ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಪಕ್ಷಗಳ ಕೂಟಕ್ಕೆ ಗೆಲುವು ತಂದುಕೊಟ್ಟ ಭರ್ಜರಿ ಗ್ಯಾರಂಟಿ ಭಾಗ್ಯವನ್ನು ಇದೀಗ ಚುನಾವಣೆಗೆ ಸಜ್ಜಾಗಿರುವ ಬಿಹಾರಕ್ಕೂ ವಿಸ್ತರಿಸಲಾಗಿದೆ. ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ತೇಜಸ್ವಿ ಯಾದವ್..
ಪಟನಾ (ಅ.29): ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಪಕ್ಷಗಳ ಕೂಟಕ್ಕೆ ಗೆಲುವು ತಂದುಕೊಟ್ಟ ಭರ್ಜರಿ ಗ್ಯಾರಂಟಿ ಭಾಗ್ಯವನ್ನು ಇದೀಗ ಚುನಾವಣೆಗೆ ಸಜ್ಜಾಗಿರುವ ಬಿಹಾರಕ್ಕೂ ವಿಸ್ತರಿಸಲಾಗಿದೆ. ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟ, ಮುಂಬರುವ ಚುನಾವಣೆಗೆ ತನ್ನ ಪ್ರಣಾಳಿಕೆಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವು ಗ್ಯಾರಂಟಿಗಳನ್ನು ಘೋಷಿಸಲಾಗಿದೆ.
ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಹೆಸರಲ್ಲಿರುವ 32 ಪುಟಗಳ ‘ಬಿಹಾರದ ತೇಜಸ್ವಿ ಪ್ರಮಾಣ’ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ, ವಕ್ಫ್ ತಿದ್ದುಪಡಿ ಕಾಯ್ದೆ ರದ್ದು, ಪ್ರತಿ ಕುಟುಂಬಕ್ಕೆ 25 ಲಕ್ಷ ರು. ಮೌಲ್ಯದ ಜೀವ ವಿಮೆ ಹಳೆ ಪಿಂಚಣಿ ಯೋಜನೆ ಜಾರಿ, ಕರ್ನಾಟಕದ ಗೃಹಜ್ಯೋತಿ ಮಾದರಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿಯಂತೆ ಮಾಸಿಕ 2500 ರು. ಆರ್ಥಿಕ ನೆರವಿನಂತಹ 25 ಆಶ್ವಾಸನೆಗಳನ್ನು ನೀಡಲಾಗಿದೆ.
ಈ ವೇಳೆ ಎದುರಾಳಿ ಕೂಟದ ಬಗ್ಗೆ ಮಾತನಾಡಿದ ತೇಜಸ್ವಿ, ‘ಬಿಹಾರದ ಜನತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ವ್ಯವಸ್ಥೆ ಬೇಕಿದೆ. ಆದರೆ ದೂರದೃಷ್ಟಿಯಿಲ್ಲದ ಎನ್‌ಡಿಎ ಕೂಟ ಇನ್ನಾದರೂ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಆದರೆ ನಮ್ಮ ಪ್ರಣಾಳಿಕೆಯು ಬಿಹಾರ ಅಭಿವೃದ್ಧಿಯ ನಕ್ಷೆಯಾಗಿದೆ. ಇದು ರಾಜ್ಯವನ್ನು ನಂ.1 ಮಾಡುತ್ತದೆ. ಅಪರಾಧ ಮತ್ತು ವಂಚನೆ ಮುಕ್ತ ಆಡಳಿತವನ್ನು ಬಯಸಿರುವ ಜನ ಎನ್‌ಡಿಎಗೆ ಸರಿಯಾಗಿ ಪಾಠ ಕಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ತೇಜಸ್ವಿ ಭರವಸೆಗಳೇನು?: ಇಂಡಿಯಾ ಕೂಟ ಸರ್ಕಾರ ರಚಿಸಿದ 20 ದಿನದೊಳಗೆ ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ. ಅಧಿಕಾರಕ್ಕೇರಿದ 20 ತಿಂಗಳಲ್ಲಿ ರಾಜ್ಯಾದ್ಯಂತ ಉದ್ಯೋಗ ಖಾತರಿ ಯೋಜನೆ ಜಾರಿ. ಗುತ್ತಿಗೆ ಕಾರ್ಮಿಕರನ್ನು ಶಾಶ್ವತ ನೌಕರರನ್ನಾಗಿ ನೇಮಕ. ಪ್ರತಿ ಉಪವಿಭಾಗದಲ್ಲಿ ಹಾಸ್ಟೆಲ್ ಹಾಗೂ ಒಬಿಸಿ ವಿದ್ಯಾರ್ಥಿಗಳಿಗಾಗಿ ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜು ನಿರ್ಮಾಣ.
