ಟೀಂ ಇಂಡಿಯಾ ಜರ್ಸಿ ಮೇಲೆ ಹಲವು ಕಂಪನಿಗಳು ಪ್ರಾಯೋಜಕತ್ವ ನೀಡಿದೆ. ಸಾವಿರಾರು ಕೋಟಿ ರೂಪಾಯಿ ಬಿಸಿಸಿಐಗೆ ಪಾವತಿಸಿ ಸ್ಪಾನ್ಸರ್‌ಶಿಪ್ ನೀಡುತ್ತದೆ. ಆದರೆ ಕಳೆದ 25 ವರ್ಷದಿಂದ ಟೀಂ ಇಂಡಿಯಾದ ಜರ್ಸಿ ಮೇಲೆ ಪ್ರಾಯೋಜಕತ್ವ ನೀಡಿದ ಕಂಪನಿಗಳು ಸಂಕಷ್ಟಕ್ಕೆ ಸಿಲುಕುತ್ತಿದೆ.
ಮುಂಬೈ (ಆ.22) ಬಿಸಿಸಿಐ ವಿಶ್ವದ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದ್ದರೆ, ಟೀಂ ಇಂಡಿಯಾ ಶ್ರೀಮಂತ ಕ್ರಿಕೆಟ್ ತಂಡ. ಟೀಂ ಇಂಡಿಯಾ ಹಲವು ರೀತಿಯಲ್ಲಿ, ಹಲವು ಮೂಲಗಳಿಂದ ಪ್ರಾಯೋಜಕತ್ವ ಪಡೆಯುತ್ತದೆ. ಪೈಕಿ ಸಾವಿರಾರು ಕೋಟಿ ರೂಪಾಯಿ ಪಾವತಿಸಿ ಟೀಂ ಇಂಡಿಯಾ ಜರ್ಸಿ ಮೇಲೆ ಸ್ಪಾನ್ಸರ್‌ಶಿಪ್ ಪಡೆಯುತ್ತದೆ. ಆದರೆ ಹೀಗೆ ಕಳೆದ 25 ವರ್ಷಗಳಿಂದ ಟೀಂ ಇಂಡಿಯಾಗೆ ಸ್ಪಾನ್ಸರ್‌ಶಿಪ್ ನೀಡಿದ (ಜರ್ಸಿ ) ಪ್ರಮುಖ ಕಂಪನಿಗಳು ಸಂಕಷ್ಟಕ್ಕೆ ಸಿಲುಕುತ್ತಿದೆ. ಬಹುತೇಕ ಕಂಪನಿಗಳು ಮುಳುಗಡೆಯಾಗಿದೆ. ಇದೀಗ ಕೇಂದ್ರ ಸರ್ಕಾರ ತಂದಿರುವ ಹೊಸ ಆನ್‌ಲೈನ್ ಗೇಮಿಂಗ್ ಬಿಲ್ ಕಾರಣದಿಂದ ಡ್ರೀಮ್ ಇಲೆವೆನ್ ಕೂಡ ಸಂಕಷ್ಟದಲ್ಲಿದೆ.
ಸಾವಿರಾರು ಕೋಟಿ ರೂ ಪಾವತಿಸಿ ಹೇಳ ಹೆಸರಿಲ್ಲದಂತೆ ಮಾಯ
2001ರಿಂದ 2025ರ ವರೆಗೂ ಟೀಂ ಇಂಡಿಯಾಗೆ ಯಾರೆಲ್ಲಾ ಸಾವಿರಾರು ಕೋಟಿ ರೂಪಾಯಿ ಪಾವತಿಸಿ ಸ್ಪಾನ್ಸರ್‌ಶಿಪ್ ಪಡೆದಿದ್ದಾರೋ ಅವರೆಲ್ಲಾ ಮಕಾಡೆ ಮಲಗಿದ್ದಾರೆ. ಹಲವು ಕಂಪನಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದರೆ, ಮತ್ತೆ ಕೆಲವು ಕಂಪನಿಗಳು ಸಂಕಷ್ಟದಿಂದ ಪಾರಾಗಲು ಮಾರಾಟವಾಗಿದೆ. ಕೇಂದ್ರ ಸರ್ಕಾರ ಹಣದ ಮೂಲಕ ನಡೆಯುವ ಗೇಮಿಂಗ್ ನಿಷೇಧಿಸಿ ಹೊಸ ಮಸೂದೆ ತಂದಿದೆ. ಇದರಿಂದ ಸದ್ಯ ಟೀಂ ಇಂಡಿಯಾ ಜರ್ಸಿ ಮೇಲೆ ದೊಡ್ಡದಾಗಿ ಕಾಣಿಸಿಕೊಂಡಿರುವ ಡ್ರೀಮ್ 11 ಗೇಮಿಂಗ್ ಕಂಪನಿಗೆ ತೀವ್ರ ಹೊಡೆತ ಬಿದ್ದಿದೆ. ಕಂಪನಿಯ ಬುಡವೇ ಅಲುಗಾಡುತ್ತಿದೆ.
