ಲಖನೌ ಮಣಿಸಿ ಐಪಿಎಲ್‌ನಲ್ಲಿ ಯಾವ ತಂಡವೂ ಮಾಡಿರದ ಅಪರೂಪದ ದಾಖಲೆ ಬರೆದ ಆರ್‌ಸಿಬಿ!
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಖನೌ ಸೂಪರ್ ಜೈಂಟ್ಸ್ ಎದುರು ದಾಖಲೆಯ ಜಯ ಸಾಧಿಸಿದೆ. ಇದರ ಜತೆಗೆ ಐಪಿಎಲ್ ಇತಿಹಾಸದಲ್ಲೇ ಯಾವ ತಂಡವೂ ಮಾಡದ ಅಪರೂಪದ ದಾಖಲೆ ನಿರ್ಮಿಸಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಜಿತೇಶ್ ಶರ್ಮಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ಲಖನೌ ನೀಡಿದ್ದ 228 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದರ ಜತೆಗೆ ಮೊದಲ ಕ್ವಾಲಿಫೈಯರ್ ಆಡಲು ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ತಂಡವು ಈ ಮೊದಲು 2010ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ವಿರುದ್ದ 204 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತ್ತು. ಇದೀಗ ಆರ್‌ಸಿಬಿ ಮತ್ತೊಂದು ದೊಡ್ಡ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವಲ್ಲಿ ಸಫಲವಾಗಿದೆ.
ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹಂಗಾಮಿ ನಾಯಕ ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ಮುರಿಯದ ಶತಕದ ಜತೆಯಾಟದ ನೆರವಿನಿಂದ ಆರ್‌ಸಿಬಿ ತಂಡವು ಅವಿಸ್ಮರಣೀಯ ಗೆಲುವು ದಾಖಲಿಸಿದೆ.
ಇನ್ನು ಇದಷ್ಟೇ ಅಲ್ಲದೇ ಆರ್‌ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲೇ ಯಾವೊಂದು ತಂಡವು ಮಾಡಿರದ ಅಪರೂಪದ ದಾಖಲೆಯನ್ನೂ ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಆರ್‌ಸಿಬಿ ತವರಿನಾಚೆ ಎಲ್ಲಾ 7 ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನ್ನುವ ದಾಖಲೆ ನಿರ್ಮಿಸಿದೆ.
ಆರ್‌ಸಿಬಿ ಐಪಿಎಲ್ ಸೀಸನ್ ಒಂದರಲ್ಲಿ ತವರಿನಾಚೆಗಿನ ಎಲ್ಲಾ 7 ಮ್ಯಾಚ್ ಗೆದ್ದ ಮೊದಲ ತಂಡ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದೆ. ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ದೆಹಲಿ, ಚಂಡೀಗಢ ಹಾಗೂ ಲಖನೌದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿ ಹೊಸ ದಾಖಲೆ ನಿರ್ಮಿಸಿದೆ.
ಆದರೆ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ಸೋತಿದೆಯಲ್ವಾ ಅಂತ ನೀವು ಕೇಳಬಹುದು. ಆದ್ರೆ ವಾಸ್ತವ ಏನು ಅಂದ್ರೆ ಆರ್‌ಸಿಬಿ-ಹೈದರಬಾದ್ ಮ್ಯಾಚ್ ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ಮಳೆಯ ಭೀತಿಯಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯ ಲಖನೌಗೆ ಸ್ಥಳಾಂತರ ಮಾಡಲಾಗಿತ್ತು.
ಆ ಪಂದ್ಯ ಲಖನೌದಲ್ಲಿ ನಡೆದರು, ಆತಿಥ್ಯದ ಹಕ್ಕು ಆರ್‌ಸಿಬಿಯೇ ಪಡೆದುಕೊಂಡಿತ್ತು. ಆ ಪಂದ್ಯವನ್ನು ಆರ್‌ಸಿಬಿ ತವರಿನ ಪಂದ್ಯ ಎಂದೇ ಪರಿಗಣಿಸುವುದರಿಂದ, ಆ ಸೋಲು ತವರಿನ ಸೋಲು ಎಂದೇ ಪರಿಗಣಿಸಲಾಗುತ್ತದೆ.
ಇದೀಗ ಆರ್‌ಸಿಬಿ ತಂಡವು ಮೇ 29ರಂದು ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯ ಗೆದ್ದರೇ ನೇರವಾಗಿ ಅರ್‌ಸಿಬಿ ಫೈನಲ್ ಪ್ರವೇಶಿಸಲಿದೆ. ಸೋತರೇ ಇನ್ನೂ ಒಂದೂ ಅವಕಾಶ ಸಿಗಲಿದೆ.