ಇಂದಿಗೂ ಕ್ರಾಂತಿಕಾರಿ ಎನ್ನಿಸಿಕೊಂಡ ಮನಮೋಹನ್ ಸಿಂಗ್ ಟಾಪ್ 9 ಸಾಧನೆಗಳು
10 ವರ್ಷಗಳ ಕಾಲ ದೇಶದ ಚುಕ್ಕಾಣಿ ಹಿಡಿದಿದ್ದ ಮನಮೋಹನ್‌ಸಿಂಗ್ ಮೌನಕ್ಕೆ ಶರಣಾಗಿದ್ದು ಹೆಚ್ಚಾದರೂ, ಅವರ ಅವಧಿಯಲ್ಲಿ ಜಾರಿಗೆ ತಂದ ಹಲವು ಯೋಜನೆಗಳು ಇಂದಿಗೂ ಕ್ರಾಂತಿಕಾರಿ ಎನ್ನಿಸಿಕೊಂಡಿವೆ. ಶಿಕ್ಷಣ, ಅರ್ಥವ್ಯವಸ್ಥೆ, ಉದ್ಯೋಗ ಸೃಷ್ಟಿ, ಬಡವರ ಆರ್ಥಿಕಾಭಿವೃದ್ಧಿ, ಆಡಳಿತದಲ್ಲಿ ಪಾರದರ್ಶಕತೆಯ ನಿಟ್ಟಿನಲ್ಲಿ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು, ಮುಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಚಾಚೂ ತಪ್ಪದೆ ಪಾಲಿಸುತ್ತಿವೆ ಎಂಬುದೇ ಆ ಯೋಜನೆ ಮತ್ತು ಅದನ್ನು ಜಾರಿಗೆ ತಂದವರ ಸಾಧನೆಗೆ ಒಂದು ಕೈಗನ್ನಡಿ.
1.ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆ: 2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ VAT ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸಿದರು. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು.
2.ವಿಶೇಷ ಆರ್ಥಿಕ ವಲಯ ಕಾಯ್ದೆ: 2005ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ದೇಶದ ಕೈಗಾರಿಕೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ವಿಶೇಷ ಆರ್ಥಿಕ ವಲಯ ಕಾಯ್ದೆಯನ್ನು ಅಂಗೀಕರಿಸಿದರು. ಈ ಕಾಯ್ದೆ 2006 ಫೆಬ್ರವರಿಯಿಂದ ಜಾರಿಗೆ ಬಂದಿದೆ. ಇದು ದೇಶಕ್ಕೆ ವಿದೇಶಿ ಬಂಡವಾಳ ಸೆಳೆಯುವುದರಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಮತ್ತು ದೇಶದ ಆರ್ಥಿಕ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದೆ.
3.ರಾ.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ಮನಮೋಹನ್ ಸಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಈ ಯೋಜನೆ ಕೂಡಾ ಒಂದಾಗಿದೆ. ಬಡವರಿಗೆ ಜೀವನಾಧಾರ ಕಲ್ಪಿಸಲು ಮತ್ತು ಗ್ರಾಮೀಣ ಜನತೆಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿತು. ಇಂದು ಲಕ್ಷಾಂತರ ಮಂದಿ ಈ ಯೋಜನೆ ಫಲಾನುಭವಿಗಳಾಗಿದ್ದಾರೆ.
4. ಅತ್ಯಧಿಕ ಜಿಡಿಪಿ ದರ ಸಾಧಿಸಿದ ಪ್ರಧಾನಿ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಜಿಡಿಪ ಅತಿ ವೇಗದಲ್ಲಿ ಪ್ರಗತಿ ಹೊಂದಿತ್ತು. 2006- 2007ರಲ್ಲಿ ಜಿಡಿಪಿ ಶೇ.10.08ರ ದರದಲ್ಲಿ ಪ್ರಗತಿ ಹೊಂದಿತ್ತು. ಅದೇ ರೀತಿ 2009ರಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಿತ್ತು. ಆ ಮೂಲಕ ಭಾರತ ಅತಿ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ 2ನೇ ದೊಡ್ಡ ಆರ್ಥಿಕತೆ ಎನಿಸಿಕೊಂಡಿತ್ತು.
