IPL 2021: 'ಆರ್‌ಸಿಬಿ ಈ ಸಲ ಪ್ಲೇ ಆಫ್‌ಗೇರಲ್ಲ'
ಬೆಂಗಳೂರು: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಏಪ್ರಿಲ್ 09ರಿಂದ ಹೈವೋಲ್ಟೇಜ್ ಪಂದ್ಯಗಳ ಟೂರ್ನಿಗೆ ಚಾಲನೆ ಸಿಗಲಿದೆ. ಎಲ್ಲಾ 8 ತಂಡಗಳು ಪ್ರತಿಷ್ಠಿತ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಮತ್ತೊಮ್ಮೆ ಐಪಿಎಲ್ ಟೂರ್ನಿ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಹೀಗಿರುವಾಗಲೇ ಯಾವ ತಂಡ ಕಪ್ ಗೆಲ್ಲಬಹುದು? ಯಾವೆಲ್ಲಾ ತಂಡಗಳು ಅಂತಿಮ ನಾಲ್ಕರಘಟ್ಟ ಪ್ರವೇಶಿಸಬಹುದು ಎಂದೆಲ್ಲಾ ಚರ್ಚೆಗಳು ಜೋರಾಗಿವೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆರ್‌ಸಿಬಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ 3 ಐಪಿಎಲ್ ತಂಡಗಳ ಪೈಕಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ಒಂದು.
ಐಪಿಎಲ್ ಇತಿಹಾಸದಲ್ಲಿ 3 ಬಾರಿ ಫೈನಲ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಸುತ್ತಿನಲ್ಲಿ ಎಡವಿ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ.
ಇನ್ನು ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ನೇತೃತ್ವದ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತಾದರೂ, ಮೊದಲ ಎಲಿಮಿನೇಟರ್ ಪಂದ್ಯದಲ್ಲೇ ಮುಗ್ಗರಿಸಿ ತನ್ನ ಅಭಿಯಾನ ಮುಗಿಸಿತ್ತು.
ಪ್ರತಿಬಾರಿಯಂತೆ ಈ ಬಾರಿಯು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಪ್ರಶಸ್ತಿ ಗೆಲ್ಲಬಲ್ಲ ಫೇವರೇಟ್ ತಂಡಗಳಲ್ಲಿ ಒಂದು ಎನಿಸಿದೆ.
ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಅನುಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ 13ನೇ ಆವೃತ್ತಿಯ ಐಪಿಎಲ್ ತಂಡ ಬಲಿಷ್ಠವಾಗಿತ್ತು. ಆದರೆ ಈ ಬಾರಿ ಆರ್‌ಸಿಬಿ ಪ್ಲೇ ಅಫ್ ಪ್ರವೇಶಿಸುತ್ತೆ ಎಂದು ಅನಿಸುವುದಿಲ್ಲ. ಆರ್‌ಸಿಬಿ ಸ್ಟಾರ್ಟಿಂಗ್ ಟ್ರಬಲ್ ಹೊಂದಿದ್ದು, ಒಂದು ವೇಳೆ ತನ್ನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಆರ್‌ಸಿಬಿ ಪ್ಲೇ ಆಫ್‌ಗೇರುವುದು ಕಷ್ಟ ಎನಿಸಿದೆ.
ಈ ಬಾರಿ ಆರಂಭಿಕ ಹಂತದಲ್ಲಿ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಾಲಾಗುವ ಸಾಧ್ಯತೆಯಿದ್ದು, ರಿಷಭ್ ಪಂತ್, ಕೆ.ಎಲ್ ರಾಹುಲ್ ಹಾಗೂ ಡೇವಿಡ್ ವಾರ್ನರ್ ಸಹಾ ಆರೆಂಜ್ ಕ್ಯಾಪ್‌ಗಾಗಿ ಪ್ರಬಲ ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಚೋಪ್ರಾ ಹೇಳಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ.