ಐಎಸ್‌ಎಲ್ ಟೂರ್ನಿ ಆಯೋಜನೆ ಬಗ್ಗೆ ಎಐಎಫ್‌ಎಫ್ ಮತ್ತು ಎಫ್‌ಸಿಡಿಲ್ ನಡುವೆ ಬಿಕ್ಕಟ್ಟು ಉಂಟಾಗಿದ್ದು, 11 ಕ್ಲಬ್‌ಗಳು ಸುಪ್ರೀಂ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿವೆ. ಸೂಪರ್ ಕಪ್ ನಡೆಸುವ ಬಗ್ಗೆ ಎಐಎಫ್‌ಎಫ್ ಭರವಸೆ ನೀಡಿದ್ದರೂ, ಐಎಸ್‌ಎಲ್ ಭವಿಷ್ಯದ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ.

ನವದೆಹಲಿ: ಇಂಡಿಯನ್ ಸೂಪರ್‌ ಲೀಗ್ ಬಿಕ್ಕಟ್ಟಿನ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಬೇಕು ಹಾಗೂ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್‌(ಎಐ್‌ಎಫ್‌ಎಫ್‌)ಗೆ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ 11 ಕ್ಲಬ್‌ಗಳು ಮನವಿ ಮಾಡಿವೆ.

ಎಐಎಫ್‌ಎಫ್‌ ಹಾಗೂ ಐಎಸ್‌ಎಲ್‌ ಆಯೋಜಕರಾದ ಎಫ್‌ಸಿಡಿಲ್‌ ನಡುವಿನ ಬಿಕ್ಕಟ್ಟಿನಿಂದಾಗಿ ಈ ಬಾರಿ ಐಎಸ್‌ಎಲ್‌ ಟೂರ್ನಿ ಅತಂತ್ರವಾಗಿದೆ. ಈ ಬಗ್ಗೆ ಪತ್ರ ಬರೆದಿರುವ ಐಎಸ್‌ಎಲ್‌ ಕ್ಲಬ್‌ಗಳು, ‘ಎಐಎಫ್‌ಎಫ್‌ ನಮ್ಮ ಕೋರಿಕೆಯ ರೀತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ಆಯ್ಕೆಯಿಲ್ಲ. ಸದ್ಯದ ಬಿಕ್ಕಟ್ಟಿನ ಬಗ್ಗೆ ಗೌರವಾನ್ವಿತ ಕೋರ್ಟ್‌ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದಿವೆ.

ಒಟ್ಟು 13 ಐಎಸ್‌ಎಲ್ ಕ್ಲಬ್‌ಗಳ ಪೈಕಿ ಮೋಹನ್‌ ಬಗಾನ್ ಸೂಪರ್‌ ಜೈಂಟ್ಸ್‌ ಮತ್ತು ಈಸ್ಟ್‌ ಬೆಂಗಾಲ್ ಫುಟ್ಬಾಲ್ ಕ್ಲಬ್ ಹೊರತುಪಡಿಸಿ ಉಳಿದ 11 ತಂಡಗಳು ಪತ್ರಕ್ಕೆ ಸಹಿ ಹಾಕಿವೆ.

ಸೂಪರ್‌ ಕಪ್‌ ಖಚಿತ: ಐಎಸ್‌ಎಲ್‌ ಫುಟ್ಬಾಲ್‌ ಬಗ್ಗೆ ಇನ್ನೂ ಗೊಂದಲ

ನವದೆಹಲಿ: ಈ ಬಾರಿ ಸೂಪರ್‌ ಕಪ್‌ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಹೇಳಿದೆ. ಅತಂತ್ರಗೊಂಡಿರುವ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಆಯೋಜಿಸುವ ಬಗ್ಗೆ ಎಐಎಫ್‌ಎಫ್‌ ಭರವಸೆ ನೀಡಿದ್ದರೂ, ಟೂರ್ನಿಯ ಬಗ್ಗೆ ಗೊಂದಲ ಮುಂದುವರಿದಿದೆ. ಗುರುವಾರ ಐಎಸ್‌ಎಲ್‌ ಕ್ಲಬ್‌ಗಳ ಜೊತೆ ಎಐಎಫ್‌ಎಫ್‌ ಸಭೆ ನಡೆಸಿತು. ಬಳಿಕ ಮಾತನಾಡಿದ ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ, ‘ಐಎಸ್‌ಎಲ್‌ ಕ್ಲಬ್‌ಗಳಿಗೆ ಸಾಕಷ್ಟು ಪಂದ್ಯಗಳು ಸಿಗಬೇಕು ಎಂಬ ಕಾರಣಕ್ಕೆ ಸೂಪರ್‌ ಕಪ್‌ಅನ್ನು ಸೆಪ್ಟೆಂಬರ್‌ನಲ್ಲಿ ನಡೆಸುತ್ತೇವೆ. ಆ ಬಳಿಕ ಐಎಸ್‌ಎಲ್‌ ನಡೆಯಲಿದೆ’ ಎಂದಿದ್ದಾರೆ.