5.ಭಾರತ ಅಮೆರಿಕ ಪರಮಾಣು ಒಪ್ಪಂದ: ಭಾರತ ಮತ್ತು ಅಮೆರಿಕ ಮಧ್ಯೆ ಹಲವಾರು ವರ್ಷಗಳಿಂದ ಕಗ್ಗಂಟಾಗಿ ಉಳಿದ್ದ ಪರ ಮಾಣು ಒಪ್ಪಂದಕ್ಕೆ ಸಹಿ ಬಿದ್ದಿದ್ದು ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅಣ್ವಸ್ತ್ರವನ್ನು ನಾಗರಿಕ ಉದ್ದೇಶಕ್ಕೆ ಬಳಸುವ ಬಗ್ಗೆ ಮನಮೋಹನ್ ಸಿಂಗ್ ಹಾಗೂ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ 2005 ಜುಲೈ 18ರಂದು ಸಹಿ ಹಾಕಿದರು. ಅಲ್ಲದೇ ಭಾರತ ಮತ್ತು ಅಮೆರಿಕ ಶಾಂತಿಯುತ ಅಣು ಇಂಧನ ಸಹಕಾರ ಒಪ್ಪಂದಕ್ಕೂ ಸಹಿ ಹಾಕಲಾಯಿತು.
6.ಮೊಬೈಲ್ ನಂಬರ್ ಪೋರ್ಟೆಬಿಲಿಟಿ: 2011ರಲ್ಲಿ ಮೊಬೈಲ್ ನಂಬರ್ ಬದಲಾಯಿಸದೇ ನೆಟ್‌ವರ್ಕ್ ಬದಲಿಸುವ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಯೋಜನೆ ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಸೃಷ್ಠಿಸಿತ್ತು. ಅಮೆರಿಕ ಹಾಗೂ ಚೀನಾದಲ್ಲಿ ಮಾತ್ರ ಈ ಸೌಲಭ್ಯವನ್ನು ಸಿಂಗ್ ಭಾರತಕ್ಕೂ ಪರಿಚಯಿಸಿದ್ದರು. ಇದು ಟೆಲಿಕಾಂ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಗೂ ಕಾರಣವಾಯ್ತು ದೇಶದ ಜನಸಂಖ್ಯೆ, ಮೊಬೈಲ್ ಬಳಕೆದಾರರ ಸಂಖ್ಯೆ ಗಮನಿಸಿದರೆ ಇದೊಂದು ಮಹತ್ಸಾಧನೆಯಾಗಿತ್ತು.
7.ಪೋಲಿಯೋ ಮುಕ್ತ ರಾಷ್ಟ್ರ: ವಿಶ್ವವನ್ನು ದಶಕಗಳ ಕಾಲ ಕಾಡಿದ್ದ ಪೊಲೀಯೋ ರೋಗದಿಂದ ಭಾರತ ಮುಕ್ತವಾಗಿದ್ದು ಡಾ. ಸಿಂಗ್ ಅವಧಿಯಲ್ಲೇ. 2012ರಲ್ಲಿ ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿತು. 2009ರಲ್ಲಿ 741 ಮಂದಿ ಪೋಲಿಯೋಗೆ ತುತ್ತಾಗಿ ದ್ದರೆ, 2010ರಲ್ಲಿ ಅದರ ಸಂಖ್ಯೆ 42ಕ್ಕೆ ಇಳಿದಿತ್ತು. ಮುಂದಿನ ವರ್ಷ ಶೂನ್ಯಕ್ಕಿಳಿದಿತ್ತು. 2011ರ ಜನವರಿಯಿಂದ ಈ ವರೆಗೆ ದೇಶದಲ್ಲಿ ಪೋಲಿಯೋ ಕಂಡು ಬಂದಿಲ್ಲ.
