ಕ್ರೆಟಾ ಪ್ರತಿಸ್ಪರ್ಧಿ ನಿಸಾನ್ ಸಿ ಕಾರು ಅನಾವರಣ, ಸಂಪೂರ್ಣ ಮೇಡ್ ಇನ್ ಇಂಡಿಯಾ
ಕ್ರೆಟಾ ಪ್ರತಿಸ್ಪರ್ಧಿ ನಿಸಾನ್ ಸಿ ಕಾರು ಅನಾವರಣ, ಸಂಪೂರ್ಣ ಮೇಡ್ ಇನ್ ಇಂಡಿಯಾ, ನಿರ್ಮಾಣದ ಕಾರು ಇದಾಗಿದೆ. ಜನಪ್ರಿಯ ಪ್ಯಾಟ್ರೋಲ್ ಮಾದರಿಯಿಂದ ಸ್ಫೂರ್ತಿ ಪಡೆದ ವಿನ್ಯಾಸ, ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

ನಿಸ್ಸಾನ್ ಟೆಕ್ಟಾನ್ ಹೊಸ ಕಾರು
ನಿಸ್ಸಾನ್ ಟೆಕ್ಟಾನ್ ಹೊಸ ಕಾರು
ನಿಸ್ಸಾನ್ ಇಂಡಿಯಾ ಹೊಚ್ಚ ಹೊಸ ಟೆಕ್ಟಾನ್ ಕಾರು ಅನಾವರಣ ಮಾಡಿದೆ. ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರು ಅತ್ಯಾಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ನಿಸ್ಸಾನ್ ಸಾಂಪ್ರಾದಾಯಿಕ ಶೈಲಿಯಿಂದ ಭಿನ್ನವಾದ ವಿನ್ಯಾಸದ ಕಾರನ್ನು ನಿಸ್ಸಾನ್ ಅನಾವರಣ ಮಾಡಿದೆ. ಹೊಸ ಕಾರಿಗೆ ಟೆಕ್ಟಾನ್ ಎಂದು ಹೆಸರಿಡಲಾಗಿದೆ. ಇದರ ಬೆಲೆ 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ಒಳಗೆ ಇರಲಿದೆ ಎಂದು ಅಂದಾಜಿಸಲಾಗಿದೆ.
ಹೊಸ ಕಾರಿಗೆ ಟೆಕ್ಟಾನ್ ಹೆಸರೇಕೆ?
ಹೊಸ ಕಾರಿಗೆ ಟೆಕ್ಟಾನ್ ಹೆಸರೇಕೆ?
ಟೆಕ್ಟಾನ್ʼ ಹೆಸರು ಗ್ರೀಕ್ ಮೂಲದ್ದಾಗಿದೆ. ಇದರ ಅರ್ಥ ʼಕುಶಲಕರ್ಮಿʼ ಅಥವಾ ʼವಾಸ್ತುಶಿಲ್ಪಿʼ. ಬದುಕನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಖರ ಎಂಜಿನಿಯರಿಂಗ್ ಕಾರ್ಯ ಹಾಗೂ ಹೊಸತನದ ಅರಸುವಿಕೆಯು ನಿಸಾನ್ ಕಂಪನಿಯು ಪಾಲಿಸುವ ಮೌಲ್ಯಗಳು, ಈ ಹೆಸರು ಈ ಮೌಲ್ಯಗಳಿಗೆ ಸರಿಹೊಂದುವಂತೆ ಇದೆ. ಶ್ರೇಷ್ಠವಾದ ಎಂಜಿನಿಯರಿಂಗ್, ದಕ್ಷತೆ, ವಿಶಿಷ್ಟವಾದ ವಿನ್ಯಾಸವನ್ನು ಹೇಳುವ ಪ್ರೀಮಿಯಂ ವರ್ಗದ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿಕೊಳ್ಳುತ್ತಿರುವವರಿಗೆ ಟೆಕ್ಟಾನ್ ಎಸ್‌ಯುವಿಯು ಆಯ್ಕೆಯ ವಾಹನದಂತೆ ಆಗಲಿದೆ.
