ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ. ಬಾವಿಯ ಸುತ್ತಲೂ ಸುರಕ್ಷತಾ ಕ್ರಮಗಳ ಕೊರತೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ವಿಜಯಪುರ (ಆ.12): ಆಟವಾಡು ಹೋದ ಬಾಲಕಿ ಆಳವಾದ ಬಾವಿಯಲ್ಲಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಳಿಯ ಧನಸಿಂಗ್ (ಮೋನಪ್ಪ ನಗರ) ತಾಂಡಾದಲ್ಲಿ ಸೋಮವಾರ ಸಂಜೆ ಸಂಭವಿಸಿದೆ ನಡೆದಿದೆ.
8 ವರ್ಷದ ಬಾಲಕಿ ಅರ್ಚನಾ ರಾಠೋಡ ಮೃತ ಬಾಲಕಿ. ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದ ಅರ್ಚನಾ, ಆಟವಾಡುವ ಉತ್ಸಾಹದಲ್ಲಿ ಸಮೀಪದ ಬಾವಿಯ ಬಳಿ ಹೋಗಿದ್ದಾಳೆ. ಆದರೆ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ಬಾವಿಯೊಳಗೆ ಬಿದ್ದಿದ್ದಾಳೆ. ಘಟನೆಯನ್ನು ಗಮನಿಸಿದ ತಾಯಿ ಗಾಬರಿ ಆತಂಕದಿಂದ ಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಬಾಲಕಿ ಬಾವಿಗೆ ಬಿದ್ದು ತಕ್ಷಣಕ್ಕೆ ಸಹಾಯಕ್ಕೆ ದಾವಿಸಿಲ್ಲ. ಅಗ್ನಿಶಾಮಕ ಬರುವ ಹೊತ್ತಿಗೆ ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ಅಡಚಣೆಯಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ, ಬಾಲಕಿಯ ಶವವನ್ನು ಬಾವಿಯಿಂದ ಕೊನೆಗೂ ಹೊರತೆಗೆದಿದ್ದಾರೆ.
ಈ ದುರಂತ ಘಟನೆಯಿಂದ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು. ಘಟನೆ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯ ಸುತ್ತಲು ಬೇಲಿ, ತಡೆಗೋಡೆ ಹಾಕದಿರುವುದು, ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರ್ಘಟನೆಗೆ ಕಾರಣವಾಗಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆಆತಂಕ ಪಡುವಂತಾಗಿದೆ
