ಹರಿಣಗಳಿಂದಲೂ ಮೈಂಡ್ ಗೇಮ್: ಫೈನಲ್‌ಗೂ ಮೊದಲೇ ಭಾರತಕ್ಕೆ ದಕ್ಷಿಣ ಆಫ್ರಿಕಾ ನಾಯಕಿ ವಾರ್ನಿಂಗ್!
ನವಿ ಮುಂಬೈ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ನಡೆಯಲಿರುವ ಫೈನಲ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಮೈಂಡ್ ಗೇಮ್ ಆರಂಭಿಸಿದ್ದು, ಭಾರತಕ್ಕೆ ವಾರ್ನಿಂಗ್ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಇಂದು ಮೂರು ಗಂಟೆಗೆ ಆರಂಭವಾಗಲಿರುವ ಫೈನಲ್ ಮ್ಯಾಚ್
13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಇಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಆತಿಥೇಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಲಿವೆ.
ವಿಶ್ವಕಪ್ ಫೈನಲ್ ಟಿಕೆಟ್ಸ್ ಸೋಲ್ಡೌಟ್
ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಫೈನಲ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿದ್ದು, ಕಾಳಸಂತೆಯಲ್ಲಿ ಟಿಕೆಟ್ ಬೆಲೆ ಮುಗಿಲು ಮುಟ್ಟಿದೆ.
ಮೈಂಡ್ ಗೇಮ್ ಆರಂಭಿಸಿದ ಹರಿಣಗಳ ಪಡೆ
ಇನ್ನು ಇದೆಲ್ಲದರ ನಡುವೆ ವಿಶ್ವಕಪ್ ಫೈನಲ್‌ಗೂ ಮುನ್ನ ಹರಿಣಗಳ ಪಡೆ ಮೈಂಡ್ ಗೇಮ್ ಆರಂಭಿಸಿದೆ. ಈ ಹಿಂದೆ ಆಸ್ಟ್ರೇಲಿಯಾ ಮಾಡಿದ ರಣತಂತ್ರವನ್ನು ಹರಿಣಗಳ ಪಡೆ ಅಳವಡಿಸಿಕೊಂಡಂತೆ ಕಾಣುತ್ತಿದೆ.
2023ರಲ್ಲಿ ಭಾರತಕ್ಕೆ ವಾರ್ನಿಂಗ್ ಕೊಟ್ಟಿದ್ದ ಪ್ಯಾಟ್ ಕಮಿನ್ಸ್
ಹೌದು, ಈ ಹಿಂದೆ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಆಗ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ಫೈನಲ್ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು.
ಪ್ಯಾಟ್ ಕಮಿನ್ಸ್ ನೆನಪಿಸಿದ ದಕ್ಷಿಣ ಆಫ್ರಿಕಾ ನಾಯಕಿ ಮಾತು
ಆಗ ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್, ಕ್ರೀಡೆಯಲ್ಲಿ ತವರಿನ ದೊಡ್ಡ ಅಭಿಮಾನಿಗಳ ಸದ್ದನ್ನಡಗಿಸಿ ಅವರನ್ನು ತಣ್ಣಗೆ ಕೂರುವಂತೆ ಮಾಡುವಾಗ ಸಿಗುವ ಸಂತೋಷಕ್ಕಿಂತ ದೊಡ್ಡದು ಮತ್ತೊಂದು ಮತ್ತೊಂದು ಇಲ್ಲ. ನಾವು ಅದನ್ನೇ ಮಾಡಲಿದ್ದೇವೆ ಎಂದಿದ್ದರು.
ಭಾರತಕ್ಕೆ ವಾರ್ನಿಂಗ್ ಕೊಟ್ಟ ಹರಿಣಗಳ ನಾಯಕಿ
ಇದೀಗ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಲಾರಾ ವೋಲ್ಟಾರ್ಟ್ ಅದೇ ರೀತಿಯ ಮಾತುಗಳನ್ನಾಡಿದ್ದಾರೆ. ನಾವು ಈ ಸಲ ಗೆಲ್ಲುತ್ತೇವೆ. ಆ ಮೂಲಕ ಭಾರತದ ಅಭಿಮಾನಿಗಳನ್ನು ಸೈಲೆಂಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.
DY ಪಾಟೀಲ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಮ್ಯಾಚ್
ಒಟ್ಟಿನಲ್ಲಿ ಎರಡೂ ತಂಡಗಳು ಸಮಬಲದಿಂದ ಕೂಡಿದ್ದು, ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿಂದು ಜಿದ್ದಾಜಿದ್ದಿನ ಕಾದಾಟಕ್ಕೆ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂ ಸಾಕ್ಷಿಯಾಗಲಿದೆ.