ಮೇಡ್ ಇನ್ ಇಂಡಿಯಾ
ಮೇಡ್ ಇನ್ ಇಂಡಿಯಾ
2026ರಲ್ಲಿ ಈ ಕಾರನ್ನು ಪೂರ್ಣ ಪ್ರಮಾಣದಲ್ಲಿ ಅನಾವರಣ ಮಾಡಲಾಗುತ್ತದೆ, ನಂತರದಲ್ಲಿ ಇದರ ಮಾರಾಟ ಆರಂಭವಾಗಲಿದೆ. ಈ ವಾಹನವನ್ನು ಕಾಂಪ್ಯಾಕ್ಟ್-ಎಸ್‌ಯುವಿ ವರ್ಗದ ವಾಹನಗಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪಲ್ಲಟ ತರುವ ಉದ್ದೇಶದಿಂದ ರೂಪಿಸಲಾಗಿದೆ. ನಿಸಾನ್ ಕಂಪನಿಯ ʼಒಂದು ಕಾರು, ಒಂದು ವಿಶ್ವʼ ಕಾರ್ಯತಂತ್ರದ ಅಡಿಯಲ್ಲಿ ತಯಾರಾಗಲಿರುವ ಎರಡನೆಯ ಕಾರಿನ ಮಾದರಿ ಇದಾಗಲಿದೆ. ಅಲ್ಲದೆ, ಇದನ್ನು ರೆನೊ ಕಂಪನಿಯ ಜೊತೆ ಪಾಲುದಾರಿಕೆಯಲ್ಲಿ ಚೆನ್ನೈನಲ್ಲಿನ ಘಟಕದಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ತಯಾರಾಗುವ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶ ಹಾಗೂ ಮುಂದೆ ಆಯ್ದ ದೇಶಗಳಿಗೆ ರಫ್ತು ಮಾಡುವ ಉದ್ದೇಶವು ಕಂಪನಿಗೆ ಇದೆ.
ವಿನ್ಯಾಸ ಮತ್ತು ಸ್ಫೂರ್ತಿ
ವಿನ್ಯಾಸ ಮತ್ತು ಸ್ಫೂರ್ತಿ
ನಿಸಾನ್ ಕಂಪನಿಯ ಈ ಹೊಸ ಎಸ್‌ಯುವಿ ವಿನ್ಯಾಸವು ಕಂಪನಿಯು ದೀರ್ಘ ಕಾಲದಿಂದ ತಯಾರಿಸುತ್ತಿರುವ ಹಾಗೂ ಐಕಾನಿಕ್ ಬ್ರ್ಯಾಂಡ್ ಆಗಿರುವ ಪ್ಯಾಟ್ರೋಲ್ ಎಸ್‌ಯುವಿಯಿಂದ ಸ್ಫೂರ್ತಿ ಪಡೆದಿದೆ. ಟೆಕ್ಟಾನ್ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಬಹಳ ಆಕರ್ಷಕವಾದ ವಿನ್ಯಾಸ ಹಾಗೂ ಗಟ್ಟಿಯಾದ ವಿಶ್ವಾಸಾರ್ಹತೆಯನ್ನು ಕಾಣಬಹುದು. ಬಹಳ ಪ್ರೀಮಿಯಂ ಗುಣಮಟ್ಟದ ಕೆಲಸಗಳು ಇದರಲ್ಲಿ ಅಡಕವಾಗಿರಲಿವೆ, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರಲಿದೆ.
