ಮಳೆ ಅಡ್ಡಿಪಡಿಸಿದ ಫೈನಲ್‌ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ ಮಂಗಳೂರು ಡ್ರ್ಯಾಗನ್ಸ್‌ 14 ರನ್‌ಗಳ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.  

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸಿದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಗುರುವಾರ ನಡೆದ ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಮಂಗಳೂರು ತಂಡ ವಿಜೆಡಿ ನಿಯಮದನ್ವಯ 14 ರನ್‌ಗಳಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಹುಬ್ಬಳ್ಳಿಯ 2ನೇ ಟ್ರೋಫಿ ಕನಸು ಭಗ್ನಗೊಂಡರೆ, ಮಂಗಳೂರು ತಂಡ ಫೈನಲ್‌ಗೇರಿದ ಮೊದಲ ಪ್ರಯತ್ನದಲ್ಲೇ ಟ್ರೋಫಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 8 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಉತ್ತಮ ಆರಂಭ ಪಡೆದ ಹೊರತಾಗಿಯೂ ಹುಬ್ಬಳ್ಳಿಯ ರನ್‌ ವೇಗಕ್ಕೆ ಮಂಗಳೂರು ಬೌಲರ್ಸ್‌ ಕಡಿವಾಣ ಹಾಕಿದರು. ಮೊದಲ 2.3 ಓವರ್‌ಗಳಲ್ಲಿ 38 ರನ್‌ ಗಳಿಸಿದ್ದ ತಂಡ, ಪವರ್‌-ಪ್ಲೇ ಮುಕ್ತಾಯಕ್ಕೆ 52 ರನ್‌ ಬಾರಿಸಿತ್ತು. ಮೊಹಮ್ಮದ್‌ ತಾಹ 15 ಎಸೆತಕ್ಕೆ 27 ರನ್‌ ಗಳಿಸಿದರೆ, ಕೃಷ್ಣನ್‌ ಶ್ರೀಜಿತ್‌ 45 ಎಸೆತಗಳಲ್ಲಿ 52 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಅಭಿನವ್‌ ಮನೋಹರ್‌(17), ನಾಯಕ ದೇವದತ್‌ ಪಡಿಕ್ಕಲ್‌(10) ಮಿಂಚಲಿಲ್ಲ. ಮಂಗಳೂರು ಪರ ಸಚಿನ್ ಶಿಂಧೆ 28 ರನ್‌ಗೆ 3 ವಿಕೆಟ್ ಕಿತ್ತರು.

Scroll to load tweet…

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮಂಗಳೂರು, 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 85 ರನ್‌ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಗಂಟೆಗಳ ಕಾಲ ಮಳೆ ಸುರಿದ ಕಾರಣ ಪಂದ್ಯ ಪುನಾರಂಭ ಸಾಧ್ಯವಾಗಲಿಲ್ಲ. ವಿಜೆಡಿ ನಿಯಮದನ್ವಯ ಮಂಗಳೂರು 14 ರನ್‌ಗಳಿಂದ ಮುಂದಿದ್ದ ಕಾರಣ, ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ತಂಡದ ಪರ ಶರತ್‌ ಬಿ.ಆರ್‌. 35 ಎಸೆತಗಳಲ್ಲಿ 59 ರನ್‌ ಗಳಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹುಬ್ಬಳ್ಳಿಯ ರಿತೇಶ್‌ ಭಟ್ಕಳ್‌ 14 ರನ್‌ಗೆ 2 ವಿಕೆಟ್‌ ಕಿತ್ತರು.

