Ram Sita Statue: ಗಂಡಕಿ ನದಿಯಿಂದ ತೆಗೆದ 40 ಟನ್ ತೂಕದ ಸಾಲಿಗ್ರಾಮ ಶಿಲೆ, 30ಕ್ಕೆ ಭಾರತ ಪ್ರವೇಶ!
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮ ಹಾಗೂ ಸೀತೆಯ ಮೂರ್ತಿಯನ್ನು ಅಪ್ಪಟ ಸಾಲಿಗ್ರಾಮ ಶಿಲೆಯಿಂದ ಮಾಡಲಾಗುತ್ತದೆ. ಸಾಲಿಗ್ರಾಮ ಸಿಗುವ ವಿಶ್ವದ ಏಕೈಕ ನದಿಯಾಗಿರುವ ನೇಪಾಳದ ಗಂಡಕಿ ನದಿಯಿಂದ ಇದ್ದಕಾಗಿ ಬರೋಬ್ಬರಿ 40 ಟನ್ ತೂಕದ ಶಿಲೆಗಳನ್ನು ಭಾರತಕ್ಕೆ ರವಾನೆ ಮಾಡಲಾಗುತ್ತದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ತೆಗೆದಿರುವ ಈ ಶಿಲೆ ಕನಿಷ್ಠವೆಂದರೂ 60 ಮಿಲಿಯನ್ ವರ್ಷದ ಹಿಂದಿನದು ಎನ್ನಲಾಗಿದೆ.
ಗಂಡಕಿ ನದಿಯಿಂದ ಸಾಲಿಗ್ರಾಮ ಶಿಲೆ ತೆಗೆಯುವ ಮುನ್ನ, ನದಿಗೆ ಕ್ಷಮೆ ಕೇಳುವ ಪೂಜೆಯನ್ನೂ ಮಾಡಲಾಯಿತು. ನದಿಯ ದಡದಿಂದ ಈ ಬೃಹತ್ ಬಂಡೆಗಳನ್ನು ತೆಗೆಯುವ ಮೊದಲು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು ಎಂದು ಕಾಮೇಶ್ವರ ಚೌಪಾಲ್ ಹೇಳಿದರು. ನದಿಗೆ ಕ್ಷಮೆ ಕೇಳಿ ವಿಶೇಷ ಪೂಜೆಯನ್ನು ಮಾಡಲಾಯಿತು.
ಶಿಲೆಗೆ ಗಂಡಕಿ ನದಿ ನೀರಿನಿಂದಲೇ ರುದ್ರಾಭಿಷೇಕವನ್ನು ಮಾಡಲಾಯಿತು. ಈ ವೇಳೆ ಸಾಕಷ್ಟು ಸ್ಥಳೀಯ ಜನರು ಜಮಾಯಿಸಿದ್ದರು. ಜನವರಿ 26 ರಂದು ಶಿಲೆಗಳನ್ನು ಟ್ರಕ್‌ಗೆ ಹಾಕಲಾಯಿತು.
ಈ ಶಿಲೆಗಳಿಂದಲೇ ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಮಾಡಲಾಗುತ್ತದೆ. ರಾಮನ ಯುವಕನಾಗಿದ್ದ ಸಮಯದ ರೀತಿಯಲ್ಲಿ ವಿಗ್ರಹ ಇರುತ್ತದೆ. ಸೀತಾ ಮಾತೆಯ ವಿಗ್ರಹ ಕೂಡ ಸಾಲಿಗ್ರಾಮ ಶಿಲೆಯಲ್ಲೇ ಇರಲಿದೆ. ಅಂದಾಜು 60 ಮಿಲಿಯನ್ ವರ್ಷದ ಹಿಂದಿನ ಶಿಲೆ ಇದು ಎಂದು ನೇಪಾಳದ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಫೋಖ್‌ಹರಾದಲ್ಲಿ ಈ ನದಿಯಿದ್ದು, ಭೂವಿಜ್ಞಾನ ಹಾಗೂ ಪುರಾತ್ವ ಅಧಿಕಾರಿಗಳ ಸಮ್ಮುಖದಲ್ಲಿ ಶಿಲೆಯನ್ನು ಹೊರತೆಗೆಯಲಾಗಿದೆ. ಒಟ್ಟು ಎರಡು ಶಿಲೆಗಳಿದ್ದು, ದೊಡ್ಡ ಶಿಲೆ 26 ಟನ್ ಹಾಗೂ ಚಿಕ್ಕ ಶಿಲೆ 14 ಟನ್ ತೂಕವಿದೆ.
ಶಿಲೆಯನ್ನು ಹೊರತೆಗೆದ ಬಳಿಕ ಕೆಂಪು, ಕೇಸರಳಿ, ಹಳದಿ, ಬಿಳಿ ಬಣ್ಣದ ಬಟ್ಟೆಯ ಮೂಲಕ ಅದನ್ನು ಅಲಂಕರಿಸಲಾಗಿತ್ತು. ಬಾಲ ರಾಮನ ಚಿತ್ರವನ್ನಿಟ್ಟು ಮತ್ತೊಮ್ಮೆ ಪೂಜೆ ಮಾಡಲಾಯಿತು. ಈ ವೇಳೆ ಜನರು ಶಿಲೆಗೆ ಕೈಮುಗಿದು ನಮಸ್ಕರಿಸಿದರು.
ದೈತ್ಯ ಕ್ರೇನ್‌ಅನ್ನು ಬಳಸಿ, ಈ ಶಿಲೆಯನ್ನು ಟ್ರಕ್ ಮೇಲೆ ಇರಿಸಲಾಗಿದೆ. ನೇಪಾಳದಲ್ಲಿ ಸಾಲಿಗ್ರಾಮಿ ನದಿ ಎಂದೂ ಕರೆಯಲ್ಪಡುವ ಗಂಡಕಿ, ಭಾರತಕ್ಕೆ ಪ್ರವೇಶ ಪಡೆದ ಬಳಿಕ ನಾರಾಯಣಿ ಎನ್ನುವ ಹೆಸರು ಪಡೆದುಕೊಳ್ಳುತ್ತದೆ. ಅಧಿಕೃತವಾಗಿ ಭಾರತದಲ್ಲಿ ಈ ನದಿಯ ಹೆಸರು ಬುಧಿ ಗಂಡಕಿ. ಗಂಡಕಿ ನದಿಯ ಹೊರತಾಗಿ ವಿಶ್ವದ ಯಾವ ನದಿಯಲ್ಲೂ ಸಾಲಿಗ್ರಾಮ ಶಿಲೆ ಸಿಗೋದಿಲ್ಲ. ಈ ನದಿಯು ದಾಮೋದರ ಕುಂಡದಿಂದ ಹುಟ್ಟಿ ಬಿಹಾರದ ಸೋನೆಪುರದಲ್ಲಿ ಗಂಗಾ ನದಿಯನ್ನು ಸೇರುತ್ತದೆ.
ಅಯೋಧ್ಯೆಗೆ ಬಂಡೆಗಳನ್ನು ತರಲು ಮಾತ್ರವೇ ನಮ್ಮನ್ನು ಕಳಿಸಲಾಗಿದೆ. ಅಯೋಧ್ಯೆಗೆ ಹೋದ ಬಳಿಕವೇ ಈ ಶಿಲೆಯಿಂದ ಯಾವ ರೀತಿಯ ಮೂರ್ತಿ ಆಗುತ್ತದೆ ಎನ್ನುವುದನ್ನು ಟ್ರಸ್ಟ್ ನಿರ್ಧಾರ ಮಾಡುತ್ತದೆ. ನಮ್ಮ ಅಂದಾಜಿನ ಪ್ರಕಾರ ಫೆ.2ರ ವೇಳೆಗೆ ಬಂಡೆಗಳು ಅಯೋಧ್ಯೆಯಲ್ಲಿರುತ್ತದೆ. ಬಹಳ ಪುರಾತನ ಶಿಲೆ ಇದು ಎಂದು ರಾಮಮಂದಿರ ಟ್ರಸ್ಟ್‌ನ ಟ್ರಸ್ಟಿ ಕಾಮೇಶ್ವರ ಚೌಪಾಲ್ ತಿಳಿಸಿದ್ದಾರೆ.
ನೇಪಾಳದಲ್ಲಿ ಶಿಲೆ ಯಾತ್ರೆಗೂ ಮುನ್ನ 100 ಜನ ಗಂಡಕಿ ನದಿ ಬಳಿ ಸೇರಿದ್ದರು. ಸೀತೆಯ ಹುಟ್ಟೂರು ಜನಕಪುರದ ಮಹಾಂತ, ವಿಎಚ್‌ಪಿಯ ಕೇಂದ್ರ ಉಪಾಧ್ಯಕ್ಷ ಜೀವೇಶ್ವರ ಮಿಶ್ರಾ, ರಾಜೇಂದ್ರ ಸಿಂಗ್ ಪಂಕಜ್, ನೇಪಾಳದ ಮಾಜಿ ಉಪ ಪ್ರಧಾನಿ ಕಮಲೇಂದ್ರ ನಿಧಿ ಕೂಡ ಈ ವೇಳೆ ಇದ್ದರು. ಅಯೋಧ್ಯೆಯವರೆಗೂ ಇವರು ಶಿಲಾ ಯಾತ್ರೆಯಲ್ಲಿ ಇರಲಿದ್ದಾರೆ.