8 ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಆರ್‌ಟಿಐ: ಎರಡು ಅವಧಿಗೆ ಪ್ರಧಾನಿ ಆಗಿದ್ದಾಗ್ಯೂ, ಮಿತ ಭಾಷಿಯಾಗಿಯೇ ಇದ್ದ ಡಾ. ಸಿಂಗ್ ಅವರನ್ನು ಅವರ ವಿರೋಧಿಗಳು ಮೌನಿ ಪ್ರಧಾನಿ ಎಂದೇ ಗೇಲಿ ಮಾಡುತ್ತಿದ್ದರು. ಅಲ್ಲದೆ, ಡಾ. ಸಿಂಗ್ ಅವರು ಸೋನಿಯಾ ಗಾಂಧಿ ಅವರ ಮೂಗಿನ ನೇರಕ್ಕೆ ಕಾರ್ಯ ನಿರ್ವಹಿಸುತ್ತಾರೆ ಎಂದೆಲ್ಲಾ ತಮ್ಮ ರಾಜಕೀಯ ವಿರೋಧಿಗಳು ಜರಿಯುತ್ತಿದ್ದರು. ಆದರೆ, ಇಂಥ ಆರೋಪಗಳಿಗೆಲ್ಲಾ ಮೌನದಿಂದಲೇ ಉತ್ತರಿಸುತ್ತಿದ್ದಡಾ. ಸಿಂಗ್ ಅವರು ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ 2005ರಲ್ಲಿ ಆರ್ ಟಿಐ(ಮಾಹಿತಿ ಹಕ್ಕು) ಕಾಯ್ದೆ ಜಾರಿ ಮಾಡಿದರು. ಸರ್ಕಾರದ ಯಾವುದೇ ಸಂಸ್ಥೆಯೊಂದರಿಂದ ಯಾವುದೇ ಮಾಹಿತಿ ಕೋರುವ ಅಧಿಕಾರವನ್ನು ಸಾಮಾನ್ಯ ವ್ಯಕ್ತಿಗೆ ಈ ಕಾಯ್ದೆ ದಯ ಪಾಲಿಸಿತ್ತು. ಈ ಮೂಲಕ ಭ್ರಷ್ಟಾಚಾರ ವಿರುದ್ಧ ಹೋರಾಡುವ ಕಾರ್ಯಕರ್ತರಿಗೆ ಒಂದು ಅಸ್ತ್ರವನ್ನು ಒದಗಿಸಿಕೊಟ್ಟಿತ್ತು.
9 ನಗರಗಳಿಗೆ ಹೊಸ ರೂಪ ನೀಡಿದ ಜಿನರ್ಮ್: ಡಾ. ಸಿಂಗ್ ನಾಯಕತ್ವದಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯು, ದೇಶದ ಬೃಹತ್ ನಗರಗಳ ಆದುನೀಕರಣಕ್ಕಾಗಿ ಆರಂಭಿಸಲಾದ ಯೋಜನೆಯೇ ಜೆನರ್ಮ್ ಅಥವಾ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರಾಭಿವೃದ್ಧಿ ಮಿಷನ್. 2005ರ ಡಿಸೆಂಬರ್ 3ರಂದು ಡಾ. ಸಿಂಗ್ ಅವರು ಈ ಯೋಜನೆಯನ್ನು ಉದ್ಘಾಟಿಸಿದರು. ನಗರ ಪ್ರದೇಶ ಗಳ ಜೀವನ ಮಟ್ಟ ಸುಧಾರಣೆ ಹಾಗೂ ಮೂಲಭೂತ ಸೌಕರ್ಯಗಳನ್ನು ಮೇಲಿನ ಸ್ಥರಕ್ಕೆ ಕೊಂಡೊಯ್ಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.