ಆನ್‌ಲೈನ್ ಸಮೀಕ್ಷೆಗೆ ಅವಕಾಶ ಇದೆ. ಸಮೀಕ್ಷೆ ವಿಚಾರವಾಗಿ ಯಾರಿಗೂ ಸಂಶಯ ಬೇಡ. ಸಾಮಾಜಿಕ, ಶೈಕ್ಷಣಿಕವಾಗಿ ಸಹಾಯ ಮಾಡಲು ಅಷ್ಟೆ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ದೆಹಲಿ (ಸೆ.22): ಸಮೀಕ್ಷೆ ವಿಚಾರವಾಗಿ ಯಾರಿಗೂ ಸಂಶಯ ಬೇಡ. ಸಾಮಾಜಿಕ, ಶೈಕ್ಷಣಿಕವಾಗಿ ಸಹಾಯ ಮಾಡಲು ಅಷ್ಟೆ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಈಗ ನಿಮಗೆ ಅವಕಾಶ ಕೊಟ್ಟಿದ್ದೇವೆ ದಯಮಾಡಿ ಎಲ್ಲ ಸಮಾಜದವರು ಜಾಗೃತರಾಗಿ, ಗಣತಿಯಲ್ಲಿ ಭಾಗಿಯಾಗಿ ಬೇರೆ ದೇಶದಲ್ಲಿ ಇದ್ದರೂ ಆನ್‌ಲೈನ್ ಸಮೀಕ್ಷೆಗೆ ಅವಕಾಶ ಇದೆ.
ಎಲ್ಲಾ ಸಮಾಜದವರು ಜಾಗೃತರಾಗಬೇಕು, ಬಡವರು ಹಿಂದುಳಿದವರು ಯಾರೇ ಇರಲಿ, ಯಾವುದೇ ದೇಶದಲ್ಲಿ ಇರಲಿ, ನಿಮ್ಮ ಕುಟುಂಬದವರು ಅದನ್ನು ಬರೆಸಬೇಕು. ಸರ್ಕಾರ ಎಲ್ಲರಿಗೂ ನ್ಯಾಯ ಕೊಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಜಾತಿ ಗಣತಿ ವಿಚಾರದಲ್ಲಿ ರಂಭಾಪುರಿ ಸ್ವಾಮೀಜಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಸಮಾಜದವರು ನಿಮ್ಮ ಮುಖಂಡರು ಈ ಸಮೀಕ್ಷೆಯನ್ನು ಸದುಪಯೋಗ ಪಡೆದುಕೊಳ್ಳಲಿ ಎಂದರು.
ಇನ್ನು, ಬೆಂಗಳೂರು ಗುಂಡಿಗಳ ವಿಚಾರವಾಗಿ ಪ್ರತಿಕ್ರಿಯಿಸಿ, 25 ವರ್ಷಗಳಿಂದ ಗುಂಡಿಗಳಿವೆ. ಸರ್ಕಾರ ಮುಚ್ಚುತ್ತಲೇ ಇವೆ. ದೆಹಲಿಯಲ್ಲೂ ಸಹ ಗುಂಡಿಗಳಿವೆ. ಆದರೆ ಬೆಂಗಳೂರಿನ ಗುಂಡಿಗಳೇ ಹೆಚ್ಚು ಸುದ್ದಿಯಾಗುತ್ತವೆ. ಶನಿವಾರ ಸಿಎಂ ಕೂಡ ಗುಂಡಿ ಮುಚ್ಚಲು ₹750 ಕೋಟಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅ.31ಕ್ಕೆ ಗುಂಡಿ ಮುಚ್ಚಲು ಡೆಡ್‌ಲೈನ್ ಕೊಡಲಾಗಿದೆ ಎಂದು ಹೇಳಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಅವರನ್ನು ದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ಸೌಜನ್ಯದ ಭೇಟಿ ಮಾಡಿದರು.
ಇಂದಿನಿಂದ ಸಮೀಕ್ಷೆ
ನವರಾತ್ರಿ ಆರಂಭದ ದಿನ ಸೆ. 22 ರಿಂದಲೇ ಆರಂಭವಾಗಲಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬ ಭಾಗವಹಿಸಿ ಅಗತ್ಯ ಮಾಹಿತಿ ನೀಡಿ ಸಹಕರಿಸಲು ಜಿಲ್ಲಾಡಳಿತವು ಜಿಲ್ಲೆಯ ಜನತೆಗೆ ಮನವಿ ಮಾಡಿದೆ. ಸಮೀಕ್ಷೆ ಮುಗಿಯುವ ವರೆಗೆ ಮನೆ ಬಾಗಿಲಿಗೆ ಅಂಟಿಸಿರುವ ಸ್ಟಿಕರ್ ತೆಗೆಯಬಾರದು. ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬದ ಎಲ್ಲ ಸದಸ್ಯರು ಶಿಕ್ಷಣ, ಉದ್ಯೋಗ, ಸೌಲಭ್ಯ ಪಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಜರುಗುವಂತೆ ಸಹಕರಿಸಬೇಕು. ಈಗಾಗಲೇ ಸಮೀಕ್ಷೆ ಮಾಡುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವಿಕೆ ಹಾಗೂ ಗಣತಿದಾರರಿಗೆ ಯಾವ ಮನೆಗಳ ಸಮೀಕ್ಷೆ ಮಾಡಬೇಕೆಂಬ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಅವರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ.