ಶಿಲೆಯ ವಿಚಾರಕ್ಕಾಗಿ ಎರಡು ತಿಂಗಳ ಹಿಂದೆಯೇ ಟ್ರಸ್ಟ್‌ನವರು ನೇಪಾಳದಲ್ಲಿದ್ದರು. ನೇಪಾಳ ಸರ್ಕಾರದ ಅನುಮತಿ ವಿಧಾನಗಳೆಲ್ಲಾ ಪೂರೈಸಿದ ಬಳಿಕವೇ ಈ ಶಿಲೆಯನ್ನು ಹೊರತೆಗೆಯಲಾಗಿದೆ. ಜ.31 ರಂದು ಗೋರಖ್‌ಪುರದ ಗಡಿಯ ಮೂಲಕ ಶಿಲೆಗಳನ್ನು ಹೊತ್ತ ಟ್ರಕ್ ಉತ್ತರ ಪ್ರದೇಶ ಪ್ರವೇಶಿಸಲಿದೆ.
ಶನಿವಾರ ಸಾಲಿಗ್ರಾಮದ ಶಿಲೆಗಳನ್ನು ಹೊತ್ತ ಟ್ರಕ್‌ಗಳು ಸೀತೆಯ ಹುಟ್ಟೂರು ಜನಕಪುರಕ್ಕೆ ಬಂದಿದೆ. ಇಲ್ಲಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದರ ನಂತರ, ಶಿಲೆಗಳು ಬಿಹಾರದ ಮಧುಬನಿಯಲ್ಲಿರುವ ಸಹರ್ಘಾಟ್, ಬೇನಿಪಟ್ಟಿ ಮೂಲಕ ದರ್ಭಾಂಗಾ, ಮುಜಾಫರ್‌ಪುರವನ್ನು ತಲುಪುತ್ತವೆ. ಆ ಮೂಲಕ ಭಾರತ ಪ್ರವೇಶಿಸಿಸಲಿದೆ. ನಂತರ ಜನವರಿ 31 ರಂದು ಗೋಪಾಲ್‌ಗಂಜ್ ಮೂಲಕ ಯುಪಿ ಪ್ರವೇಶಿಸಲಿದೆ. ಬಿಹಾರದ 51 ಸ್ಥಳಗಳಲ್ಲಿ ಶಿಲಾ ಪೂಜೆ ನಡೆಯಲಿದೆ.
ಸಾಲಿಗ್ರಾಮ ಕಲ್ಲುಗಳು ಬಹಳ ಗಟ್ಟಿ. ಆದ್ದರಿಂದ ಮೂರ್ತಿ ಕೆತ್ತುವವರಿಗೆ ಬಹಳ ಕಷ್ಟದ ಕೆಲಸ. ಅಯೋಧ್ಯೆಯಲ್ಲಿ ಇಡಲಾಗುವ ರಾಮನ ವಿಗ್ರಹವನ್ನು ಈ ಶಿಲೆಯಿಂದ ನಿರ್ಮಿಸಲಾಗುತ್ತದೆ. ರಾಮ ಜನ್ಮಭೂಮಿಯ ಹಳೆಯ ದೇವಾಲಯದಲ್ಲಿರುವ ಕಸೌತಿಯ ಅನೇಕ ಕಂಬಗಳು ಈ ಬಂಡೆಗಳಿಂದ ಮಾಡಲ್ಪಟ್ಟಿದೆ ಎಂದು ಪುರಾತತ್ವ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಬೆಟ್ಟಪ್ರದೇಶ ಮಾರ್ಗಗಳಿಂದ ಈ ಶಿಲೆಗಳು ಹಾದು ಬರುತ್ತಿವೆ. ಈ ವೇಳೆ ಜನರು ಜೈ ಶ್ರೀರಾಮ್ ಎನ್ನುವ ಘೋಷಣೆ ಕೂಗಿ ಶಿಲೆಯನ್ನು ಸ್ವಾಗತಿಸುತ್ತಿದ್ದಾರೆ. ಧರಿಸಿದ್ದ ಚಪ್ಪಲಿಗಳನ್ನು ತೆಗೆದು, ಶಿಲೆಯನ್ನು ಮುಟ್ಟಿ ಧನ್ಯತಾ ಭಾವ ಕಂಡಿದ್ದಾರೆ.
ಫೆ.2ರಂದು ಈ ಶಿಲೆಗಳು ಅಯೋಧ್ಯೆಯ ರಾಮನಗರಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾದಿಯಲ್ಲಿ ಹಲವಾರು ನಗರಗಳನ್ನು ದಾಟಿ ಬರಬೇಕಾಗಿರುವ ಕಾರಣ ಕೊನೇ ಹಂತದಲ್ಲಿ ಕೊಂಚ ಬದಲಾವಣೆ ಆದರೂ ಆಗಬಹುದು.