ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬೆಳಗಾವಿ (ಸೆ.4): ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲಕಿ-ಮುರಗೋಡ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮುರಗೋಡ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಪರಿಚಿತ ವಾಹನವೊಂದು ಬೈಕ್ ಸವಾರರ ತಲೆಯ ಮೇಲೆ ಹಾಯ್ದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತ ಯುವಕರನ್ನು ಸವದತ್ತಿ ತಾಲೂಕಿನ ಹುಲಿಕೇರಿ ತಾಂಡಾದ ನಿವಾಸಿಗಳಾದ ವಿಶಾಲ ಲಮಾಣಿ (20) ಮತ್ತು ಅಪ್ಪು ಲಮಾಣಿ (23) ಎಂದು ಗುರುತಿಸಲಾಗಿದೆ. ರಸ್ತೆಯ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದ ಯುವಕ ಮೃತದೇಹ ಕಂಡು ಆಘಾತಗೊಂಡ ಕುಟುಂಬಸ್ಥರು

ಇದನ್ನೂ ಓದಿ: ಬಸ್‌-ಲಾರಿ ನಡುವೆ ಭೀಕರ ಅಪಘಾತ, ಇಬ್ಬರೂ ಡ್ರೈವರ್‌ಗಳ ಕಾಲು ಕಟ್‌!

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪರಿಚಿತ ವಾಹನ ಚಾಲಕ ಘಟನೆ ಬಳಿಕ ಪರಾರಿಯಯಾಗಿದ್ದಾನೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ದುರ್ಘಟನೆಯಿಂದ ಯುವಕರ ಕುಟುಂಬದವರಿಗೆ ಆಘಾತವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.