ಕೊಪ್ಪಳ: ಬ್ಲಡ್ ಸಿಗದೇ ತಂಗಿ ಸಾವು, ರಕ್ತದಾನ ಜಾಗೃತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಶಿವಕುಮಾರ್..!
ಸೋಮರಡ್ಡಿ ಅಳವಂಡಿ
ಕೊಪ್ಪಳ(ಫೆ.03): ಆಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಇವರ ತಂಗಿ ಅಗತ್ಯ ಪ್ರಮಾಣದ ರಕ್ತ ಸಿಗದೇ ಮೃತರಾಗುತ್ತಾರೆ. ಇದರಿಂದ ತೀವ್ರ ನೊಂದ ಇವರು ಅಂದಿನಿಂದಲೇ ರಕ್ತದಾನದ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ರಕ್ತದಾನಕ್ಕೆ ಮುಂದಾಗಿ ಇದುವರೆಗೆ 82 ಬಾರಿ ದಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಲ್ಲೆ ಜಾತ್ರೆ, ದೊಡ್ಡ ಪ್ರಮಾಣದ ರಕ್ತದಾನ ಶಿಬಿರ ನಡೆದರೂ ಇವರು ಅಲ್ಲಿ ಹಾಜರಾಗುತ್ತಾರೆ. ಜಾಗೃತಿ ಮೂಡಿಸುತ್ತಾರೆ.
ದಾವಣಗೆರೆ ನಿವಾಸಿ ಶಿವಕುಮಾರ ಮಹಡಿಮನೆ ಇಂತಹ ಮಹತ್ ಕಾರ್ಯ ನಡೆಸುತ್ತಿದ್ದಾರೆ. ಯಾವುದೋ ದಾಖಲೆ, ಪ್ರಶಸ್ತಿ, ಪ್ರಶಂಸೆಗಾಗಿ ಇದನ್ನು ಮಾಡುತ್ತಿಲ್ಲ. ತಂಗಿಯಂತೆ ಯಾರೂ ರಕ್ತ ಸಿಗದೆ ಸಾಯಬಾರದು ಎನ್ನುವ ಮಹದುದ್ದೇಶವನ್ನಿಟ್ಟುಕೊಂಡು ರಕ್ತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿಯೂ ಇವರು ಮೂರು ದಿನ ಜಾಗೃತಿ ಮೂಡಿಸಿದರು.
ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ತಂಗಿಯನ್ನು ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಾರೆ. ಮನೆಯವರೆಲ್ಲ ಸೇರಿ 8 ಯುನಿಟ್ ರಕ್ತದಾನ ಮಾಡುತ್ತಾರೆ. ಆದರೂ ಇನ್ನೂ ರಕ್ತ ಬೇಕಾಗುತ್ತದೆ. ಎಲ್ಲಿಯೂ ಸಿಗುವುದಿಲ್ಲ. ಅಗತ್ಯದಷ್ಟು ರಕ್ತ ಸಿಗದೆ ಅವರ ತಂಗಿ ಸಾವನ್ನಪ್ಪುತ್ತಾಳೆ. ಇದರಿಂದ ಮನನೊಂದಿದ್ದ ಅವರು, ರಕ್ತ ದಾನ ಮಾಡಿಯೇ ಸಂಗ್ರಹ ಮಾಡಬೇಕು ಎಂಬುದನ್ನು ತಿಳಿದು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸುತ್ತಾರೆ.
ರಕ್ತದಾನಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಜಾತ್ರೆ, ಸಮಾರಂಭ ಸೇರಿದಂತೆ ಏನೇ ಜನ ಸೇರುವ ಸ್ಥಳಗಳ ಮಾಹಿತಿ ಹಾಗೂ ರಕ್ತದಾನ ಶಿಬಿರ ಇರುವ ಮಾಹಿತಿ ಗೊತ್ತಾದರೆ ಅಲ್ಲಿಗೆ ಸ್ವಯಂ ಪ್ರೇರಣೆಯಿಂದ ಹೋಗಿ ಜಾಗೃತಿ ಮೂಡಿಸುತ್ತಾರೆ.
ರಕ್ತದಾನದ ಕುರಿತು ಮೈತುಂಬಾ ಪೇಂಟ್ ಹಾಕಿಕೊಂಡು, ಜನ ಸೇರುವ ಸ್ಥಳದಲ್ಲಿ ಜಾಗೃತಿ ಮೂಡಿಸುತ್ತಾರೆ. ಗುಂಪು ಗುಂಪಾಗಿ ಇದ್ದೆಡೆ ತನ್ನ ಕತೆಯನ್ನು ಹೇಳಿ ರಕ್ತದಾನ ಮಾಡುವ ಮಹತ್ವವನ್ನು ಸಾರುತ್ತಾರೆ.
