ಖಾಸಗಿ ಕಾಲೇಜಿನ HoD ಸಂಜೀವ್ ಕುಮಾರ್ ಮಂಡಲ್, ಬಿಸಿಎ ವಿದ್ಯಾರ್ಥಿನಿಯೊಬ್ಬಳಿಗೆ ಊಟದ ನೆಪದಲ್ಲಿ ಮನೆಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಪೋಷಕರೊಂದಿಗೆ ತಿಲಕನಗರ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ತಿಲಕನಗರ(ಅ.8): ಮನೆಗೆ ಊಟಕ್ಕೆ ಕರೆದು ಬಿಸಿಎ ವಿಧ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಖಾಸಗಿ ಕಾಲೇಜಿನ HoD ಆಗಿರುವ ಆರೋಪಿಯನ್ನ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.
ಸಂಜೀವ್ ಕುಮಾರ್ ಮಂಡಲ್ ಬಂಧಿತ ಆರೋಪಿ. ಖಾಸಗಿ ಕಾಲೇಜಿನ ಹೆಡ್ ಆಫ್ ಡಿಪಾರ್ಟ್‌ಮೆಂಟ್ (HoD) ಆಗಿರುವ ಆರೋಪಿ ಅಕ್ಟೋಬರ್ 2 ರಂದು ವಿಧ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಮನೆಗೆ ಬಂದಾಗ ಮಂಡಲ್ ಒಬ್ಬನೇ ಇದ್ದ!
ಕುಟುಂಬದೊಂದಿಗೆ ಊಟ ಮಾಡೋಣ ಬಾ ಎಂದು ವಿದ್ಯಾರ್ಥಿನಿಗೆ ಪುಸಲಾಯಿಸಿ ಮನೆಗೆ ಕರೆಸಿಕೊಂಡಿದ್ದ ಆರೋಪಿ. ಹೆಚ್‌ಒಡಿ ಮಾತು ನಂಬಿ ಊಟಕ್ಕೆ ಮನೆಗೆ ಹೋಗಿದ್ದ ವಿದ್ಯಾರ್ಥಿನಿ. ಆದರೆ ಮನೆಯೊಳಗೆ ಹೋಗುತ್ತಲೇ ಗಾಬರಿಯಾಗಿದ್ದಾಳೆ. ಫ್ಯಾಮಿಲಿ ಜೊತೆಗೆ ಊಟಕ್ಕೆ ಎಂದಿದ್ದ ಮಂಡಲ್ ಆದರೆ ಮನೆಯಲ್ಲಿ ಒಬ್ಬನೇ ಇದ್ದದ್ದನ್ನು ಕಂಡು ಹೆದರಿ ವಾಪಸ್ ಹೋಗಲು ಮುಂದಾಗಿದ್ದ ವಿದ್ಯಾರ್ಥಿನಿ. ಈ ವೇಳೆ, 'ನಿನಗೆ ಹಾಜರಾತಿ ಕಡಿಮೆ ಇದೆ, ಮಾರ್ಕ್ಸ್ ಕಡಿಮೆ ಬರುತ್ತೆ. ಸಹಕರಿಸಿದರೆ ಫುಲ್ ಮಾರ್ಕ್ಸ್ ಕೊಡ್ತೀನಿ ಎಂದು ಒತ್ತಾಯಿಸಿ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದ ಎಂದು ಆರೋಪಿಸಲಾಗಿದೆ.
ಸ್ನೇಹಿತೆಯ ಕಾಲ್ ನೆಪದಲ್ಲಿ ಅಲ್ಲಿಂದ ಬಚಾವ್ ಆಗಿದ್ದ ವಿದ್ಯಾರ್ಥಿನಿ:
ಸಂತ್ರಸ್ತ ವಿದ್ಯಾರ್ಥಿನಿ, ಸ್ನೇಹಿತೆಯ ಕರೆ ಬಂದಿದೆ ಎಂದು ನೆಪ ಹೇಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ನಂತರ ತನ್ನ ಪೋಷಕರಿಗೆ ವಿಷಯ ತಿಳಿಸಿ, ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಸಂಜೀವ್ ಕುಮಾರ್ ಮಂಡಲ್‌ನನ್ನು ಬಂಧಿಸಿದ್ದಾರೆ.
ತಿಲಕನಗರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
