ಭಾರತದ ರಸ್ತೆ, ಗಲ್ಲಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಸವಾಲು. ಇದೀಗ ಭಾರತೀಯರಲ್ಲಿ ಜಾಗೃತಿ ಮೂಡಿಸಲು ಸರ್ಬಿಯಾದ ಯುವಕ ಪ್ರತಿ ದಿನ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ದಿನ ಒಂದು ಗಲ್ಲಿ ಶುಚಿಗೊಳಿಸಿ ಮಾದರಿಯಾಗಿದ್ದಾನೆ.

ಗುರುಗಾಂವ್ (ಆ.16) ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನ ಆರಂಭಿಸಿದ ಬಳಿಕ ಸ್ವಚ್ಚತೆ ಬಗ್ಗೆ ಕೆಲ ಜಾಗೃತಿಗಳು ಮೂಡಿದರೂ ಭಾರತ ಸ್ವಚ್ಚವಾಗಿಲ್ಲ. ಜನರು ತಮ್ಮ ಸಂಪ್ರದಾಯ ಬಿಟ್ಟಿಲ್ಲ. ಕಸ ಕಡ್ಡಿಗಳನ್ನು, ತ್ಯಾಜ್ಯಗಳನ್ನು ಬೇಕಾ ಬಿಟ್ಟಿ ಎಸೆಯುವುದು, ಪ್ರದೇಶವನ್ನು ಹಾಳು ಮಾಡುವುದು ಭಾರತದಲ್ಲಿ ದೊಡ್ಡ ಅಪರಾಧವಾಗಿ ಯಾರೂ ಕಂಡಿಲ್ಲ. ಇತ್ತ ಸರ್ಕಾರ, ಸ್ಥಳೀಯ ಆಡಳಿತ ಕೂಡ ಪರಿಣಾಮಕಾರಿಯಾಗಿ ಶುಚಿತ್ವದ ಕಡೆಗೆ ಗಮನ ನೀಡಿಲ್ಲ. ಇದರ ನಡುವೆ ಸರ್ಬಿಯಾದ ಯುವಕ ಭಾರತದ ಸ್ವಚ್ಚತಾ ಅಭಿಯಾನದ ಸವಾಲು ಸ್ವೀಕರಿಸಿದ್ದಾರೆ. ಒಂದು ದಿನ ಒಂದು ಗಲ್ಲಿ ಅಭಿಯಾನದಡಿ ಗುರುಗಾಂವ್ ಸೆಕ್ಟರ್ 55ರಲ್ಲಿ ಹಲವು ಪ್ರದೇಶ ಸ್ವಚ್ಚಗೊಳಿಸಿ ಮಾದರಿಯಾಗಿದ್ದಾನೆ. ಭಾರತದ ಗಲ್ಲಿ ಶುಚಿಗೊಳಿಸಲು ಸರ್ಬಿಯಾದ ಯುವಕ ಬರಬೇಕಾಯ್ತು. ಸ್ವಾತಂತ್ರ್ಯ ದಿನಾಚರಣೆಗೆ ಆರಂಭಿಸಿದ ಈ ಅಭಿಯಾನ ಯಶಸ್ವಿಯಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ಲೀನ್ ಇಂಡಿಯಾ ಅಭಿಯಾನ

ಕ್ಲೀನ್ ಇಂಡಿಯಾ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಸರ್ಬಿಯಾದ 32 ವರ್ಷದ ಯುವಕ ಲೇಜರ್ ಜ್ಯಾಂಕೋವಿಚ್ ಈ ಸ್ವಚ್ಚತಾ ಅಭಿಯಾನ ನಡೆಸಿದ್ದಾರೆ. ಸ್ವಾತಂತ್ರ್ಯ ದಿನಚಾರಣೆಗೂ ಒಂದು ವಾರ ಮೊದಲು ಈ ಅಭಿಯಾನ ಆರಂಭಿಸಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಗೆ ಗುರುಗಾಂವ್ ಸೆಕ್ಟರ್ 55 ಸ್ವಚ್ಚಗೊಳಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿತ್ತು. ಸ್ವತಃ ಕಸ ಕಡ್ಡಿ, ತ್ಯಾಜ್ಯಗಳನ್ನು ಹೆಕ್ಕಿ ವಿಲೇವಾರಿ ಮಾಡಿದ್ದಾನೆ. ಪ್ರತಿ ದಿನ ಒಂದು ಗಲ್ಲಿಯಂತೆ ಶುಚಿಗೊಳಿಸಿದ್ದಾನೆ.

7 ದಿನ ಭಾರತದ ಗಲ್ಲಿ ಗಲ್ಲಿ ಶುಚಿಗೊಳಿಸಿದ ವಿದೇಶಿಗ

ಒಟ್ಟು 7 ದಿನ ಗಲ್ಲಿ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಮೂರು ದಿನವಾಗುತ್ತಿದ್ದಂತೆ ಈತನ ಅಭಿಯಾನ ದೇಶಾದ್ಯಂತ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಹಲವು ಭಾರತೀಯರು ಕೈಜೋಡಿಸಿದ್ದಾರೆ. ಸರ್ಬಿಯಾ ಯುವಕನ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಸತತ 7 ದಿನ ಹಲವು ಪ್ರದೇಶ ಶುಚಿಗೊಳಿಸಿದ್ದಾನೆ. ಈತನ ಈ ಕಾರ್ಯದಿಂದ ಸರ್ಬಿಯಾದಲ್ಲಿ ಲೇಜರ್ ಜಾಂಕೋವಿಚ್ ಸುದ್ದಿಯಾಗಿದ್ದಾನೆ.

ಭಾರತೀಯರು ಶುಚಿತ್ವದ ಕಡೆ ಗಮನವಹಿಸಬೇಕು ಎಂದ ಯುವಕ

ಭಾರತೀಯರು ರಸ್ತೆ, ಪ್ರದೇಶಗಳ ಕಡೆ ಶುಚಿತ್ವಕ್ಕೆ ಗಮನ ನೀಡುತ್ತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಒಬ್ಬ ನಾಗರೀಕನಿಗೆ ಹಲವು ಜವಾಬ್ದಾರಿಗಳಿರುತ್ತದೆ. ಈ ಪೈಕಿ ಶುಚಿತ್ವ ಕೂಡ ಒಂದು. ಸಿಕ್ಕ ಸಿಕ್ಕಲ್ಲಿ ಉಗುಳುವುದು, ತ್ಯಾಜ್ಯ ಎಸೆಯುವುದು, ಪೇಪರ್, ಬಾಟಲಿ ಎಸೆಯುವುದು ಭಾರತದಲ್ಲಿ ಸರ್ವೇ ಸಾಮಾನ್ಯ. ಪ್ರಾಕೃತಿಕವಾಗಿ ಸುಂದರ ದೇಶವನ್ನು ಜನರೇ ಹಾಳು ಮಾಡುತ್ತಿರವುದು ಅತೀ ದೊಡ್ಡ ದುರಂತ ಎಂದಿದ್ದಾನೆ. ಈತನ ಕಾರ್ಯಕ್ಕೆ ಹಲವರು ಬೆಂಬಲ ಸೂಚಿಸಿದ್ದಾರೆ.

View post on Instagram