ಶೃಂಗೇರಿ ಶಾರದಾ ಪೀಠ ನಡೆಸುವ ಶಿಕ್ಷಣ ಸಂಸ್ಥೆಯ ಸಂಚಾಲಕನಾಗಿದ್ದುಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿಯ ಚೈತನ್ಯಾನಂದ ಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ನವದೆಹಲಿ : ಶೃಂಗೇರಿ ಶಾರದಾ ಪೀಠ ನಡೆಸುವ ಶಿಕ್ಷಣ ಸಂಸ್ಥೆಯ ಸಂಚಾಲಕನಾಗಿದ್ದುಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿಯ ಚೈತನ್ಯಾನಂದ ಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ವಂಚನೆ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆತ ದೆಹಲಿ ಕೋರ್ಟ್‌ನ ಮರೆಹೋಗಿದ್ದ. ಅರ್ಜಿ ವಜಾದೊಂದಿಗೆ ಆತನಿಗೆ ಬಂಧನ ಭೀತಿ ಆರಂಭವಾಗಿದೆ.
ದಾಖಲೆ ನಕಲಿಸುವುದು, ಮೋಸ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ಆಸ್ತಿಯನ್ನು ಹಸ್ತಾಂತರಿಸಲು ಅಥವಾ ಅದನ್ನು ಉಳಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವುದು, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿ ಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಸೆಷನ್ಸ್ ನ್ಯಾ। ಹರ್ದೀಪ್ ಕೌರ್, ‘ಈ ಪ್ರಕರಣದ ತನಿಖೆಗೆ ಅರ್ಜಿದಾರ/ಆರೋಪಿಯ ಉಪಸ್ಥಿತಿ ಅಗತ್ಯ. ಆದರೆ ಸದ್ಯ ಅವರು ನೀಡಿರುವ ವಿಳಾಸದಲ್ಲಿಲ್ಲ. ಮೊಬೈಲ್ ಕೂಡ ಆಫ್ ಆಗಿದೆ. ಕೇಸ್‌ನ ಗಂಭೀರತೆಯನ್ನು ಪರಿಗಣಿಸಿ ಬೇಲ್ ತಿರಸ್ಕರಿಸಲಾಗಿದೆ’ ಎಂದರು.
8 ಕೋಟಿ ರು. ಫ್ರೀಜ್:
ಅತ್ತ ಈ ಸ್ವಾಮಿಯ 18 ಬ್ಯಾಂಕ್ ಖಾತೆಗಳು ಮತ್ತು 28 ಎಫ್‌ಡಿಗಳಲ್ಲಿದ್ದ 8 ಕೋಟಿ ರು.ಅನ್ನು ಫ್ರೀಜ್ ಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಮತ್ತಷ್ಟು ಆರೋಪ:
ಈ ನಡುವೆ ತಾನು ಸಂಚಾಲಕನಾಗಿದ್ದ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಶುಲ್ಕ ನೀಡುವಂತೆ ಸ್ವಾಮಿ ಬೆದರಿಸಿದ್ದ ಎಂಬ ಆರೋಪ ಕೇಳಿಬಂದಿದೆ. ‘ನಾನು ನಿಗದಿತ 60 ಸಾವಿರ ರು. ಶುಲ್ಕ ಕಟ್ಟಿದ್ದರೂ ಹೆಚ್ಚು ಶುಲ್ಕ ಕಟ್ಟುವಂತೆ ಕೇಳಿದ್ದ’ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಐ ಲವ್ ಯು, ಬೇಬಿ..’ ದಿಲ್ಲಿ ಸ್ವಾಮಿ ಕಾಮಕಾಂಡ
ನವದೆಹಲಿ: ಸ್ವಯಂಘೋಷಿತ ದೇವಮಾನವ, ಶೃಂಗೇರಿ ಮಠದ ಶಿಕ್ಷಣ ಸಂಸ್ಥೆ ಶ್ರೀ ಶಾರದಾ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನಿರ್ದೇಶಕನೂ ಆಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಐಲವ್ ಯೂ... ಬೇಬಿ... ನೀನು ಸುಂದರವಾಗಿ ಕಾಣ್ತಿದ್ದಿ... ಎಂಬ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಇದೀಗ ಬಯಲಾಗಿದೆ.
ಸ್ವಾಮೀಜಿ ವಿರುದ್ಧ 17 ವಿದ್ಯಾರ್ಥಿನಿಯರು ದಾಖಲಿಸಿದ್ದ ದೂರಿನ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಸ್ಕಾಲರ್‌ಶಿಪ್ ವಿಭಾಗದ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಸ್ವಾಮೀಜಿ ಲೈಂ*ಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯರ ಸುರಕ್ಷತೆ ಹೆಸರಿನಲ್ಲಿ ಸ್ವಾಮೀಜಿ ಹಾಸ್ಟೆಲ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಕೆ ಮಾಡಿದ್ದ, ವಿದ್ಯಾರ್ಥಿನಿಯರನ್ನು ಹೊತ್ತಲ್ಲದ ಹೊತ್ತಲ್ಲಿ ಕರೆಸಿಕೊಳ್ಳುತ್ತಿದ್ದ, ಐ ಲವ್ ಯೂ, ಬೇಬಿ, ನೀನು ಸುಂದರವಾಗಿ ಕಾಣಿಸ್ತಿದ್ದಿ.. ನಿನ್ನನ್ನು ನಾನು ನೆನಪು ಮಾಡಿಕೊಳ್ಳುತ್ತಿದ್ದೇನೆ... ನೀನು ಹಾಕಿರೋ ಡ್ರೆಸ್ ಚೆನ್ನಾಗಿದೆ... ಹೀಗೆ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಸಂದೇಶ ಕಳುಹಿಸುತ್ತಿದ್ದ. ಒಂದು ವೇಳೆ ತಾನು ಕಳುಹಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ, ತನ್ನ ತೆವಲಿಗೆ ಸಹಕರಿಸದಿದ್ದರೆ ಅಂಥ ವಿದ್ಯಾರ್ಥಿಗಳಿಗೆ ಅಂಕ ಕಡಿತದಂಥ ಬೆದರಿಕೆಗಳನ್ನೂ ಹಾಕಿಸುತ್ತಿದ್ದ ಎಂದು ಆರೋಪಿಸಲಾಗಿದೆ.