ಮೈಮೇಲೆ ಕೇವಲ ಒಂದು ಚಡ್ಡಿಯನ್ನು ಮಾತ್ರ ಹಾಕಿಕೊಂಡು, ಉಳಿದೆಡೆ ರಕ್ತದಾನ ಸಾರುವ ಉಕ್ತಿಗಳನ್ನು ಬರೆದುಕೊಂಡಿದ್ದಾರೆ. ಯಾಕೆ ಹೀಗೆ ಎಂದರೆ, ನಾನು ಹೀಗೆ ವಿಭಿನ್ನವಾಗಿ ಪೇಂಟ್ ಮಾಡಿಕೊಂಡರೆ ಜನರು ಆಕರ್ಷಣೆಯಿಂದ ನೋಡುತ್ತಾರೆ. ಆಗ ರಕ್ತದಾನ ಕುರಿತು ಜಾಗೃತಿ ಮೂಡುತ್ತದೆ. ಅಲ್ಲದೆ, ಅವರು ನನ್ನನ್ನು ನೋಡಿ ನನ್ನ ಕತೆಯನ್ನು ಕೇಳಲು ಮುಂದಾಗುತ್ತಾರೆ. ಕತೆಯನ್ನು ಕೇಳಿದ ಮೇಲೆ ಖಂಡಿತವಾಗಿಯೂ ರಕ್ತದಾನ ಮಾಡುತ್ತಾರೆ ಎನ್ನುತ್ತಾರೆ ಶಿವಕುಮಾರ ಮಹಡಿಮನೆ.
ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದ ಕುರಿತು ಮಾಹಿತಿ ಪಡೆದು, ಜಾತ್ರೆಯಲ್ಲಿ ಸೇರಿದ್ದ ಸಹಸ್ರಾರು ಜನರ ಮಧ್ಯೆ ಮೂರು ದಿನಗಳ ಕಾಲ ರಕ್ತದಾನ ಜಾಗೃತಿ ಮೂಡಿಸಿದರು. ಇದಕ್ಕಾಗಿ ಇವರು ದುಡ್ಡು, ಕಾಸು ಕೇಳುವುದಿಲ್ಲ. ಹೀಗೆ, ರಾಜ್ಯಾದ್ಯಂತ ಅರಿವು ಮೂಡಿಸುತ್ತಿದ್ದಾರೆ.
ಇವರು ಸ್ವತಃ ಮಹಾ ರಕ್ತದಾನಿಯಾಗಿದ್ದಾರೆ. ಇದುವರೆಗೂ ಬರೋಬ್ಬರಿ 82 ಬಾರಿ ರಕ್ತ ಕೊಟ್ಟಿದ್ದಾರೆ. ಕೊಪ್ಪಳ ಜಾತ್ರೆಯ ನಿಮಿತ್ತ ನಡೆದ ರಕ್ತದಾನ ಶಿಬಿರದಲ್ಲಿಯೂ ರಕ್ತ ನೀಡಿದ್ದಾರೆ.
ತಮ್ಮ ಜೀವನವನ್ನೇ ರಕ್ತದಾನಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಜಾತ್ರೆ, ಸಮಾರಂಭ, ರಕ್ತದಾನ ಶಿಬಿರ ಇರುವಲ್ಲಿ ಜಾಗೃತಿ ಮೂಡಿಸುತ್ತಾರೆ. ಸರ್ಕಾರ ಇಂಥವರನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹ್ಯಾಟಿ ಪ್ರಧಾನ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಡಾ. ಶ್ರೀನಿವಾಸ ತಿಳಿಸಿದ್ದಾರೆ.
ನನ್ನ ತಂಗಿ ರಕ್ತ ಸಿಗದೆ ಸಾವನ್ನಪ್ಪಿದ್ದರಿಂದ ಅಂಥ ಗತಿ ಯಾರಿಗೂ ಬರಬಾರದು ಎನ್ನುವ ಕಾರಣಕ್ಕಾಗಿಯೇ ನಾನು ರಕ್ತದಾನ ಮಾಡುತ್ತಿದ್ದೇನೆ. ಸಾಯುತ್ತಿರುವವರನ್ನು ಬದುಕಿಸುವುದಕ್ಕೆ ಇರುವ ಬಹಳ ದೊಡ್ಡ ಅವಕಾಶವಿದು ಎಂದು ರಕ್ತದಾನಿ ಶಿವಕುಮಾರ ಮಹಡಿಮನೆ ಹೇಳಿದ್ದಾರೆ.