ಸದಾಶಿವನಿಗೆ 'ಅದೇ' ಧ್ಯಾನ: ಶಿವಲಿಂಗೇಗೌಡರನ್ನು ಕಿಚಾಯಿಸಿದ ಮಳವಳ್ಳಿ ಶಾಸಕ..!
ಬೆಂಗಳೂರು: ವಿಧಾನಸೌಧದಲ್ಲಿಂದು ಕ್ರೀಡೆಯ ಅನುದಾನದ ಕುರಿತಂತೆ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಗೂ ಮಳವಳ್ಳಿ ಜೆಡಿಎಸ್ ಶಾಸಕರ ನಡುವೆ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಯ ಬಗೆಗಿನ ಚರ್ಚೆ ಸದಾಶಿವನಿಗೆ ಅದೇ ಧ್ಯಾನ ಎನ್ನುವಂತಿತ್ತು.
ಸದನದಲ್ಲಿಂದು ಕ್ರೀಡಾ ಅನುದಾನದ ಕುರಿತಂತೆ ನಡೆದ ಚರ್ಚೆ ವೇಳೆ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದಿದೆ
ಕ್ರೀಡಾ ಇಲಾಖೆಯ ಅನುದಾನದ ಮೇಲಿನ ಚರ್ಚೆಯ ವೇಳೆ ಅರಸೀಕರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕ್ರೀಡಾ ಇಲಾಖೆಗೆ ಅಗತ್ಯವಾದ ಹಣ ಇಟ್ಟಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.
ಈ ಹಿಂದೆ ಪುಟ್ಟಣ್ಯಯ್ಯರು ಮಾತನಾಡುವಾಗ, ಕ್ರೀಡಾ ಇಲಾಖೆಗೆ ಇಟ್ಟಿರುವ ಹಣ ಕುಸ್ತಿಪಟುಗಳ ಲಂಗೋಟಿಗೂ ಸಾಲಲ್ಲ ಅಂದಿದ್ರು. ಅದೇ ರೀತಿ ಈ ಬಾರಿಯೂ ಕೊಟ್ಡಿರೋ ಹಣ ಸಾಕಾಗಲ್ಲ ಎಂದು ಶಿವಲಿಂಗೇಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಹೇಗೂ ಕ್ರೀಡಾ ಸಚಿವರಾದ ನಾರಾಯಣಗೌಡರು ಮುಖ್ಯಮಂತ್ರಿಗಳಿಗೆ ಹತ್ತಿರವಿದ್ದಾರೆ, ಮುಖ್ಯಮಂತ್ರಿ ಬಳಿ ಇನ್ನೊಂದು 500 ಕೋಟಿ ರುಪಾಯಿ ಅನುದಾನ ಕೇಳಿ. ಹೆಚ್ಚಿನ ಅನುದಾನ ಪಡೆದು ಕ್ರೀಡಾಂಗಣಗಳನ್ನ ಅಭಿವೃದ್ಧಿಪಡಿಸಿ ಎಂದು ಶಿವಲಿಂಗೇಗೌಡ ಸಲಹೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮಳವಳ್ಳಿ ಜೆಡಿಎಸ್ ಶಾಸಕ ಡಾ. ಕೆ. ಅನ್ನದಾನಿ, ಯಾವ ಕ್ರೀಡೆ? ಯಾವ ಕ್ರೀಡಾಂಗಣ? ಎಂದು ಹೇಳಿ ಎಂದು ಶಿವಲಿಂಗೇಗೌಡರನ್ನು ಕಾಲೆಳೆದರು.
ಕಬ್ಬಡ್ಡಿನಾ, ವಾಲಿಬಾಲ್ ಕ್ರೀಡೆನಾ ಅದನ್ನ ಸ್ಪಷ್ಟವಾಗಿ ಹೇಳಿ ಎಂದು ಅರಸೀಕರೆ ಶಾಸಕರನ್ನು ಡಾ. ಕೆ. ಅನ್ನದಾನಿ ಕಿಚಾಯಿಸಿದರು. ಈ ವೇಳೆ ಇಡೀ ಸದನವೇ ನಗೆಗಡಲಿನಲ್ಲಿ ತೇಲಿತು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡರು ಕ್ರೀಡಾಂಗಣದಲ್ಲಿ ಆಡುವ ಕ್ರೀಡೆಗಳು ಅಷ್ಟೇ ಎನ್ನುವ ಮೂಲಕ ಸ್ವಾರಸ್ಯಕರ ಚರ್ಚೆಗೆ ಪೂರ್ಣವಿರಾಮ ಹಾಕಿದರು.