ಐಪಿಎಲ್ ಗೆಲುವಿನ ಸಂಭ್ರಮದ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತ ಕಾಲ್ತುಳಿತದ ನೆನಪುಗಳನ್ನು ಹಂಚಿಕೊಂಡಿದೆ ಆರ್‌ಸಿಬಿ. ಮೂರು ತಿಂಗಳ ಮೌನ ಮುರಿದ ಫ್ರಾಂಚೈಸಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದು 'ಆರ್‌ಸಿಬಿ ಕೇರ್ಸ್' ಎಂಬ ಹೊಸ ಉಪಕ್ರಮವನ್ನು ಪ್ರಕಟಿಸಿದೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಆ ಖುಷಿ ಹೆಚ್ಚು ಹೊತ್ತು ಉಳಿಯಲೇ ಇಲ್ಲ. ಜೂನ್ 03ರಂದು ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮರುದಿನವೇ ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ ಹಿಂದೆಂದೂ ಕಂಡೂ-ಕೇಳರಿಯದ ದುರಂತ ಸಂಭವಿಸಿತು. ಈ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದರೆ, 56 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ಸಂಬಂಧ ಕರ್ನಾಟಕ ಸರ್ಕಾರ ಹಾಗೂ ಆರ್‌ಸಿಬಿ ಫ್ರಾಂಚೈಸಿ ಕೂಡಾ ಮೃತರ ಕುಟುಂಬಕ್ಕೆ ಧನಸಹಾಯ ಮಾಡಿತು. ಇದರ ಜತೆಗೆ ಗಾಯಗೊಂಡವರ ಚಿಕಿತ್ಸೆಯ ಖರ್ಚುವೆಚ್ಚವನ್ನು ಭರಿಸಿತು. ಈ ಕಾಲ್ತುಳಿತ ಸಂಭವಿಸಿ ಸುಮಾರು ಮೂರು ತಿಂಗಳ ಬಳಿಕ ಅಭಿಮಾನಿಗಳಿಗೆ ಆರ್‌ಸಿಬಿ ಫ್ರಾಂಚೈಸಿ ಭಾವನಾತ್ಮಕ ಪತ್ರ ಬರೆದಿದೆ.
ಆರ್‌ಸಿಬಿ ಫ್ರಾಂಚೈಸಿಯು ಅಭಿಮಾನಿಗಳಿಗೆ ಬರೆದ ಪತ್ರ ಹೀಗಿದೆ ನೋಡಿ.
ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳ ಕಾಲ ಕಳೆದಿದೆ.
ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿತು.
ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ದೆಯಿಂದ ತುಂಬಿದ ಶಾಂತ ಶ್ರದ್ದಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ದೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದೆವು. ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ.
ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಭೆ. ಆರ್‌ಸಿಬಿ ಕೇರ್ಸ್: ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಎಂದು ಆರ್‌ಸಿಬಿ ಫ್ರಾಂಚೈಸಿಗಳಿಗೆ ಪತ್ರ ಬರೆದಿದೆ.
ಕಪ್ ಗೆದ್ದು ಸಂಭ್ರಮದಲ್ಲಿದ್ದ ಆರ್‌ಸಿಬಿಗೆ ಸೂತಕದ ಛಾಯೆ: ಹೌದು, 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನದ ಮೂಲಕವೇ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ತಂಡವು, ಪ್ರಶಸ್ತಿ ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸಿ ಕೊನೆಗೂ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ಸೇರಿದಂತೆ ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಇನ್ನು ತರಾತುರಿಯಲ್ಲಿ ಮರುದಿನವೇ ಆರ್‌ಸಿಬಿ ಫ್ರಾಂಚೈಸಿಯು ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ರೋಡ್ ಶೋ ಮಾಡಲು ತೀರ್ಮಾನಿಸಿತ್ತು. ಆದರೆ ರೋಡ್ ಶೋಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಇನ್ನು ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವು ಅಭಿಮಾನಿಗಳ ಜತೆ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಿತ್ತು. ಇನ್ನು ಅಭಿಮಾನಿಗಳಿಗೆ ಮಾಹಿತಿಯ ಕೊರತೆ ಹಾಗೂ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಸ್ಟೇಡಿಯಂ ಬಳಿ ಕಿಕ್ಕಿರಿದು ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಕೊನೆಯುಸಿರೆಳೆದಿದ್ದರು. ಆರ್‌ಸಿಬಿ ಸಂಭ್ರಮಾಚರಣೆ ಒಂದು ದಿನಕ್ಕೆ ಸೂತಕದ ಮನೆಯಾಗಿ ಬದಲಾಗಿದ್ದು ಮಾತ್ರ ದುರಂತ.