ಮಹಾರಾಜ ವಿಜೇತರು

ವರ್ಷ ಚಾಂಪಿಯನ್‌ ರನ್ನರ್‌-ಅಪ್‌

2022 ಗುಲ್ಬರ್ಗ ಬೆಂಗಳೂರು

2023 ಹುಬ್ಬಳ್ಳಿ ಮೈಸೂರು

2024 ಮೈಸೂರು ಬೆಂಗಳೂರು

2025 ಮಂಗಳೂರು ಹುಬ್ಬಳ್ಳಿ

ಸತತ 5 ದಿನವೂ ಆಡಿ ಕಪ್ ಗೆದ್ದ ಮಂಗಳೂರು

ಟೂರ್ನಿಯಲ್ಲಿ 6 ತಂಡಗಳಿದ್ದು, ಪ್ರತಿದಿನ 2 ಪಂದ್ಯ ನಡೆಯುತ್ತಿದ್ದವು. ಹೀಗಾಗಿ ಬಹುತೇಕ ತಂಡಗಳಿಗೆ ವಿಶ್ರಾಂತಿ ಇರುತ್ತಿರಲಿಲ್ಲ. ಈ ಪೈಕಿ ಮಂಗಳೂರು ತಂಡವಂತೂ ಕಳೆದ 5 ದಿನಗಳಲ್ಲಿ ಸತತವಾಗಿ ಆಡಿದೆ. ಆ.24, 25ಕ್ಕೆ ಲೀಗ್‌ ಹಂತ ಆಡಿದ್ದ ತಂಡ, 26ರಂದು ಕ್ವಾಲಿಫೈಯರ್‌-1, 27ರಂದು ಎಲಿಮಿನೇಟರ್‌, 28ಕ್ಕೆ ಫೈನಲ್‌ ಆಡಿದೆ.

ದಾನಿಶ್‌ 198, ರಜತ್‌ 125 ರನ್‌, ಕೇಂದ್ರ ಟೀಂ 432/2

ಬೆಂಗಳೂರು: ದುಲೀಪ್‌ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ದಾನಿಶ್‌ ಮಲೇವಾರ್‌ ಹಾಗೂ ನಾಯಕ ರಜತ್‌ ಪಾಟೀದಾರ್‌ ಭರ್ಜರಿ ಶತಕದ ನೆರವಿನಿಂದ ಈಶಾನ್ಯ ವಲಯ ವಿರುದ್ಧ ಕೇಂದ್ರ ವಲಯ ಬೃಹತ್‌ ಮೊತ್ತ ಕಲೆಹಾಕಿದೆ. ತಂಡ ಮೊದಲ ದಿನವೇ 2 ವಿಕೆಟ್‌ಗೆ 432 ರನ್‌ ಗಳಿಸಿದೆ.

ಆರಂಭಿಕ ಆಟಗಾರ ಆರ್ಯನ್‌ ಜುಯಲ್ 60 ರನ್‌ ಗಳಿಸಿ ರಿಟೈರ್ಟ್ ಹರ್ಟ್‌ ಆದ ಬಳಿಕ 2ನೇ ವಿಕೆಟ್‌ಗೆ ರಜತ್‌-ದಾನಿಶ್‌ 199 ರನ್‌ ಜೊತೆಯಾಟವಾಡಿದರು. ರಜತ್‌ 96 ಎಸೆತಗಳಲ್ಲಿ 125 ರನ್‌ ಗಳಿಸಿ ಔಟಾಗಿದ್ದು, ದಾನಿಶ್‌ 219 ಎಸೆತಗಳಲ್ಲಿ 198 ರನ್‌ ಸಿಡಿಸಿ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಯಶ್‌ ರಾಥೋಡ್‌(37) ಕೂಡಾ ಕ್ರೀಸ್‌ನಲ್ಲಿದ್ದಾರೆ.

ಉತ್ತರ ವಲಯ ಮೇಲುಗೈ:

ಮತ್ತೊಂದು ಪಂದ್ಯದಲ್ಲಿ ಪೂರ್ವ ವಲಯ ವಿರುದ್ಧ ಉತ್ತರ ವಲಯ ಮೊದಲ ದಿನ 6 ವಿಕೆಟ್‌ಗೆ 308 ರನ್‌ ಗಳಿಸಿದೆ. ಆಯುಶ್‌ ಬದೋನಿ 63, ನಿಶಾಂತ್‌ ಸಿಂಧು 47, ಕನ್ಹಯ್ಯ ಔಟಾಗದೆ 42, ಯಶ್‌ ಧುಳ್ 39 ರನ್‌ ಗಳಿಸಿದರು. ಮೊಹಮ್ಮದ್‌ ಶಮಿ 17 ಓವರಲ್ಲಿ 55 ರನ್‌ಗೆ 1 ವಿಕೆಟ್‌ ಕಿತ್ತರು.