ಬೆಂಗಳೂರಿನಲ್ಲಿ ಮಾಜಿ ಪ್ರೇಮಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಯುವತಿಯೇ ಸೂತ್ರಧಾರಿಯಾಗಿ 6 ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದರ್ಶನ್-ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸುವ ಈ ಘಟನೆ ನಡೆದಿದೆ.
ಬೆಂಗಳೂರು (ಜು.07): ಕನ್ನಡ ಸಿನಿಮಾ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಮಾದರಿಯಲ್ಲಿಯೇ ಇತ್ತೀಚೆಗೆ ನಡೆದ ಮತ್ತೊಂದು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಿಂದ ರಾಜ್ಯ ರಾಜಧಾನಿ ಬೆಚ್ಚಿಬಿಟ್ಟಿದೆ. ತನಗೆ ಅಶ್ಲೀಲ ಸಂದೇಶ ಕಳಿಸಿದ್ದೆಂದು ಆರೋಪಿಸಿ ಮಾಜಿ ಪ್ರೇಮಿಯನ್ನು ಕಿಡ್ನಾಪ್ ಮಾಡಿಸಿ, ಯುವತಿಯ ಮುಂದೆಯೇ ಬೆತ್ತಲೆಗೊಳಿಸಿ, ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಈ ಘಟನೆಯಲ್ಲಿ 6 ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಆರೋಪಿಗಳಾಗಿದ್ದು, ಹಲ್ಲೆ ಪ್ರಕರಣಕ್ಕೆ ಸೂತ್ರಧಾರಿಯಾದ ಯುವತಿಯೇ ಈ ಪ್ಲಾನ್ ನೀಡಿದ್ದಾಳೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಯುವತಿಯು ಕಾನೂನು ಸಂಘರ್ಷಕ್ಕೆ ಒಳಗಾದ 17 ವರ್ಷದ ಬಾಲಕಿ ಎನ್ನಲಾಗಿದ್ದು, ನ್ಯಾಯಾಲಯದ ಆದೇಶದಂತೆ ಇದೀಗ ಜುವೈನೈಲ್ ಸೆಂಟರ್‌ನಲ್ಲಿ ತಡವಾಗಿ ಬಂಧನಕ್ಕೊಳಗಾಗಿದ್ದಾಳೆ. ಬೆಂಗಳೂರಿನ ಎಜಿಬಿ ಲೇಔಟ್‌ನಲ್ಲಿ ಪ್ರಕರಣ ನಡೆದಿದೆ.
ನೀನು ನನ್ನ ಜೊತೆ ಬರದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹುಡುಗಿಗೆ ಮಾಜಿ ಪ್ರೇಮಿ ಕುಶಾಲ್ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಕಿಡ್ನಾಪ್ ಮಾಡಿ ಹಲ್ಲೆ ಮಾಡುವ ಪ್ಲಾನ್ ಮಾಡಿದ್ದಾಳೆ. ಕುಶಾಲ್‌ನನ್ನು ಎಜಿಬಿ ಲೇಔಟ್‌ನಲ್ಲಿ ಮೀಟ್ ಮಾಡುವುದಾಗಿ ಯುವತಿ ಹೇಳಿದ್ದಾಳೆ. ಯುವತಿಯ ಮಾತನನ್ನ ನಂಬಿ ಬಂದಿದ್ದ ಕುಶಾಲ್‌ನನ್ನು ಕಾರಿನಲ್ಲಿ ಯುವಕರು ಕಿಡ್ನಾಪ್ ಮಾಡಿದ್ದಾರೆ. ಯುವತಿಯೂ ಸೇರಿದಂತೆ ಆರೋಪಿಗಳಿಂದ ಕಿಡ್ನಾಪ್ ಮಾಡಿ, ಯುವತಿ ಮುಂದೆಯೇ ಹಲ್ಲೆ ಮಾಡಿದ್ದಾರೆ. ಜೊತೆಗೆ, ಯುವತಿ ಮುಂದೆ ಮಂಡಿಯೂರಿ ಕೂರಿಸಿ ವಿಡಿಯೋ ವೈರಲ್ ಮಾಡ್ತೀಯಾ ಅಂತ ಹೇಳಿ, ಕ್ಷಮೆ ಕೇಳಿಸಿದ್ದರು. ಇನ್ನು ಪ್ರೀತಿಸಿದ್ದ ಯುವತಿ ಮುಂದೆ ಮಡಿಯೂರಿ ಕುಳಿತು ಕುಶಾಲ್ ಕ್ಷಮೆ ಕೇಳಿದ್ದನು. ಇಷ್ಟಾದರೂ ಬಿಟ್ಟೂ ಬಿಡದೆ ಹಲ್ಲೆ ನಡೆಸಿದ್ದಾರೆ.
