Hijack Attempt on Bengaluru-Varanasi Air India ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ, ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಯತ್ನಿಸಿ ಭದ್ರತಾ ಆತಂಕ ಸೃಷ್ಟಿಸಿದ್ದಾನೆ. ಹೈಜಾಕ್ ಭಯದಿಂದ ಕ್ಯಾಪ್ಟನ್ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ.

ಬೆಂಗಳೂರು (ಸೆ.22): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಭದ್ರತಾ ಭಯ ಎದುರಾಗಿತ್ತು. ಈ ಘಟನೆ IX-1086 ವಿಮಾನದಲ್ಲಿ ಸಂಭವಿಸಿದೆ. ಪ್ರಯಾಣಿಕನು ಕಾಕ್‌ಪಿಟ್ ಪ್ರದೇಶವನ್ನು ಪ್ರವೇಶಿಸಿದ್ದಲ್ಲದೆ, ಸರಿಯಾದ ಪಾಸ್‌ಕೋಡ್ ಅನ್ನು ಸಹ ನಮೂದಿಸಿದ್ದಾನೆ ಎಂದು ವರದಿಯಾಗಿದೆ. ಆದರೆ, ಸಂಭಾವ್ಯ ವಿಮಾನ ಹೈಜಾಕ್‌ ಭಯದಿಂದ ಕ್ಯಾಪ್ಟನ್ ಬಾಗಿಲು ತೆರೆಯಲು ನಿರಾಕರಿಸಿದ್ದ. ಪ್ರಯಾಣಿಕನು ಇತರ ಎಂಟು ಸಹಚರರೊಂದಿಗೆ ಪ್ರಯಾಣಿಸುತ್ತಿದ್ದನೆಂದು ವರದಿಯಾಗಿದೆ. ವಾರಣಾಸಿಯಲ್ಲಿ ವಿಮಾನ ಇಳಿದಾಗ ಎಲ್ಲಾ ಒಂಬತ್ತು ಪ್ರಯಾಣಿಕರನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಗೆ ಹಸ್ತಾಂತರಿಸಲಾಯಿತು.

ಕಳೆದ ವರ್ಷವೂ ಆಗಿತ್ತು ಇದೇ ರೀತಿಯ ಕೇಸ್‌

ಏರ್‌ ಇಂಡಿಯಾ ವಿಮಾನದಲ್ಲಿ ಕಳೆದ ವರ್ಷವೂ ಈ ರೀತಿಯ ಕೇಸದ್ ಆಗಿತ್ತು. ಕೋಯಿಕ್ಕೋಡ್‌ನಿಂದ ಬಹರೇನ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಈ ಆತಂಕ ಸೃಷ್ಟಿಯಾಗಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಮತ್ತು ನಿಲ್ಲಿಸಿದಾಗ ಸಹ ಪ್ರಯಾಣಿಕರೊಂದಿಗೆ ನಿಂದಿಸಿದ ಪ್ರಕರಣದಲ್ಲಿ 25 ವರ್ಷದ ವ್ಯಕ್ತಿ ವಿರುದ್ಧ ಸಹಾರ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಯಾಣಿಕ ಕೋಝಿಕ್ಕೋಡ್‌ನಿಂದ ಬಹ್ರೇನ್‌ಗೆ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ ಮೂಲದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಹಾಯಕ ಭದ್ರತಾ ಅಧಿಕಾರಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದರು.

ಮಧ್ಯಾಹ್ನ 12.52 ರ ಸುಮಾರಿಗೆ, ಕ್ಯಾಲಿಕಟ್-ಬಹ್ರೇನ್ ವಿಮಾನ IX 473 ಅನ್ನು ಪ್ರಯಾಣಿಕನೊಬ್ಬ ಅಶಿಸ್ತಿನ ವರ್ತನೆಯಿಂದಾಗಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಬಂದಿತು ಎಂದು ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನ 1.30 ರ ಸುಮಾರಿಗೆ ವಿಮಾನ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು, ನಂತರ ಕ್ಯಾಬಿನ್ ಸಿಬ್ಬಂದಿ ಎ.ಎಂ. ನಡುಕೊಂಡಿಲ್ ಎಂಬ ಫ್ಲೈಯರ್ ಅನ್ನು ಇಳಿಸಿದರು. ಅವರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿತ್ತು.