿತ ಮಂಡಳಿ
ದೇವಸ್ಥಾನದ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಇದೀಗ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯಗಳು ನಡೆಯುತ್ತಿದೆ. ಸಂಪೂರ್ಣ ದೇಗುಲ ಶುದ್ದೀಕರಣ ಮಾಡಲಾಗುತ್ತದೆ. ಜಾಸ್ಮಿನ್ ಜಾಫರ್ ಕಾಲು ತೊಳೆದ ಕೆರೆಯನ್ನು ಶುದ್ಧೀಕರಣ ಗೊಳಿಸಲಾಗುತ್ತದೆ. ಹಲವು ಹಂತ ಹಾಗೂ ಹಲವು ವಿದದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ.
ಕಳೆದ 6 ದಿನಗಳ ಪೂಜಾ ಕಾರ್ಯ ಮತ್ತೊಮ್ಮೆ
ಅಪವಿತ್ರಗೊಂಡ ದೇವಸ್ಥಾನದಲ್ಲಿ ಕಳೆದ 6 ದಿನಗಳಿಂದ ಮಾಡಿದ ಪೂಜಾ ಕಾರ್ಯಗಳಿಗೆ ಫಲವಿಲ್ಲ ಎಂದು ಅರ್ಚಕರು ಹೇಳಿದ್ದಾರೆ. ಹೀಗಾಗಿ ಕಳೆದ 6 ದಿನಗಳ ಪೂಜಾ ಕಾರ್ಯಗಳು ಮತ್ತೆ ನಡೆಯಲಿದೆ.
ಭಕ್ತರ ದರ್ಶನಕ್ಕೆ ತಡೆ, ಶುದ್ಧೀಕರಣದ ಬಳಿಕ ಅವಕಾಶ
ಗುರುವಾಯುರ್ ದೇಗುಲ ಶುದ್ಧೀಕರಣ, ಪೂಜಾ ಕಾರ್ಯಗಳನ್ನು ಮತ್ತೆ ಮಾಡಲಿರುವ ಕಾರಣ ಇಂದು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನ ಭಾಗ್ಯ ಇರಲಿಲ್ಲ. ಎಲ್ಲಾ ಪೂಜಾ ಕಾರ್ಯಗಳ ಬಳಿಕ ಭಕ್ತರ ದರ್ಶನಕ್ಕೆ ಮುಕ್ತ ಮಾಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.
ಜಾಸ್ಮಿನ್ ಜಾಫರ್ ವಿರುದ್ಧ ದೂರು
ಹಿಂದೂಯೇತರರಿಗೆ ಪ್ರವೇಶ ನಿಷಿದ್ಧ ಇರುವ ಜಾಗಕ್ಕೆ ತೆರಳಿದ್ದು ಮಾತ್ರವಲ್ಲ, ಪವಿತ್ರ ಕೊಳದಲ್ಲಿ ಕಾಲು ತೊಳೆದು ದೇವಸ್ಥಾನವನ್ನೂ ಅಪವಿತ್ರಗೊಳಿಸಿದ ಜಾಸ್ಮಿನ್ ಜಾಫರ್ ವಿರುದ್ಧ ಗುರುವಾಯೂರು ಆಡಳಿತ ಮಂಡಳಿ ದೂರು ನೀಡಿದೆ. ಜಾಸ್ಮಿನ್ ಜಾಫರ್ ಗುರುವಾಯುರ್ ದೇವಸ್ಥಾನದ ಸಂಪ್ರದಾಯಕ್ಕೆ ಹಾಗೂ ಪದ್ಧತಿ ಉಲ್ಲಂಘಿಸಿದ್ದಾರೆ. ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಅತ್ಯಂತ ಪವಿತ್ರ ದೇಗುಲವನ್ನು ತನ್ನ ನಡೆ ಹಾಗೂ ಕಾರ್ಯದಿಂದ ಅಪವಿತ್ರಗೊಳಿಸಿದ್ದಾರೆ. ಇಷ್ಟೇ ಅಲ್ಲ ಕೇರಳ ಹೈಕೋರ್ಟ್ ಸೂಚಿಸಿದಂತೆ ದೇವಸ್ಥಾನದಲ್ಲಿ ಆವರಣದಲ್ಲಿ ವಿಡಿಯೋ, ರೀಲ್ಸ್ ಶೂಟಿಂಗ್ ಆದೇಶವನ್ನೂ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ ಜಾಸ್ಮಿನ್ ಜಾಫರ್ ಕ್ಷಮೆ ಕೇಳಿದ್ದಾರ.