ಸಹರಾ ಇಂಡಿಯಾ
ಸಹರಾ ಇಂಡಿಯಾ ಸುದೀರ್ಘ ವರ್ಷಗಳ ಕಾಲ ಟೀಂ ಇಂಡಿಯಾಗೆ ಸ್ಪಾನ್ಸರ್ ಆಗಿತ್ತು. ಸಹರಾ ಇಂಡಿಯಾ ಅನ್ನೋದೇ ಬ್ರ್ಯಾಂಡ್ ಆಗಿತ್ತು. ಹಲವರು ಟೀಂ ಇಂಡಿಯಾ ಹೆಸರೇ ಸಹರಾ ಇಂಡಿಯಾ ಎಂದು ಭಾವಿಸಿದ್ದರು. ಅಷ್ಟರ ಮಟ್ಟಿಗೆ ಸಹರಾ ಇಂಡಿಯಾ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ನೀಡಿತ್ತು. 2001ರಿಂದ 2013ರ ವರೆಗಗೆ ಸಹರಾ ಇಂಡಿಯಾ ಟೀಂ ಇಂಡಿಯಾ ಸ್ಪಾನ್ಸರ್‌ಶಿಪ್ ನೀಡಿತ್ತು. ನಿಯಮ ಉಲ್ಲಂಘನೆ, ಸಹರಾ ಚಿಟ್ ಫಂಡ್ ಅಕ್ರಮ, ಸೆಬೆಯಿಂದ ವಾರ್ನಿಂಗ್ ಸೇರಿದಂತೆ ಹಲವು ಕಾರಣಗಳಿಂದ ಸಹರಾ ಇಂಡಿಯಾ ಕಂಪನಿ ಬೀಗ ಹಾಕಿತ್ತು. ಮುಖ್ಯಸ್ಥ ಸುಬ್ರತೋ ರಾಯ್ ಜೈಲು ಪಾಲಾದರು.
ಸ್ಟಾರ್ ಇಂಡಿಯಾ
ಸ್ಟಾರ್ ಇಂಡಿಯಾ ಕ್ರೀಡಾ ನೇರಪ್ರಸಾರ ಮಾಧ್ಯಮ ಏಷ್ಯಾದಲ್ಲೇ ಅತೀ ದೊಡ್ಡ ಬ್ರಾಡ್‌ಕಾಸ್ಟರ್ ಆಗಿ ಬೆಳೆದು ನಿಂತಿತ್ತು. ಎಂಎಸ್ ಧೋನಿ, ವಿರಾಟ್ ಕೊಹ್ಲಿ ತಮ್ಮ ಕರಿಯರ್‌ನಲ್ಲಿ ಉತ್ತುಂಗದಲ್ಲಿದ್ದಾಗ, ಸ್ಟಾರ್ ಇಂಡಿಯಾ, ಟೀಂ ಇಂಡಿಯಾ ಜರ್ಸಿ ಮೂಲಕ ಸ್ಪಾನ್ಸರ್‌ಶಿಪ್ ನೀಡಿತ್ತು. ಇದರ ಬೆನ್ನಲ್ಲೇ ಸ್ಟಾರ್ ಇಂಡಿಯಾದಲ್ಲಿನ ಆತಂರಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಸ್ಟಾರ್ ಇಂಡಿಯಾವನ್ನು ವಾಲ್ಟ್ ಡಿಸ್ನಿ ಸಂಸ್ಥೆ ಖರೀದಿಸಿತ್ತು.
ಒಪ್ಪೋ
ಸ್ಟಾರ್ ಇಂಡಿಯಾ ಬಳಿಕ ಬರೋಬ್ಬರಿ 1079 ಕೋಟಿ ರೂಪಾಯಿಗೆ ಒಪ್ಪೊ ಮೊಬೈಲ್ ಟೀಂ ಇಂಡಿಯಾ ಸ್ಪಾನ್ಸರ್‌ಶಿಪ್ ಮೂಲಕ ಹೊಸ ಅಧ್ಯಾಯ ಆರಂಭಿಸಿತ್ತು. ಒಪ್ಪೋ ಭಾರತೀಯ ಕ್ರಿಕೆಟ್‌ನ ಬಹುತೇಕ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿತ್ತು. ಒಂದೆಡೆ ಒಪ್ಪೋ ಆರ್ಥಿಕ ಸಂಕಷ್ಟ ಎದುರಿಸಲು ಆರಂಭಿಸಿದರೆ, ಮತ್ತೊಂದೆಡೆ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಅತಿಕ್ರಮ ಹಾಗೂ ಮಾರಾಮಾರಿಯಿಂದ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಚೀನಾ ವಸ್ತುಗಳ ಬಹಿಷ್ಕಾರ ಆರಂಭಗೊಂಡಿತ್ತು. ಹೀಗಾಗಿ ಚೀನಾ ಮೂಲದ ಒಪ್ಪೋ ಸ್ಪಾನ್ಸರ್‌ಶಿಪ್ ಅಂತ್ಯಗೊಂಡಿತು.
ಬೈಜುಸ್
ಓಪ್ಪೋ ಬೆನ್ನಲ್ಲೇ ಭಾರತದಲ್ಲೇ ಕ್ರಾಂತಿ ಮಾಡಿದ ಬೈಜೂ ಆನ್‌ಲೈನ್ ಶಿಕ್ಷಣ ಸಂಸ್ಥೆ ಟೀಂ ಇಂಡಿಯಾ ಸ್ಪಾನ್ಸರ್‌ಶಿಪ್ ವಹಿಸಿಕೊಂಡಿತು. 2020ರಲ್ಲಿ ಪ್ರಾಯೋಜಕತ್ವ ವಹಿಸಿಕೊಂಡ ಬೈಜೂಸ್ 2022ರಲ್ಲೇ ಸ್ಪಾನ್ಸ್‌ಶಿಪ್ ಅಂತ್ಯಗೊಳಿಸಿತ್ತು. ಕಂಪನಿ ಸಂಪೂರ್ಣ ಮುಳಗಿತ್ತು. ನೌಕರರಿಗೆ ವೇತನ ನೀಡದೇ, ಬೈಜೂಸ್ ರವೀಂದ್ರನ್ ತಮ್ಮ ಮನೆ ಸೇರಿದಂತೆ ಆಸ್ತಿ ಮಾರಾಟ ಮಾಡಬೇಕಾಯಿತು.
ಡ್ರೀಮ್ 11
2023ರಲ್ಲಿ ಆನ್‌ಲೈನ್ ಗೇಮಿಂಗ್ ಆ್ಯಪ್ ಡ್ರೀಮ್ 11 ಮೂರು ವರ್ಷಗಳ ಸ್ಪಾನ್ಸರ್‌ಶಿಪ್ ಒಪ್ಪಂದ ಮಾಡಿಕೊಂಡಿದೆ. ಡ್ರೀಮ್ 11 ಸ್ಪಾನ್ಸರ್‌ಶಿಪ್ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ತಂದಿರುವ ಆನ್‌ಲೈನ್ ಗೇಮಿಂಗ್ ಬಿಲ್‌ನಿಂದ ಡ್ರೀಮ್ 11 ಕೂಡ ಸಂಕಷ್ಟದಲ್ಲಿದೆ. ಅರ್ಧಕ್ಕೆ ಡ್ರೀಮ್ 11 ಸ್ಪಾನ್ಸರ್‌ಶಿಪ್ ಅಂತ್ಯಗೊಳ್ಳುವ ಸಾಧ್ಯತೆ ಇದೆ.
