Breaking ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ 2ನೇ ಬಾರಿಗೆ ಗುಂಡಿನ ದಾಳಿ
ಕಪಿಲ್ ಶರ್ಮಾ ಮಾಲೀಕತ್ವದ ಕ್ಯಾಪ್ಸ್ ಕಫೆ ರೆಸ್ಟೋರೆಂಟ್ ಮೇಲೆ ದುರ್ಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ.

ಕಾಮಿಡಿಯನ್, ನಟ ಕಪಿಲ್ ಶರ್ಮಾ ಹಾಗೂ ಪತ್ನಿ ಕ್ಯಾಪ್ಸ್ ಕೆಫೆ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕನೆಡಾದಲ್ಲಿ ಈ ರೆಸ್ಟೋರೆಂಟ್ ಆರಂಭಿಸಿದ್ದರು. ಆದರೆ ಇದೀಗ ಒಂದೇ ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿಯಾಗಿದೆ. ದುರ್ಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಕೆನಡಾದ ಸರ್ರೆಯ 86 ಅವೆನ್ಯೂ ಹಾಗೂ ಸ್ಕಾಟ್ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್ ಮೇಲೆ ದುರ್ಷ್ಕರ್ಮಿಗಳು 6 ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ರೆಸ್ಟೋರೆಂಟ್ ಗಾಜು, ಬಾಗಿಲು ಪುಡಿ ಪುಡಿಯಾಗಿದೆ. ಈ ಘಟನೆಯಲ್ಲಿ ಸಾವು ನೋವಿನ ಕುರಿತು ಯಾವುದೇ ವರದಿಯಾಗಿಲ್ಲ.
ಗುಂಡಿನ ದಾಳಿ ಮಾಹಿತಿ ಸಿಗುತ್ತಿದ್ದಂತೆ ಸರ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜುಲೈ ತಿಂಗಳಲ್ಲಿ ಇದೇ ಕ್ಯಾಪ್ಸ್ ಕೆಫೆ ಮೇಲೆ ದುರ್ಷ್ಕರ್ಮಿಗಳು ದಾಳಿ ನಡೆಸಿದ್ದರು. ಮಧ್ಯ ರಾತ್ರಿಯಲ್ಲಿ ದಾಳಿ ನಡೆಸಿದ ಕಾರಣ ಅದೃಷ್ಠವಶಾತ್ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ದಾಳಿ ವೇಳೆ ಕೆಲ ಸಿಬ್ಬಂದಿಗಳು ರೆಸ್ಟೋರೆಂಟ್ ಒಳಗಿದ್ದರು. ಆದರೆ ರೆಸ್ಟೋರೆಂಟ್ ಬಹುತೇಕ ಹಾನಿಯಾಗಿತ್ತು.
ಕೆನಡಾದಲ್ಲಿ ರೆಸ್ಟೋರೆಂಟ್ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿತ್ತು. ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ ನಡೆದ ದಾಳಿಯಲ್ಲಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಕುರಿತು ಕೆಫೆ ರೆಸ್ಟೋರೆಂಟ್ ಮ್ಯಾನೇಜರ್ ಸರ್ರೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಮಾಧ್ಯಮ ವರದಿ ಪ್ರಕಾರ, 2ನೇ ಬಾರಿಗೆ ನಡೆದ ದಾಳಿ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಯಾವ ಮಾಹಿತಿ ಹೊರಬಂದಿಲ್ಲ. ಈ ಕುರಿತು ಪೊಲೀಸರು ದಾಳಿ ಹಿಂದೆ ಗ್ಯಾಂಗ್ಸ್ ಕೈವಾಡದ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.