KSCA ಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಪೊಲೀಸ್ ಇಲಾಖೆ! ಚಿನ್ನಸ್ವಾಮಿ ಫ್ಯಾನ್ಸ್‌ಗೂ ನಿರಾಸೆ
ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜಿಸಬೇಕಿದ್ದರೇ ಪೊಲೀಸ್ ಇಲಾಖೆ ಕೆಎಸ್‌ಸಿಎಗೆ 17 ಷರತ್ತು ವಿಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ನವಿ ಮುಂಬೈಗೆ ಶಿಫ್ಟ್ ಆಗಿವೆ. ಇದು ಕೆಎಸ್‌ಸಿಎ ಹಾಗೂ ಬೆಂಗಳೂರಿನ ಅಭಿಮಾನಿಗೆ ಬಿಗ್ ಶಾಕ್ ಎನಿಸಿದೆ.
ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಇದರ ಜತೆಗೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಅನುಮತಿ ಬೇಕಿದ್ದರೆ 17 ಷರತ್ತುಗಳನ್ನು ಪಾಲಿಸಿ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಗೆ ರಾಜ್ಯ ಪೊಲೀಸ್ ಇಲಾಖೆಯು ಸೂಚಿಸಿದೆ.
ಪೊಲೀಸ್ ಇಲಾಖೆಯು ಕೆಲ ದಿನಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣ ಪರಿಶೀಲನೆ ನಡೆಸಿದ್ದು, ಹಲವು ಲೋಪ ದೋಷಗಳನ್ನು ಪತ್ತೆ ಹಚ್ಚಿದೆ.
ಈ ಬಗ್ಗೆ ಕೆಎಸ್‌ಸಿಎಗೆ ಪತ್ರ ಬರೆದಿರುವ ಇಲಾಖೆ, ಪಾರ್ಕಿಂಗ್, ವೈದ್ಯಕೀಯ ವ್ಯವಸ್ಥೆ, ಬೆಂಕಿ ನಿರೋಧಕ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿ, ಅದಕ್ಕೆ 15 ದಿನಗಳ ಗಡುವು ನೀಡಿದೆ ಎಂದು ತಿಳಿದುಬಂದಿದೆ.
ಕ್ರೀಡಾಂಗಣದಲ್ಲಿ 2 ಹಾಗೂ 4 ಚಕ್ರಗಳ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು, ಕ್ರೀಡಾಂಗಣ ಬಳಿ ಜನಸಂದಣಿ ತಪ್ಪಿಸಲು ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನಿರ್ಮಿಸಬೇಕು.
ಕ್ರೀಡಾಂಗಣ ಗೇಟ್‌ಗಳ ಗಾತ್ರ ಹೆಚ್ಚಿಸಬೇಕು. ಸಿಸಿಟಿವಿ, ಬ್ಯಾಗ್ ಸ್ಕ್ಯಾನರ್, ಮಕ್ಕಳು ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರವೇಶ, ಪ್ರೇಕ್ಷಕರ ಮೇಲೆ ನಿಗಾ ಇಡಲು ವಿಶೇಷ ತಂತ್ರಜ್ಞಾನ ಬಳಕೆ ಮಾಡುವುದು ಸೇರಿದಂತೆ ಹಲವು ಷರತ್ತು ವಿಧಿಸಿದೆ.