2024-25ನೇ ಸಾಲಿನ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಯಾಂಕ್ ಅಗರ್‌ವಾಲ್, ಅವರೊಂದಿಗೆ ಕಿರಿಯರ ವಿಭಾಗದಲ್ಲಿ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಕೂಡ ಪ್ರಶಸ್ತಿ ಸ್ವೀಕರಿಸಿದರು.
ಬೆಂಗಳೂರು: 2024-25ನೇ ಸಾಲಿನಲ್ಲಿ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ, ಗರಿಷ್ಠ ರನ್ ಹಾಗೂ ವಿಕೆಟ್ ಸಾಧನೆ ಮಾಡಿದ ಕ್ರಿಕೆಟಿಗರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಭಾನುವಾರ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ್ದಕ್ಕೆ ಮಯಾಂಕ್ ಅಗರ್‌ವಾಲ್, ಅತಿಹೆಚ್ಚು ವಿಕೆಟ್ ಕಬಳಿಸಿದ್ದಕ್ಕೆ ವಾಸುಕಿ ಕೌಶಿಕ್‌ರನ್ನು ಗೌರವಿಸಲಾಯಿತು.
ರಣಜಿ ಟ್ರೋಫಿಯ ಗರಿಷ್ಠ ರನ್ ಸರದಾರ ಆರ್.ಸ್ಮರಣ್, ಗರಿಷ್ಠ ವಿಕೆಟ್ ಪಡೆದ ಕೌಶಿಕ್, ಮುಸ್ತಾಕ್ ಅಲಿ ಟಿ20 ಟೂರ್ನಿಯ ಗರಿಷ್ಠ ರನ್ ಸರದಾರ ಕೆ.ಎಲ್.ಶ್ರೀಜಿತ್, ಗರಿಷ್ಠ ವಿಕೆಟ್ ಕಬಳಿಸಿದ ಶ್ರೇಯಸ್ ಗೋಪಾಲ್ ಪ್ರಶಸ್ತಿ ದೊರೆಯಿತು. ಇನ್ನು ಅಂಡರ್ -16 ಬಾಲಕರ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್‌ಗೆ ಕಿರಿಯರ ವಿಭಾಗದಲ್ಲಿ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ ಸಿಕ್ಕಿತು.
ಅಂಡರ್-19 ವಿಶ್ವಕಪ್ ವಿಜೇತರಿಗೆ ₹2 ಲಕ್ಷ
ಈ ವರ್ಷ ಜನವರಿ-ಫೆಬ್ರವರಿಯಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್-19 ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿಯಾಗಿದ್ದ ರಾಜ್ಯದ ನಿಕಿ ಪ್ರಸಾದ್, ಬ್ಯಾಟರ್ ಮಿಥಿಲಾ ವಿನೋದ್ ಹಾಗೂ ತಂಡದ ಪರ್ಫಾರ್ಮೆನ್ಸ್ ಅನಾಲಿಸ್ಟ್ ಮಾಲಾ ರಂಗಸ್ವಾಮಿ ಅವರಿಗೆ ತಲಾ 2 ಲಕ್ಷ ರುಪಾಯಿ ನೀಡಿ ಗೌರವಿಸಲಾಯಿತು.
ಇರಾನಿ ಕಪ್ ಗೆದ್ದ ವಿದರ್ಭ
ನಾಗುರ: ಹಾಲಿ ರಣಜಿ ಚಾಂಪಿಯನ್ ವಿದರ್ಭ, ಇರಾನಿ ಕಪ್ ನಲ್ಲೂ ಚಾಂಪಿಯನ್ ಆಗಿದೆ. ಗೆಲ್ಲಲು 361 ರನ್ ಗುರಿ ಬೆನ್ನತ್ತಿದ್ದ ಶೇಷ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 267 ರನ್‌ಗೆ ಆಲೌಟ್ ಆಯಿತು. ಯಶ್ ಧುಳ್ 92 ರನ್ ಗಳಿಸಿ ಹೋರಾಟ ಪ್ರದರ್ಶಿಸಿದರೂ, ವಿದರ್ಭ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಇದರೊಂದಿಗೆ ವಿದರ್ಭ ಈ ವರೆಗೂ 3 ಬಾರಿ ಇರಾನಿ ಕಪ್ ನಲ್ಲಿ ಆಡಿದ್ದು, ಮೂರೂ ಬಾರಿಯೂ ಚಾಂಪಿಯನ್ ಆಗಿದೆ. ವಿದರ್ಭ ಪರ ಎಡಗೈ ಸ್ಪಿನ್ನರ್ ಹರ್ಷ ದುಬೆ 73ಕ್ಕೆ 4, ವೇಗಿ ಯಶ್ ಠಾಕೂರ್ 47ಕ್ಕೆ 2 ವಿಕೆಟ್ ಕಬಳಿಸಿದರು. ಅ.15ರಿಂದ 2025-260 ರಣಜಿ ಟ್ರೋಫಿ ಆರಂಭಗೊಳ್ಳಲಿದೆ.
ಸ್ಕೋರ್: ವಿದರ್ಭ
342 ಹಾಗೂ 232
ಶೇಷ ಭಾರತ 214 ಹಾಗೂ 267
ಭಾರತ 'ಎ'ಗೆ ಸರಣಿ ಜಯ
ಕಾನ್ಪುರ: ಆಸ್ಟ್ರೇಲಿಯಾ 'ಎ' ವಿರುದ್ದದ 3 ಪಂದ್ಯಗಳ ಅನಧಿಕೃತ ಏಕದಿನ ಸರಣಿಯನ್ನು ಭಾರತ 'ಎ' 2-1 ಅಂತರದಲ್ಲಿ ಗೆದ್ದಿದೆ. ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ 'ಎ' ಎರಡು ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 'ಎ' ತಂಡವು 316 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ದೊಡ್ಡ ಮೊತ್ತ ಬೆನ್ನತ್ತಿದ ಭಾರತ 'ಎ' ತಂಡಕ್ಕೆ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸ್ಪೋಟಕ ಶತಕ ನೆರವಿಗೆ ಬಂದಿತು. ಪ್ರಭ್‌ಸಿಮ್ರನ್ 68 ಎಸೆತಗಳಲ್ಲಿ 102 ರನ್ ಚಚ್ಚಿದರು. ಶ್ರೇಯಸ್ ಅಯ್ಯರ್ ಹಾಗೂ ರಿಯಾನ್ ಪರಾಗ್ ತಲಾ 62 ರನ್ ಸಿಡಿಸಿದರು. ಪರಿಣಾಮ ಭಾರತ ಇನ್ನೂ 4 ಓವರ್ ಬಾಕಿ ಇರುವಂತೆಯೇ 8 ವಿಕೆಟ್‌ಗೆ 322 ರನ್ ಗಳಿಸಿ ಜಯಿಸಿತು. ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೂ ಮುನ್ನ ಉಪನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
