ಛತ್ತೀಸ್‌ಗಢದ ಅಂಬಿಕಾಪುರದಲ್ಲಿರುವ ಒಂದು ವಿಶಿಷ್ಟ ಕೆಫೆಯು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಉಚಿತ ಊಟ ನೀಡುತ್ತಿದೆ. ಈ ಉಪಕ್ರಮವು ಪರಿಸರ ಸ್ವಚ್ಛತೆ ಮತ್ತು ಹಸಿವು ನಿವಾರಣೆ ಎರಡನ್ನೂ ಒಟ್ಟಿಗೆ ಸಾಧಿಸುತ್ತಿದೆ.
ನಾವು ಆಗಾಗೆ ನೀರು ಕುಡಿಯುತ್ತೇವೆ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆ, ಉದ್ಯಾನವನ ಬೇಕೆಂದರಲ್ಲಿ ಯಾವುದೇ ಕಾಳಜಿಯಿಲ್ಲದೆ ಎಸೆದು ಹೋಗುತ್ತೇವೆ. ಇದಾದ ನಂತರ, ಕಸ ತೆಗೆಯುವವರು ಈ ಕಸವನ್ನು ಎತ್ತಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಇದು ತುಂಬಾ ಸಾಮಾನ್ಯವೆಂದು ತೋರುತ್ತದೆ, ಆದರೆ ಛತ್ತೀಸ್‌ಗಢದ ಅಂಬಿಕಾಪುರ ನಗರದ ಕೆಫೆ ಹೇಗಿದೆ ನೋಡಿ. ಈ ಹೋಟೆಲ್ ಜನರಿಂದ ಪ್ಲಾಸ್ಟಿಕ್ ತ್ಯಾಜ್ಯ ಸ್ವೀಕರಿಸಿ ಅದಕ್ಕೆ ಬದಲಾಗಿ ಪೂರ್ಣ ಊಟವನ್ನು ಉಚಿತವಾಗಿ ನೀಡುತ್ತೆ! ಹೌದು ನೀವು ಸಹ ಇದನ್ನು ಕೇಳಿ ಆಶ್ಚರ್ಯಚಕಿತರಾಗಿರಬೇಕು. ನೀವಿಲ್ಲಿ ಊಟ ಮಾಡಲು ಹಣ ನೀಡಬೇಕಿಲ್ಲ, ಬದಲಾಗಿ ಕಸ ನೀಡಿದರೆ ಸಾಕು! ಹಾಗಾದರೆ ಈ ಕೆಫೆಯ ವಿಶಿಷ್ಟತೆ ಬಗ್ಗೆ ಇಲ್ಲಿ ತಿಳಿಯೋಣ.
ಛತ್ತೀಸ್‌ಗಢದ ಅಂಬಿಕಾಪುರ ನಗರದ ಗಾರ್ಬೇಜ್ ಕೆಫೆ ತನ್ನ ಅನನ್ಯ ಸೇವೆಯಿಂದ ಎಲ್ಲರ ಗಮನ ಸೆಳೆದಿದೆ. ಇಲ್ಲಿ, ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಉಚಿತವಾಗಿ ಆಹಾರ ಪಡೆಯುತ್ತಾರೆ. 2019ರಲ್ಲಿ ಅಂಬಿಕಾಪುರ ಪುರಸಭೆಯು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಈ ಕೆಫೆಯನ್ನು ಪ್ರಾರಂಭಿಸಿತು. ಇದರ ಉದ್ದೇಶ ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಬಡವರು ಹಾಗೂ ನಿರಾಶ್ರಿತರಿಗೆ ಆಹಾರ ಒದಗಿಸುವುದು.
ಪರಿಸರ ಮಾಲಿನ್ಯ-ಹಸಿವು ಏಕಕಾಲದಲ್ಲಿ ಎರಡು ಸಮಸ್ಯೆಗಳಿಗೆ ಪರಿಹಾರ:
ಕೆಫೆಯ ಕಾರ್ಯವಿಧಾನ: ಇಲ್ಲಿ 1 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿದರೆ, ಕಸಕ್ಕೆ ಬದಲಾಗಿ ಪೌಷ್ಟಿಕ ಊಟದ ತಟ್ಟೆಯನ್ನು ಉಚಿತವಾಗಿ ಪಡೆಯಬಹುದು. ಅರ್ಧ ಕೆಜಿ (500 ಗ್ರಾಂ) ಪ್ಲಾಸ್ಟಿಕ್ ಕೊಟ್ಟರೆ ವಡಾ ಪಾವ್ ಅಥವಾ ಸಮೋಸಾದಂತಹ ಉಪಾಹಾರವನ್ನು ನೀಡಲಾಗುತ್ತದೆ. ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಗೆ ಕಳುಹಿಸಲಾಗುತ್ತದೆ, ಇದರಿಂದ ನಗರದ ಕಸದ ರಾಶಿಗಳು ಕಡಿಮೆಯಾಗಿ, ಪರಿಸರವು ಸ್ವಚ್ಛವಾಗುತ್ತಿದೆ. ಹಸಿವುನಿಂದ ಬಳಲುತ್ತಿರುವವರು ಪ್ಲಾಸ್ಟಿಕ್ ಕಸ ತಂದು ಉಚಿತವಾಗಿ ಊಟ ಮಾಡುತ್ತಿದ್ದಾರೆ.
ವಿಶೇಷತೆ ಏನು? ಈ ಕೆಫೆ ಪ್ರಾರಂಭ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವ ಜೊತೆಗೆ, ಕಸ ಎತ್ತುವವರಿಗೆ ಮತ್ತು ಹಸಿವಿನಿಂದ ಬಳಲುವವರಿಗೆ ಆಹಾರ ಒದಗಿಸುವ ಮೂಲಕ ಇದು ಸಾಮಾಜಿಕ ಕಲ್ಯಾಣಕ್ಕೂ ನೆರವಾಗಿದೆ. ಈ ಕೆಫೆ ಅಂಬಿಕಾಪುರವನ್ನು ದೇಶದಾದ್ಯಂತ ಮಾದರಿಯಾಗಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಫೆಯ ಕುರಿತಾದ ಚಿತ್ರಗಳು, ಸ್ಟೋರಿಗಳು ವೈರಲ್ ಆಗುತ್ತಿವೆ.
ಗಾರ್ಬೇಜ್ ಕೆಫೆಯ ಈ ಉದಾತ್ತ ಹೆಜ್ಜೆಯು ಪರಿಸರ ಸಂರಕ್ಷಣೆ ಮತ್ತು ಮಾನವೀಯತೆಯನ್ನು ಸಮತೋಲನಗೊಳಿಸುವ ಒಂದು ಉತ್ತಮ ಉದಾಹರಣೆ. ಒಳ್ಳೆಯ ಉದ್ದೇಶದೊಂದಿಗೆ ಸೃಜನಶೀಲ ಯೋಜನೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
