ಸಿಎಎಫ್‌ಎ ನೇಷನ್ಸ್‌ ಕಪ್‌ಗೆ ಭಾರತ ತಂಡ ಪ್ರಕಟ. ಸುನಿಲ್ ಚೆಟ್ರಿ ತಂಡದಿಂದ ಹೊರಗೆ. ರೊನಾಲ್ಡೊ ಭಾರತಕ್ಕೆ ಬರಲು ಸಾಧ್ಯತೆ.

ನವದೆಹಲಿ: ಆ.29ರಿಂದ ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನದಲ್ಲಿ ನಡೆಯಲಿರುವ ಸಿಎಎಫ್‌ಎ ನೇಷನ್ಸ್‌ ಕಪ್‌ನಲ್ಲಿ ಆಡಲಿರುವ ಭಾರತ ಫುಟ್ಬಾಲ್‌ ತಂಡದ 35 ಸಂಭಾವ್ಯ ಆಟಗಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ದಿಗ್ಗಜ ಆಟಗಾರ ಸುನಿಲ್‌ ಚೆಟ್ರಿ ಹೆಸರಿಲ್ಲ. 

ಅಂತಾರಾಷ್ಟ್ರೀಯ ನಿವೃತ್ತಿ ಹಿಂಪಡೆದು ಕಳೆದ 4 ಪಂದ್ಯಗಳಲ್ಲಿ ನೀಡಿರುವ ಪ್ರದರ್ಶನ ಗಮನಿಸಿ ಅವರನ್ನು ಹೊರಗಿಟ್ಟಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಆದರೆ ಅವರೇ ವಿಶ್ರಾಂತಿಗೆ ಮನವಿ ಮಾಡಿ ತಂಡದಿಂದ ಹೊರಗುಳಿದಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

ಖಾಲಿದ್‌ ಜಮೀಲ್‌ ಕೋಚಿಂಗ್‌ನಲ್ಲಿ ಭಾರತ ಆಡಲಿರುವ ಮೊದಲ ಟೂರ್ನಿ ಇದಾಗಿದ್ದು, ತಂಡದಲ್ಲಿ ಗುರುಪ್ರೀತ್‌ ಸಿಂಗ್‌, ರಾಹುಲ್‌ ಭೆಕೆ, ಅನಿರುದ್ಧ್‌, ಸಹಲ್‌ ಅಬ್ದುಲ್‌ ಸಮದ್‌ ಇದ್ದಾರೆ. ಭಾರತ ‘ಬಿ’ ಗುಂಪನಲ್ಲಿದ್ದು, ಆ.29ರಂದು ತಜಿಕಿಸ್ತಾನ, ಸೆ.1ಕ್ಕೆ ಇರಾನ್‌, ಸೆ.4ಕ್ಕೆ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.

ರೊನಾಲ್ಡೊ ಮೊದಲ ಬಾರಿ ಭಾರತಕ್ಕೆ ಭೇಟಿ ಸಾಧ್ಯತೆ!

ಶುಕ್ರವಾರ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ 2 ಫುಟ್ಬಾಲ್‌ ಟೂರ್ನಿಯ ಡ್ರಾ ಬಿಡುಗಡೆಗೊಂಡಿತು. ಇದರಲ್ಲಿ ರೊನಾಲ್ಡೊ ತಂಡ ಅಲ್‌ ನಸ್ರ್‌ ಹಾಗೂ ಭಾರತದ ಎಫ್‌ಸಿ ಗೋವಾ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.ಲೀಗ್‌ನಲ್ಲಿ ಪ್ರತಿ ತಂಡ ತನ್ನ ತವರಿನಲ್ಲಿ ಒಂದು ಪಂದ್ಯ, ಎದುರಾಳಿ ಕ್ಲಬ್‌ನ ತವರಿನಲ್ಲಿ ಒಂದ್ಯ ಪಂದ್ಯವನ್ನಾಡಲಿವೆ. ಹೀಗಾಗಿ ಅಲ್‌ ನಸ್ರ್‌ ಭಾರತಕ್ಕೆ ಆಗಮಿಸಿ ಗೋವಾ ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯದಲ್ಲಿ ರೊನಾಲ್ಡೊ ಆಡಲಿದ್ದಾರೊ ಇಲ್ಲವೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಟೂರ್ನಿ ಸೆ.16ರಿಂದ ಡಿ.10ರ ವರೆಗೆ ನಡೆಯಲಿದೆ.

ದೇಶದ ಅಭಿವೃದ್ಧಿಗೆ ಕ್ರೀಡೆ ಪೂರಕ: ಪ್ರಧಾನಿ ಮೋದಿ

ನವದೆಹಲಿ: ‘ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಕ್ರೀಡೆಯ ಕೊಡುಗೆ ಅತ್ಯಗತ್ಯ. ಶಾಲಾ ಮಟ್ಟದಿಂದ ಒಲಿಂಪಿಕ್ಸ್ ತನಕ ಕ್ರೀಡೆಯನ್ನು ಬೆಳಸುವ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾ ನೀತಿಯನ್ನು ತಂದಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಹೇಳಿದರು.

ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಗೆ ಕ್ರೀಡೆಯೂ ಅತ್ಯಗಶ್ಯ. ಮಕ್ಕಳು ಕ್ರೀಡೆಯಲ್ಲಿ ಸಮಯ ಕಳೆದರೆ ಪೋಷಕರು ಅಪಹಾಸ್ಯ ಮಾಡುತ್ತಿದ್ದ ಕಾಲ ಈಗ ಬದಲಾಗಿದೆ. ಈಗ ಪೋಷಕರೇ ತಮ್ಮ ಮಕ್ಕಳನ್ನು ಕ್ರೀಡೆಯತ್ತ ಕರೆದುಕೊಂಡು ಬರುತ್ತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಒಳ್ಳೆಯದು. ಕ್ರೀಡೆಯನ್ನು ಉತ್ತೇಜಿಸಲು ನಾವು ರಾಷ್ಟ್ರೀಯ ಕ್ರೀಡಾ ನೀತಿಯನ್ನು ತಂದಿದ್ದೇವೆ. ಇದರಿಂದ ಕ್ರೀಡೆಯನ್ನು ಶಾಲೆಯಿಂದ ಒಲಿಂಪಿಕ್ಸ್ ತನಕ ಅಭಿವೃದ್ಧಿ ಮಾಡಲಿದ್ದೇವೆ’ ಎಂದರು.

ದೇಶದ ಮೂಲೆ ಮೂಲೆಗೂ ಕ್ರೀಡೆಯನ್ನು ತಲುಪಿಸುತ್ತೇವೆ. ತಳಮಟ್ಟದಲ್ಲೇ ಕ್ರೀಡೆಯನ್ನು ಬೆಳೆಸುವ ಗುರಿ ನಮ್ಮದು. ಇದಕ್ಕಾಗಿ ಫಿಟ್ನೆಸ್‌, ತರಬೇತಿ, ಮೂಲಸೌಕರ್ಯ ಅಭಿವೃದ್ಧಿ ಪಡಿಸುತ್ತೇವೆ’ ಎಂದು ಅವರು ತಿಳಿಸಿದರು.

ಕಿರಿಯರ ಹಾಕಿ: ರಾಜ್ಯಕ್ಕೆ 10-1 ಗೋಲಿನ ಗೆಲುವು

ಜಲಂಧರ್‌: 15ನೇ ರಾಷ್ಟ್ರೀಯ ಕಿರಿಯರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ‘ಎ’ ಡಿವಿಷನ್‌ನ ‘ಡಿ’ ಗುಂಪಿನಲ್ಲಿರುವ ರಾಜ್ಯ ತಂಡ ಶನಿವಾರ ಮೊದಲ ಪಂದ್ಯದಲ್ಲಿ ಆಂಧ್ರ ಪ್ರದೇಶ ವಿರುದ್ಧ 10-1 ಗೋಲುಗಳಿಂದ ಭರ್ಜರಿ ಜಯಗಳಿಸಿತು. ಹರ್ಪಲ್, ತನೀಶ್‌ ರಮೇಶ್‌ ತಲಾ 2, ನಾಯಕ ಧ್ರುವ, ಅಚಯ್ಯ, ಕುಶಾಲ್‌ ಬೋಪಯ್ಯ, ರಾಜು ಗಾಯಕ್ವಾಡ್‌, ನಿತೇಶ್‌ ಶರ್ಮಾ, ಪೂಜಿತ್‌ ತಲಾ 1 ಗೋಲು ಬಾರಿಸಿದರು. ಭಾನುವಾರ ರಾಜ್ಯಕ್ಕೆ ಒಡಿಶಾ ಸವಾಲು ಎದುರಾಗಲಿದೆ.

2000 ಮೀ. ಸ್ಟೀಪಲ್‌ಚೇಸ್‌: ಅಂಕಿತಾ ರಾಷ್ಟ್ರೀಯ ದಾಖಲೆ

ನವದೆಹಲಿ: ಭಾರತದ ಅಂಕಿತಾ ಧ್ಯಾನಿ ಗ್ರ್ಯಾನ್‌ಸ್ಲಾಂ ಜೆರುಸಲೇಮ್‌ ಅಥ್ಲೆಟಿಕ್ಸ್‌ನಲ್ಲಿ 2000 ಮೀ. ಸ್ಟೀಪಲ್ ಚೆಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 23ರ ಹರೆಯದ ಅಂಕಿತಾ 6 ನಿಮಿಷ 13.92 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಮುತ್ತಿಟ್ಟರು. ಈ ಮೂಲಕ ಅವರು ಭಾರತದ ಪಾರುಲ್ ಚೌಧರಿ ಹೊಂದಿದ್ದ 6 ನಿಮಿಷ 14.38 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆ ಮುರಿದರು. ಗೆಲುವಿನೊಂದಿಗೆ ಅಂಕಿತಾ ಮುಂದಿನ ತಿಂಗಳು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ 3000 ಮೀ. ಸ್ಟೀಪಲ್ ಚೆಸ್‌ನಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ.