ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್, ಇದೀಗ ಭಾರತ 'ಎ' ತಂಡದ ನಾಯಕರಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಸರಣಿಗೆ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ಈ ಸರಣಿಯು ಅವರ ಪುನರಾಗಮನಕ್ಕೆ ಮಹತ್ವದ ವೇದಿಕೆಯಾಗಿದೆ.
ಮುಂಬೈ: ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್ ಅವರನ್ನು ಭಾರತ 'ಎ' ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ದ ಎರಡು ಪಂದ್ಯಗಳನ್ನಾಡಲಿದೆ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕ್ರಿಸ್ ವೋಕ್ಸ್ ಅವರ ಚೆಂಡು ಕಾಲಿಗೆ ಬಡಿದು ರಿಷಭ್ ಪಂತ್ ಗಾಯಗೊಂಡಿದ್ದರು. ನಂತರ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರು ಹೊರಗುಳಿದಿದ್ದರು.
ಕ್ರಿಕೆಟ್ ಮೈದಾನಕ್ಕಿಳಿಯಲು ರೆಡಿಯಾದ ರಿಷಭ್ ಪಂತ್
ಮೂರು ತಿಂಗಳ ವಿರಾಮದ ನಂತರ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಅಕ್ಟೋಬರ್ 25 ರಂದು ಆರಂಭವಾಗುವ ದೆಹಲಿ-ಹಿಮಾಚಲ ಪ್ರದೇಶ ನಡುವಿನ ರಣಜಿ ಪಂದ್ಯದ ಮೂಲಕ ರಿಷಭ್ ಪಂತ್ ವಾಪಸಾಗಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಸಾಯಿ ಸುದರ್ಶನ್ ಎ ತಂಡದ ಉಪನಾಯಕರಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಈ ನಾಲ್ಕು ದಿನಗಳ ಟೆಸ್ಟ್ ಸರಣಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ 13 ಸದಸ್ಯರ ತಂಡದಲ್ಲಿ ಎನ್ ಜಗದೀಶನ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಅಂಶುಲ್ ಕಾಂಬೋಜ್, ತನುಷ್ ಕೋಟ್ಯಾನ್ ಇದ್ದಾರೆ. ಎರಡನೇ ಪಂದ್ಯದ ತಂಡಕ್ಕೆ ಕೆಎಲ್ ರಾಹುಲ್, ಧ್ರುವ್ ಜುರೆಲ್, ಋತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮರಳಲಿದ್ದು, ಜಗದೀಶನ್, ಆಯುಷ್ ಮಾತ್ರೆ, ಪಾಟಿದಾರ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸಾರಾನ್ಶ್ ಜೈನ್ ಅವರನ್ನು ಕೈಬಿಡಲಾಗಿದೆ. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಪರಿಗಣಿಸಿದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಜುರೆಲ್ ಎರಡನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ರಿಷಭ್ ಪಂತ್, ಭಾರತ ‘ಎ’ ಪರ ಅದ್ಭುತ ಆಟವಾಡುವ ಮೂಲಕ ಭಾರತ ಟೆಸ್ಟ್ ತಂಡವನ್ನು ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡ
ರಿಷಭ್ ಪಂತ್ (ನಾಯಕ), ಆಯುಷ್ ಮಾತ್ರೆ, ಎನ್ ಜಗದೀಶನ್, ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸಾರಾನ್ಶ್ ಜೈನ್.
ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಭಾರತೀಯ ತಂಡ
ರಿಷಭ್ ಪಂತ್ (ನಾಯಕ), ಕೆಎಲ್ ರಾಹುಲ್, ಧ್ರುವ್ ಜುರೆಲ್, ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಹರ್ಷ್ ದುಬೆ, ತನುಷ್ ಕೋಡಿಯಾನ್, ಮಾನವ್ ಸುತಾರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
