Prostitution Racket Busted in Kodagu: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಕೊಡಗು (ಸೆ.19): ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಂಗಳೂರು ನಗರವಷ್ಟೇ ಅಲ್ಲ, ರಾಜ್ಯದ ಜಿಲ್ಲೆಗಳಲ್ಲೂ ಬಹಿರಂಗವಾಗಿ ನಡ್ತೀದೆ ದಂಧೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಖಾಸಗಿ ಬ್ಯೂಟಿ ಪಾರ್ಲರ್ ಹಾಗೂ ಕ್ಲಬ್‌ಗಳ ಹೆಸರಿನಲ್ಲಿ ಈ ಕುಕೃತ್ಯ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದವು. ಇದೀಗ ಆರೋಪಗಳಿಗೆ ಇಂಬು ಕೊಡುವಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಶಿಜು ಮತ್ತು ಪ್ರದೀಪ್ ಬಂಧಿತ ಆರೋಪಿಗಳು. ಈ ದಂಧೆಯು ವಿರಾಜಪೇಟೆಯ ಖಾಸಗಿ ಬ್ಯೂಟಿ ಪಾರ್ಲರ್‌ನಲ್ಲಿ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ದಾಳಿಯ ವೇಳೆ, ರಾಜ್ಯದ ವಿವಿಧ ಭಾಗಗಳಿಂದ ಕರೆತರಲಾಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ದಂಧೆಗಾಗಿ ಮಹಿಳೆಯರನ್ನು ವಿವಿಧ ಸ್ಥಳಗಳಿಂದ ಕರೆಸಿಕೊಂಡು ಸಂಘಟಿತ ರೀತಿಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿರಾಜಪೇಟೆ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