ಸಿ ಆಕಾರದ ಹೆಡ್‌ಲ್ಯಾಂಪ್
ಸಿ ಆಕಾರದ ಹೆಡ್‌ಲ್ಯಾಂಪ್
ಮುಂಭಾಗದಲ್ಲಿ ಶಕ್ತಿಶಾಲಿಯಾಗಿ ಕಾಣಿಸುವ ಬಾನೆಟ್ ಇರಲಿದೆ, ವಿಶಿಷ್ಟವಾದ ಹಾಗೂ ಇಂಗ್ಲಿಷ್‌ನ ಸಿ ಅಕ್ಷರದ ಆಕಾರದ ಹೆಡ್‌ಲ್ಯಾಂಪ್‌ಗಳು ಇರಲಿವೆ (ಇದು ಪ್ಯಾಟ್ರೋಲ್‌ನ ವಿನ್ಯಾಸವನ್ನು ನೆನಪಿಸಲಿದೆ), ಕೆಳಗಿನ ಬಂಪರ್ ಕೂಡ ಬಹಳ ಶಕ್ತಿಶಾಲಿಯಾಗಿ ಇರಲಿದೆ. ನಿಸಾನ್ ಮೋಟರ್ ಕಂಪನಿಯ ಕಾರ್ಪೊರೇಟ್ ಕಾರ್ಯನಿರ್ವಾಹಕ ಅಲ್ಫೊನ್ಸೊ ಅಲ್ಬೈಸಾ , ಟೆಕ್ಟಾನ್ ವಾಹನದ ವಿನ್ಯಾಸವು ನಮ್ಮ ಪ್ಯಾಟ್ರೋಲ್ ವಾಹನದಿಂದ ಸ್ಫೂರ್ತಿ ಪಡೆದಿದೆ. ಆಧುನಿಕ ಭಾರತದ ಗ್ರಾಹಕರು ಬಯಸುವ ಎಲ್ಲವನ್ನೂ ನೀಡಲು, ಮಾರುಕಟ್ಟೆಯಲ್ಲಿ ಬದಲಾವಣೆ ತರಲು, ಪ್ರಾಬಲ್ಯ ಸಾಧಿಸಲು ಇದನ್ನು ರೂಪಿಸಲಾಗಿದೆ. ವಿನ್ಯಾಸ ಹಾಗೂ ಇದರ ಗುಣಮಟ್ಟವು ನಿಸಾನ್ ಕಂಪನಿಯ ವೈಶಿಷ್ಟ್ಯಕ್ಕೆ ಸರಿಹೊಂದುವಂತಿದೆ” ಎಂದು ಹೇಳಿದ್ದಾರೆ.
ವಾಹನ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ವಾಹನ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ನಿಸಾನ್ ಕಂಪನಿಯು ಮತ್ತೆ ಪ್ರವರ್ಧಮಾನಕ್ಕೆ ಬರುವ ಪ್ರಕ್ರಿಯೆಯಲ್ಲಿ ಟೆಕ್ಟಾನ್ ಮಾದರಿಯು ಕೇಂದ್ರಭಾಗದಲ್ಲಿ ಇರಲಿದೆ ಎಂದು ನಿಸಾನ್ ಇಂಡಿಯಾ ನಿರ್ದೇಶಕ ಸೌರಭ್ ವತ್ಸ ಹೇಳಿದ್ದಾರೆ. ದೇಶದಲ್ಲಿ ನಾವು ಮುಂದೆ ಬಿಡುಗಡೆ ಮಾಡಲಿರುವ ವಾಹನಗಳ ಕುರಿತಾದ ಕಿರುನೋಟವೊಂದನ್ನು ಇದು ನೀಡುತ್ತಿದೆ. ಈ ಶ್ರೇಣಿಯ ವಾಹನಗಳ ಮಾರುಕಟ್ಟೆಯಲ್ಲಿ ಇದು ಬದಲಾವಣೆಗಳನ್ನು ತರುತ್ತದೆ ಎಂಬುದು ನಮ್ಮ ವಿಶ್ವಾಸ. ದೇಶದಲ್ಲಿ ನಿಸಾನ್ ಕಂಪನಿಯ ಬೆಳವಣಿಗೆಯಲ್ಲಿ ಇದು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದಿದ್ದಾರೆ.