ಆರ್‌ಸಿಬಿ ಕಮರ್ಷಿಯಲ್ ಒಪ್ಪಂದ ನವೀಕರಿಸಲು ಕೊಹ್ಲಿ ನಕಾರ, IPLಗೆ ವಿದಾಯ ಹೇಳ್ತಾರ ಲೆಜೆಂಡ್? ಇದೀಗ ಈ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾಂಟ್ರಾಕ್ಟ್ ನವೀಕರಣದಲ್ಲಿ ಆಗಿರುವ ಮಾತುಕತೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಒಪ್ಪಂದ ನಿರಾಕರಿಸಿದ್ದೇಕೆ?
ಬೆಂಗಳೂರು (ಅ.13) ಟೀಂ ಇಂಡಿಯಾದ ಪ್ರತಿ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೂರ ಸರಿಯುತ್ತಿದ್ದಂತೆ ಬೇಸರಗೊಂಡಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರ ನೋಡಬಹುದು ಅನ್ನೋ ಸಮಾಧಾನ ಹಲವರಲ್ಲಿತ್ತು. ಇದೀಗ ಕೆಲ ಮಾಧ್ಯಮಗಳ ವರದಿ ಪ್ರಕಾರ, ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಕಮರ್ಷಿಯಲ್ ಒಪ್ಪಂದ ನವೀಕರಿಸಲು ನಿರಾಕರಿಸಿದ್ದಾರೆ ಎಂದು ಪ್ರಕಟಗೊಂಡಿದೆ. ಇತ್ತ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ವಿರಾಟ್ ಕೊಹ್ಲಿ ಕಾಂಟ್ರಾಕ್ಟ್ ನವೀಕರಿಸಲು ಒಪ್ಪಿಲ್ಲ
ಆಕಾಶ್ ಚೋಪ್ರಾ ಮಹತ್ವದ ಮಾಹಿತಿ ನೀಡಿದ್ದಾರೆ. ವರದಿ ಪ್ರಕಾರ ವಿರಾಟ್ ಕೊಹ್ಲಿ ಆರ್‌ಸಿಬಿ ಕಮರ್ಷಿಯಲ್ ಒಪ್ಪಂದ ನವೀಕರಿಸಲು ನಿರಾಕರಿಸಿದ್ದಾರೆ. ಆದರೆ ಆರ್‌ಸಿಬಿ ಒಪ್ಪಂದ ನವೀಕರಿಸುವ ಕುರಿತು ಅಲ್ಲ. ಇದು ಕೇವಲ ಪ್ರಾಯೋಜಕತ್ವ, ಜಾಹೀರಾತು ಸೇರಿದಂತೆ ಇತರ ಕಮರ್ಷಿಯಲ್ ಒಪ್ಪಂದಕ್ಕೆ ನವೀಕರಿಸಲು ನಿರಾಕರಿಸಿದ್ದಾರೆ. ಕೊಹ್ಲಿ ಆರ್‌ಸಿಬಿಯಲ್ಲೇ ಇರಲಿದ್ದಾರೆ ಎಂದು ಅಕಾಶ್ ಚೋಪ್ರ ಹೇಳಿದ್ದಾರೆ.
ಡ್ಯುಯೆಲ್ ಕಾಂಟ್ರಾಕ್ಟ್
ಅಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ಆರ್‌ಸಿಬಿ ಬಿಟ್ಟು ಹೋಗಲ್ಲ. ಈ ಕುರಿತು ಗೊಂದಲ ಬೇಡ ಎಂದು ಅಕಾಶ್ ಚೋಪ್ರ ಹೇಳಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಡ್ಯುಯೆಲ್ ಕಾಂಟ್ರಾಕ್ಟ್ ಇದೆ. ಇತರ ಆಟಗಾರರಿಗಿಲ್ಲದ ಕಾಂಟ್ರಾಕ್ಟ್ ಕೊಹ್ಲಿಗಿದೆ. ವಿರಾಟ್ ಕೊಹ್ಲಿ ಕಮರ್ಷಿಯಲ್ ಕಾಂಟ್ರಾಕ್ಟ್ ಹಾಗೂ ಫ್ರಾಂಚೈಸಿ ಕಾಂಟ್ರಾಕ್ಟ್ ಎರಡೂ ಒಪ್ಪಂದವಿದೆ. ಈ ಪೈಕಿ ಕಮರ್ಷಿಯಲ್ ಒಪ್ಪಂದ ಮಾತ್ರ ನಿರಾಕರಿಸಿದ್ದಾರೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.
2008ರಿಂದ ಆರ್‌ಸಿಬಿ ತಂಡದ ಪ್ಲೇಯರ್
2008ರಿಂದ ಅಂದರೆ ಐಪಿಎಲ್ ಟೂರ್ನಿ ಆರಂಭದಿಂದಲೇ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿತ್ತು. ಎಲ್ಲಾ ಆಟಗಾರರು ಬೇರೆ ಬೇರೆ ತಂಡ ಸೇರಿಕೊಂಡರೂ ವಿರಾಟ್ ಕೊಹ್ಲಿ ಮಾತ್ರ ಆರ್‌ಸಿಬಿಯಲ್ಲೇ ಉಳಿದುಕೊಂಡಿದ್ದರು. ಆರ್‌ಸಿಬಿ 2025ರ ಆವೃತ್ತಿಯಲ್ಲಿ ಮೊದಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಟ್ರೋಫಿ ಸವಿ ಕಂಡಿದ್ದರು. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಬೇರೆ ತಂಡ ತಂಡಕ್ಕೆ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