ಮಾಜಿ ಪ್ರಿಯಕರನ ಮೇಲೆ ಕಿಂಚಿತ್ತೂ ಕರುಣೆ ತೋರದ ಯುವತಿ. ಕಾರಿನಲ್ಲಿ ಕುಶಾಲ್‌ನನ್ನು ಕರೆದೊಯ್ಯುವಾಗ ಯುವತಿ ಮುಂದೆಯೇ ಹಲ್ಲೆ ಮಾಡಿ ವಿಕೃತಿ ಮೆರೆಯಲಾಗಿದೆ. ಹುಡುಗಿಯ ಮುಂದೆ ಬಿಲ್ಡಪ್‌ಗೆ ಯುವಕನ ಪ್ರಾಣದ ಜೊತೆ ಚೆಲ್ಲಾಟ ಆಡಲಾಗಿದೆ. ಪ್ರೀತಿಸಿದ್ದ ಹುಡುಗಿಯ ಮುಂದೆಯೇ ಹಾಡು ಹೇಳುವಂತೆ ಒತ್ತಾಯ. ಹಾಡು ಹೇಳು ಎಂದು ಹಲ್ಲೆ ನಡೆಸಿ, ಆತನ ಬಟ್ಟೆ ಬಿಚ್ಚಿಸಿ ಬೆತ್ತಲುಗೊಳಿಸಿ ವಿಕೃತಿ ಮೆರೆಯಲಾಗಿದೆ.
ಕಳೆದೊಂದು ವರ್ಷದ ಹಿಂದೆ ನಟ ದರ್ಶನ್ ಅವರ ಗೆಳಲಿ ನಟಿ ಪವಿತ್ರಾಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದನಂತೆ. ಈ ಹಿನ್ನೆಲೆಯಲ್ಲಿ ಆತನನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬಂದು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ನಟ ದರ್ಶನ್ ಸೇರಿದಂತೆ 14 ಜನ ಆರೋಪಿಗಳು ಸೇರಿ ರೇಣುಕಾಸ್ವಾಮಿಯನ್ನು ಭೀಕರವಾಗಿ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಒದ್ದು, ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿ ಬೀದಿ ಹೆಣವಾಗಿ ಬೀಸಾಡಲಾಗಿತ್ತು. ಇದೇ ರೇಣುಕಾಸ್ವಾಮಿ ಮಾದರಿಯಲ್ಲೇ ಈ ಯುಕ ಕುಶಾಲ್‌ಗೂ ಹಲ್ಲೆ ಮಾಡಲಾಗಿದೆ. ಈ ಪ್ರಕರಣದ ಸೂತ್ರಧಾರ ಬಾಲಕಿಯೇ ಆಗಿದ್ದಾಳೆ. ಈ ಯುವತಿಗಿನ್ನೂ 17 ವರ್ಷವಾಗಿದ್ದು, ಇನ್ನೂ ಜೈಲಿನಲ್ಲಿದ್ದಾಳೆ.
ಅರೆಸ್ಟ್ ಆದವರು ಯಾರು?
- ಶಶಾಂಕ್ – ಆರೋಪಿಯ ತಂದೆ ವಕೀಲ
- ಸಲ್ಮಾನ್ – ಬಗಲಗುಂಟೆ ನಿವಾಸಿ
- ಯಶ್ವಂತ್ – ಸಪ್ತಗಿರಿ ಕಾಲೇಜು ವಿದ್ಯಾರ್ಥಿ (ಸಸ್ಪೆಂಡ್ ಆಗಿರುವವನು)
- ತೇಜಸ್, ರಾಕೇಶ್, ರಾಹುಲ್, ಹೇಮಂತ್ – ವಿದ್ಯಾರ್ಥಿಗಳು
- ಶಿವಶಂಕರ್ – ಸ್ಥಳೀಯ ನಿವಾಸಿ
- ಹೇಮಂತ್ ಈಗಾಗಲೇ ಮೂರು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದೆ. 8 ಆರೋಪಿಗಳಿಗೆ ಜಾಮೀನು ದೊರೆತಿದ್ದು, ಬಾಲಕಿ ಮಾತ್ರ ಇನ್ನೂ ಜೈಲಿನಲ್ಲಿದ್ದಾರೆ.
- ಪೊಲೀಸರಿಂದ ಮುಂದಿನ ಕ್ರಮಕ್ಕೆ ತಯಾರಿ
ಪೊಲೀಸರು ಪ್ರಕರಣದ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಗಂಭೀರ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ. ಹಲ್ಲೆಗೊಳಗಾದ ಕುಶಾಲ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೀತಿ ಎನ್ನುವುದು ಆತ್ಮೀಯ ಸಂಬಂಧವಾಗಿರಬೇಕು. ಆದರೆ, ಕೆಲವು ವಿಕೃತ ಮನಸ್ಸುಗಳು ಅದನ್ನು ಹಿಂಸೆಯ ಅಸ್ತ್ರವಾಗಿ ಬಳಸಿದಾಗ ಅದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
