ಚುನಾವಣೆ ಹೊಸ್ತಿನಲ್ಲಿರುವ ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯ ಕೀಳು ಹೇಳಿಕೆ ಸದ್ದು ಮಾಡಿದ್ದು, ಆರ್‌ಜೆಡಿ ಮಾಜಿ ನಾಯಕ ರಾಜ್‌ ಬಲ್ಲಭ್‌ ಅವರು, ‘ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಪತ್ನಿ ಜರ್ಸಿ ಹಸು’ ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

 ನವಾಡಾ (ಬಿಹಾರ)ಚುನಾವಣೆ ಹೊಸ್ತಿನಲ್ಲಿರುವ ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯ ಕೀಳು ಹೇಳಿಕೆ ಸದ್ದು ಮಾಡಿದ್ದು, ಆರ್‌ಜೆಡಿ ಮಾಜಿ ನಾಯಕ ರಾಜ್‌ ಬಲ್ಲಭ್‌ ಅವರು, ‘ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಪತ್ನಿ ಜರ್ಸಿ ಹಸು’ ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಮಾಜಿ ಶಾಸಕ ರಾಜ್‌ ಬಲ್ಲಭ್‌, ತೇಜಸ್ವಿ ಪತ್ನಿ ವಿರುದ್ಧ ಕೀಳಾಗಿ ಮಾತನಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ತೇಜಸ್ವಿ ಯಾದವ್‌ ಬಿಹಾರದ ಯಾದವರ ಮತಗಳನ್ನು ಬಯಸುತ್ತಾರೆ. ಆದರೆ ಆ ಸಮುದಾಯದ ಹುಡುಗಿ ತನ್ನ ಹೆಂಡತಿಯಾಗಲು ಯೋಗ್ಯಳೆಂದು ಅವರು ಭಾವಿಸಿರಲಿಲ್ಲ. ಬಹುಶಃ ಅವರು ಜೆರ್ಸಿ ದನವನ್ನು (ಅನ್ಯ ಭಾಗದ ಹಸು) ಹುಡುಕಿದ್ದರು’ ಎಂದಿದ್ದಾರೆ.

ತೇಜಸ್ವಿ ಚಂಡೀಗಢದ ರಾಜಶ್ರೀ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.

ವಿಶ್ವಾಸಮತಕ್ಕೆ ಸೋಲು; ಫ್ರಾನ್ಸ್‌ ಪ್ರಧಾನಿ ರಾಜೀನಾಮೆ

ಪ್ಯಾರಿಸ್: ಫ್ರಾನ್ಸ್ ಆರ್ಥಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲರಾದ ಆರೋಪ ಹೊತ್ತಿದ್ದ ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್‌ ಬೇರೂ ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಕಳೆದುಕೊಂಡಿದ್ದಾರೆ. 354-194 ಮತದಿಂದ ಅವರು ಸೋತಿದ್ದಾರೆ. 12 ತಿಂಗಳಲ್ಲಿ ಬದಲಾದ 3ನೇ ಫ್ರೆಂಚ್‌ ಪ್ರಧಾನಿ ಅವರಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಮ್ಯಾಕ್ರಾನ್‌ಗೆ ವರ್ಷದಲ್ಲಿ 4ನೇ ಪ್ರಧಾನಿ ಆಯ್ಕೆಯ ಸವಾಲು ಎದುರಾಗಿದೆ.

ಆರ್‌ಎಸ್‌ಎಸ್‌ ನಾಯಕ ಹೊಸಬಾಳೆಗೆ ಹೈ ಬೀಪಿ: ಆಸ್ಪತ್ರೆಗೆ ದಾಖಲು

ನವದೆಹಲಿ: ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ರಕ್ತದೊತ್ತಡ ಹೆಚ್ಚಾದ ಕಾರಣ ಸೋಮವಾರ ರಾಜಸ್ಥಾನದ ಜೋಧಪುರ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಮೇಲೆ ನಿಗಾ ವಹಿಸಲಾಗಿದೆ. ಅವರು ಸದ್ಯಕ್ಕೆ ಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.‘ಹೊಸಬಾಳೆ ಈಗ ಚೇತರಿಸಿಕೊಂಡಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್‌ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಹಿರಿಯ ನಾಯಕರನ್ನೊಳಗೊಂಡ 3 ದಿನಗಳ ಸಭೆ ಜೋಧಪುರದಲ್ಲಿ ಭಾನುವಾರ ಮುಕ್ತಾಯವಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಹೊಸಬಾಳೆಗೆ ಹೈ ಬೀಪಿ ಬಾಧಿಸಿದೆ.