ಐಟಿ, ವಿಶೇಷ ಆರ್ಥಿಕ ವಲಯ, ಹೈನೋದ್ಯಮ, ಕೃಷಿ ಆಧರಿತ ಕೈಗಾರಿಕೆ, ಆರೋಗ್ಯ, ಆಹಾರ ಸಂಸ್ಕರಣೆ, ನವೀಕರಿಸಬಹುದಾದ ಇಂಧನ, ಸರಕು, ಉತ್ಪಾದನೆ ಮತ್ತು ಪ್ರವಾಸೋದ್ಯಮ ವಲಯದಲ್ಲಿ ಕೌಶಲ್ಯ ಆಧರಿತ ಉದ್ಯೋಗ ಸೃಷ್ಟಿಗೆ ಕ್ರಮ. 2000 ಎಕರೆ ಪ್ರದೇಶದಲ್ಲಿ ಶಿಕ್ಷಣ ನಗರಿ, 5 ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ, ಕೈಗಾರಿಕಾ ಕ್ಲಸ್ಟರ್‌ಗಳ ರಚನೆ, ಹಿರಿಯ ನಾಗರಿಕರು, ವಿಧವೆಯರ ಪಿಂಚಣಿ 1500 ರು.ಗೆ ಏರಿಕೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಶುಲ್ಕ ರದ್ದು, ಪರೀಕ್ಷೆಗೆ ತೆರಳಲು ಉಚಿತ ಪ್ರಯಾಣದ ಅವಕಾಶ, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ, ಸ್ಥಳೀಯರಿಗೆ ಉದ್ಯೋಗ ನೀಡಲು ನಿಯಮ ಜಾರಿ, ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಖರೀದಿ, ನರೇಗಾ ಭತ್ಯೆ 255 ರು.ನಿಂದ 300 ರು.ಗೆ ಏರಿಕೆ, ಎಸ್‌ಸಿ, ಎಸ್ಟಿ ಸಮುದಾಯದ 200 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉಚಿತ ಶಿಕ್ಷಣ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್‌ಸಿ, ಎಸ್ಟಿ, ಒಬಿಸಿ ಮೀಸಲು ಹೆಚ್ಚಳ, ಕಳ್ಳಿನ ಮೇಲಿರುವ ಪ್ರಸ್ತುತ ಇರುವ ನಿಷೇಧವನ್ನು ರದ್ದುಪಡಿಸುವ ಭರವಸೆ ನೀಡಲಾಗಿದೆ.
ಜೊತೆಗೆ, ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿರುವ ಯೋಜನೆಯ ಭಾಗವಾಗಿರುವ ಜೀವಿಕಾ ದೀದೀಯರಿಗೂ ಶಾಶ್ವತ ನೌಕರಿ ನೀಡಲಾಗುವುದು. ಜತೆಗೆ ಅವರಿಗೆ ತಿಂಗಳಿಗೆ 30000 ಸಂಬಳ ಕೊಡಲಾಗುವುದು. ಅವರ ಪಾವತಿಸದೇ ಉಳಿದಿರುವ ಸಾಲಗಳ ಮೇಲಿನ ಬಡ್ಡಿಯನ್ನು ರದ್ದುಪಡಿಸಲಾಗುವುದು ಹಾಗೂ 2 ವರ್ಷ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಹೆಣ್ಣುಮಕ್ಕಳಿಗೆ ಸೌಲಭ್ಯಗಳು, ಶಿಕ್ಷಣ, ತರಬೇತಿ, ಆದಾಯವನ್ನು ಖಚಿತಪಡಿಸಲು ‘ಬೇಟಿ’ ಹಾಗೂ ಮಹಿಳೆಯರಿಗೆ ಮನೆ, ಆಹಾರ, ಆದಾಯ ಒದಗಿಸಲು ‘ಮಾಯಿ’ ಎಂದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.
ತೇಜಸ್ವಿ ಸುದ್ದಿಗೋಷ್ಠಿಯಲ್ಲಿ ರಾಹುಲ್‌ಗೆ ಮುಜುಗರ!
ಒಟ್ಟಾಗಿ ಚುನಾವಣೆ ಎದುರಿಸಲಿದ್ದರೂ ಬಿಹಾರದಲ್ಲಿ ತಾನೇ ಬಾಸ್ ಎಂಬ ವರ್ತನೆಯನ್ನು ತೇಜಸ್ವಿ ಯಾದವ್ ಇಂಡಿಯಾ ಕೂಟದ ಪ್ರಣಾಳಿಕೆಯಲ್ಲೂ ತೋರಿಸಿದ್ದಾರೆ. ತಮ್ಮ ಹೆಸರಿನಲ್ಲೇ ಇರುವ ಭರವಸೆಗಳ ಪಟ್ಟಿಯ ಮುಖಪುಟದಲ್ಲಿ ತಮ್ಮ ಫೋಟೋವನ್ನು ದೊಡ್ಡದಾಗಿ ಹಾಕಿಕೊಂಡಿದ್ದು, ರಾಹುಲ್ ಗಾಂಧಿ ಅವರ ಚಿತ್ರವನ್ನು ಬದಿಯಲ್ಲಿ ಸಣ್ಣದಾಗಿ ಹಾಕಿಸಿದ್ದಾರೆ. ಈ ಮೂಲಕ ಮಿತ್ರಪಕ್ಷವಾದ ಕಾಂಗ್ರೆಸ್‌ಗೇ ಮುಜುಗರ ಉಂಟುಮಾಡಿದ್ದಾರೆ. ಈ ಮೊದಲು ಸಹ ಕ್ಷೇತ್ರ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ಅನ್ನು ಸಂಪರ್ಕಿಸದೇ ಆರ್‌ಜೆಡಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಆಗ 5 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ತಮ್ಮ ಕಡೆಯವರನ್ನು ಕಣಕ್ಕಿಳಿಸಿದ್ದವು.