ಆದರೆ ಐಎಸ್‌ಎಲ್‌ ಆಯೋಜಕರಾಗಿದ್ದ ಎಫ್‌ಎಸ್‌ಡಿಎಲ್‌ ಹಾಗೂ ಎಐಎಫ್‌ಎಫ್‌ ನಡುವಿನ ಒಪ್ಪಂದ 2025ರ ಡಿ.8ಕ್ಕೆ ಕೊನೆಗೊಳ್ಳಲಿದೆ. ಒಪ್ಪಂದ ನವೀಕರಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಎಐಎಫ್‌ಎಫ್‌ ಭರವಸೆ ನಡೆವೆಯೂ ಟೂರ್ನಿ ಭವಿಷ್ಯದ ಬಗ್ಗೆ ಗೊಂದಲವಿದೆ.

ಅಂ-20 ಫುಟ್ಬಾಲ್: ಭಾರತ ಮಹಿಳೆಯರಿಗೆ 7-0 ಗೆಲುವು

ಯಾಂಗೊನ್‌(ಮ್ಯಾನ್ಮಾರ್‌): ಎಎಫ್‌ಸಿ ಅಂಡರ್‌-20 ಮಹಿಳಾ ಏಷ್ಯನ್‌ ಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಶುಕ್ರವಾರ ತುರ್ಕ್‌ಮೇನಿಸ್ತಾನ ವಿರುದ್ಧ 7-0 ಗೋಲುಗಳಲ್ಲಿ ಜಯಗಳಿಸಿದೆ. ಇದರೊಂದಿಗೆ ಭಾರತ ‘ಡಿ’ ಗುಂಪಿನಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಭಾನುವಾರ ಭಾರತಕ್ಕೆ ಮ್ಯಾನ್ಮಾರ್‌ ಸವಾಲು ಎದುರಾಗಲಿದೆ. ಗೆದ್ದರೆ ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯಲಿದೆ.

ಫಿಫಾ: 63ನೇ ಸ್ಥಾನಕ್ಕೇರಿದ ಭಾರತ ಮಹಿಳಾ ಫುಟ್ಬಾಲ್‌

ನವದೆಹಲಿ: ಫಿಫಾ ಮಹಿಳಾ ಫುಟ್ಬಾಲ್‌ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡ ಪ್ರಗತಿ ಸಾಧಿಸಿದ್ದು, 63ನೇ ಸ್ಥಾನಕ್ಕೇರಿದೆ. ಇತ್ತೀಚೆಗೆ ಎಎಫ್‌ಸಿ ಏಷ್ಯನ್‌ ಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತ, ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 7 ಸ್ಥಾನ ಜಿಗಿತ ಕಂಡಿತು. ಇದು ಕಳೆದೆರಡು ವರ್ಷಗಳಲ್ಲಿ ತಂಡದ ಶ್ರೇಷ್ಠ ಸಾಧನೆ. 2023ರ ಆಗಸ್ಟ್‌ನಲ್ಲಿ ತಂಡ 61ನೇ ಸ್ಥಾನ ಪಡೆದಿತ್ತು. ಏಷ್ಯಾದ ತಂಡಗಳ ಪೈಕಿ ಭಾರತ 12ನೇ ಸ್ಥಾನದಲ್ಲಿದೆ. ಒಟ್ಟಾರೆ ರ್‍ಯಾಂಕಿಂಗ್‌ನಲ್ಲಿ ಸ್ಪೇನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಯುಎಸ್‌ಎ, ಸ್ವೀಡನ್‌, ಇಂಗ್ಲೆಂಡ್‌, ಜರ್ಮನಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.